ಗುಂಡ್ಲುಪೇಟೆ (ಚಾಮರಾಜನಗರ): ಕೇರಳ ಲಾಟರಿಯನ್ನು ಅಕ್ರಮವಾಗಿ ಸಾಗಟ ಮಾಡುತ್ತಿದ್ದ ವೇಳೆ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿ ಲಾಟರಿ ಟಿಕೆಟ್ ಸಮೇತ ಮಹಿಳೆಯನ್ನು ಬಂಧಿಸಿರುವ ಘಟನೆ ಪಟ್ಟಣದ ಐಬಿ ಸರ್ಕಲ್ ಬಳಿ ನಡೆದಿದೆ.
ಯಳಂದೂರು ಪಟ್ಟಣದ ಲಕ್ಷ್ಮೀ ಬಂಧಿತ ಆರೋಪಿ.
ಈಕೆ ಕೇರಳದಿಂದ ಅಕ್ರಮವಾಗಿ 76 ಸಾವಿರ ರೂ. ಮೌಲ್ಯದ 1900 ಲಾಟರಿ ಟಿಕೆಟ್ ಕಂತೆಯನ್ನು ತೆಗೆದುಕೊಂಡು ಬರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸೆನ್ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ ಸೆನ್ ಪೊಲೀಸ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್, ಪೇದೆಗಳಾದ ರಾಜು, ಜಗದೀಶ್, ಮಂಜು, ರಮ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.
ಎಗ್ಗಿಲ್ಲದೆ ನಡೆಯುತ್ತಿದೆ ಲಾಟರಿ ಮಾರಾಟ: ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಪಟ್ಟಣದಾದ್ಯಂತ ಕೇರಳ ಲಾಟರಿ ಮಾರಾಟ ಅಕ್ರಮವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ರಾಜಾರೋಷವಾಗಿ ಅನೇಕ ಮಂದಿ ಲಾಟರಿ ಮಾರುತ್ತಿದ್ದರೂ ಸಹ ಪೊಲೀಸರು ಮಾತ್ರ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಕೆಲವು ಮಂದಿ ಲಾಟರಿ ಮಾರಾಟಗಾರರು ಪೊಲೀಸರೊಂದಿಗೆ ಶಾಮೀಲಾಗಿ ದಂಧೆಯಲ್ಲಿ ತೊಡಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.