ಸುಬ್ರಹ್ಮಣ್ಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ರಾಷ್ಟ್ರೀಯ ತುರ್ತು ವಾಹನ ಸೇವೆ ನೀಡುತ್ತಿರುವ 108 ಆರೋಗ್ಯ ಕವಚ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಟ್ಟಿದೆ. ಹೀಗಾಗಿ ಕೆಲವು ದಿನಗಳಿಂದ ಸೇವೆ ಸ್ತಬ್ಧಗೊಂಡಿದ್ದು, ತುರ್ತು ಸಂದರ್ಭಕ್ಕೆ ಬೇಕಾದ ವಾಹನದ ದುರಸ್ತಿಗೆ ಮುಂದಾಗದೇ ಇರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ 108 ಆರೋಗ್ಯ ಕವಚದ ನಾಲ್ಕು ಚಕ್ರಗಳೂ ಸವೆದು ಹೋಗಿವೆ. ಚಕ್ರದ ನೂಲು, ತಂತಿಗಳು ಹೊರ ಭಾಗಕ್ಕೆ ಎದ್ದಿವೆ. ಶೀಘ್ರ ಹೊಸ ಚಕ್ರ ಅಳವಡಿಸುವ ಅಗತ್ಯ ಇದೆ. ಇಂತಹ ಪರಿಸ್ಥಿತಿಯಲ್ಲಿ ತೆರಳಿ ಅರ್ಧದಲ್ಲಿ ಬಾಕಿ ಯಾಗುವ ಸಾಧ್ಯತೆ ಇರುವುದರಿಂದ ವಾಹನ ನಿಲ್ಲಿಸಲಾಗಿದೆ ಎನ್ನಲಾಗಿದೆ.
10 ದಿನಗಳಿಂದ ಸ್ತಬ್ಧ ಕುಕ್ಕೆ ಸುಬ್ರಹ್ಮಣ್ಯ ಹೇಳಿ ಕೇಳಿ ಪ್ರಸಿದ್ಧ ಯಾತ್ರಾ ಕ್ಷೇತ್ರ. ಇಲ್ಲಿ ತುರ್ತು ವಾಹನಗಳ ಆವಶ್ಯತೆ ಹೆಚ್ಚಿರುತ್ತದೆ. ಆದರೆ ಜೂ. 19ರಿಂದ ವಾಹನವನ್ನು ಒಂದೆಡೆ ನಿಲ್ಲಿಸಲಾಗಿದ್ದು, ಇಷ್ಟು ದಿನಗಳಾದರೂ ಅದಕ್ಕೆ ಹೊಸ ಚಕ್ರ ಅಳವಡಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಸೂಕ್ತ ನಿರ್ವಹಣೆಯಲ್ಲಿರಬೇಕಾದ ತುರ್ತು ಸ್ಪಂದನ ವಾಹನಕ್ಕೆ ಸಂಕಷ್ಟ ಎದುರಾಗಿದ್ದರೂ ಸಂಬಂಧಿಸಿದವರು ಎಚ್ಚೆತ್ತಿಲ್ಲ. ಶೀಘ್ರ ದುರಸ್ತಿ ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆಯನ್ನೂ ನೀಡಿದ್ದಾರೆ. ಚಕ್ರ ಸವೆದಿರುವ ಬಗ್ಗೆ ಅಧಿಕಾರಿಗಳಿಗೆ ಆ್ಯಂಬುಲೆನ್ಸ್ ನಿರ್ವಾಹಕರು ಮಾಹಿತಿ ನೀಡಿದ್ದಾರೆ. ಆದರೆ ಈ ವರೆಗೆ ಪ್ರಯೋಜನ ಆಗಿಲ್ಲ.
ನಿರ್ವಹಣೆಗೆ ಹಣದ ಕೊರತೆ?
108 ಆ್ಯಂಬುಲೆನ್ಸ್‌ನ ನಿರ್ವಹಣೆಗೆ ಹಣದ ಕೊರತೆ ಇದೆಯಾ ಎಂಬ ಪ್ರಶ್ನೆ ಇದೀಗ ಎದ್ದಿದೆ. ವಾಹನ ನಿರ್ವ ಹಣೆಗೆ ಸೂಕ್ತ ಹಣ ಬಿಡುಗಡೆಗೊಳ್ಳುತ್ತಿಲ್ಲ ಎನ್ನಲಾಗಿದೆ. ಇದರಿಂದಾಗಿ ನಿಗದಿತ ಸಮಯದಲ್ಲಿ ವಾಹನದ ನಿರ್ವಹಣೆ ತೊಡಕಾಗಿದೆ ಎಂಬ ಆರೋಪವೂ ಇದೆ.
ದಯಾನಂದ ಕಲ್ನಾರ್