ಸಾಗರ: ತಾಲೂಕಿನ ಕಾರ್ಗಲ್ ಸಮೀಪದ ಉರುಳುಗಲ್ಲು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆಗೆ ಸೇರಿದ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿದ ಮೂವರು ಯುವಕರನ್ನು ಬಂಧಿಸಲಾಗಿದೆ.
ಉದಯ ಕುಮಾರ್, ರಮೇಶ್ ಹಾಗೂ ಸಂತೋಷ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಉಳಿದ 7 ಜನರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಶರಾವತಿ ವನ್ಯಜೀವಿ ಅಭಯಾರಣ್ಯದ ಕಾರ್ಗಲ್ ವಲಯ ವ್ಯಾಪ್ತಿಯ ಉರುಳುಗಲ್ಲು ಗ್ರಾಮಕ್ಕೆ 10 ಲಕ್ಷ ರೂ. ವೆಚ್ಚದ ವಿದ್ಯುದ್ದೀಕರಣ ಯೋಜನೆ ಮಂಜೂರಾಗಿತ್ತು. ಆ ಯೋಜನೆ ಬೇಗ ಗ್ರಾಮಕ್ಕೆ ತಲುಪಲಿ ಎಂಬ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿನ ಮರಗಳನ್ನು 10 ಯುವಕರು ಕಡಿತಲೆ ಮಾಡಿದ್ದು, ಅವರವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಯುವಕರು 21 ಸಣ್ಣ ಕಾಡು ಜಾತಿ ಮರಗಳನ್ನು ತೆರವುಗೊಳಿಸಿದ್ದರು. ಕಾನೂನಿನ ಅರಿವಿಲ್ಲದೆ ಗ್ರಾಮಕ್ಕೆ ಒಳಿತು ಮಾಡಲು ಇಂತಹ ಕೃತ್ಯ ಎಸಗಿದ್ದಾರೆ. ಅವರನ್ನು ಬಂಧಿಸಬಾರದು ಎಂದು ಗ್ರಾಮಸ್ಥರು ಪ್ರತಿಭಟನೆಯನ್ನೂ ನಡೆಸಿದ್ದರು. ಏಕಾಏಕಿ ಮರಗಳ ಕಡಿತಲೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಲಯಾರಣ್ಯಾಧಿಕಾರಿ ಸಂಧ್ಯಾ ದೂರು ದಾಖಲಿಸಿದ್ದರು. ಯುವಕರಿಗೆ ಮಾನಸಿಕ, ದೈಹಿಕ ಹಿಂಸೆ ನೀಡುವ ಮೂಲಕ ಅಧಿಕಾರಿಗಳು ಕ್ರೌರ್ಯ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ: ನಾಲ್ಕಕ್ಕೇರಿದ ಪ್ರಕರಣಗಳ ಸಂಖ್ಯೆ
ಪ್ರಕರಣದಲ್ಲಿ ಅರಣ್ಯಾಧಿಕಾರಿ ಪ್ರಮೋದ್ ಎಂಬುವರು ವೈಯುಕ್ತಿಕವಾಗಿ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಯುವಕರನ್ನು ಅಪರಾಧಿಗಳಂತೆ ನಿಲ್ಲಿಸಿ ತೆಗೆದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುವ ಮೂಲಕ ವಿಕೃತಿ ಮೆರೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ತುಮರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಕರೂರು ಆರೋಪಿಸಿದ್ದಾರೆ.
ಯಾವುದೇ ಅನುಮತಿ ಪಡೆಯದೇ ಗ್ರಾಮಸ್ಥರು 31 ಮರಗಳನ್ನು ಕಡಿತಲೆ ಮಾಡಿದ್ದಾರೆ. ಕರ್ತವ್ಯ ನಿರತರಾಗಿದ್ದ ಅರಣ್ಯ ಪಾಲಕರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಆರೋಪಿಗಳನ್ನು ತೇಜೋವಧೆ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಛಾಯಾಚಿತ್ರಗಳನ್ನು ಹರಿಬಿಟ್ಟಿರುವ ವಿಷಯ ತಿಳಿದಿಲ್ಲ ಎಂದು ವಲಯ ಅರಣ್ಯಾಧಿಕಾರಿ ಸಂಧ್ಯಾ ಪ್ರತಿಪಾದಿಸಿದರು.