Advertisement

 “ಅಕ್ರಮ ಮತದಾನ’ದ ಬೂತ್‌ ಎತ್ತಂಗಡಿಗೆ ಒತ್ತಡ!

08:29 PM Mar 28, 2021 | Team Udayavani |

ಮಸ್ಕಿ: ಕಳೆದ ಬಾರಿ ಅಕ್ರಮ ಮತದಾನ ಚಲಾವಣೆಗೊಂಡಿದ್ದವು ಎನ್ನುವ ಆರೋಪ ಹೊತ್ತ ಮಸ್ಕಿಯ ಎರಡು ಬೂತ್‌ಗಳನ್ನು ಬೇರೆಡೆ ವರ್ಗಾಯಿಸಲು ಕಾಂಗ್ರೆಸ್‌ ಪಟ್ಟು ಹಿಡಿದಿದೆ. ಆದರೆ ಪ್ರಭಾವಕ್ಕೆ ಮಣಿದ ಜಿಲ್ಲಾಡಳಿತ ಈ ಬೂತ್‌ಗಳನ್ನು ಬದಲಾಯಿಸಲು ಮೀನಾಮೀಷ ಎಣಿಸುತ್ತಿದೆ.

Advertisement

ಮಸ್ಕಿ ಪಟ್ಟಣದಲ್ಲಿರುವ 88 ಮತ್ತು 89 ಈ ಎರಡು ಬೂತ್‌ಗಳೇ ಈಗ ಈ ವಿವಾದದ ಕೇಂದ್ರಿತ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ನಿವಾಸದಿಂದ ಕೇವಲ 10 ಮೀಟರ್‌ ಅಂತರದಲ್ಲಿಯೇ ಈ ಎರಡು ಮತದಾನ ಕೇಂದ್ರಗಳಿವೆ. ಇದೇ ಕಾರಣಕ್ಕೆ ಇಲ್ಲಿ ಪ್ರಭಾವ ಬೀರಲಾಗುತ್ತಿದೆ. ಕಳೆದ 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆ ಇಂತಹದ್ದೇ ಘಟನೆಗಳು ನಡೆದಿದ್ದವು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಪುತ್ರಿ ವಿದೇಶದಲ್ಲಿದ್ದರೂ ಅವರ ಹೆಸರಿನಲ್ಲಿ ಮತ ಚಲಾವಣೆಗೊಂಡಿತ್ತು.

ಇನ್ನು ಸತ್ತವರ ಹೆಸರಿನಲ್ಲೂ ಮತದಾನ ಮಾಡಲಾಗಿತ್ತು. ಊರಲ್ಲಿ ಇರದೇ ಇರುವವರು, ಬೋಗಸ್‌ ಮತದಾರರ ಹೆಸರಿನಲ್ಲೂ ಮತಗಳು ಚಲಾವಣೆಗೊಂಡಿದ್ದವು. ಹೀಗೆ ರಿಗ್ಗಿಂಗ್‌ ನಡೆದಿದೆ ಎನ್ನುವ ಆಪಾದನೆ ಮೇಲೆ ಆಗಿನ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆದಿದ್ದವು. ಮರು ಮತದಾನಕ್ಕೂ ಆಗ್ರಹಗಳಾಗಿದ್ದವು. ಕೊನೆಗೆ ರಾಜಿ ಸಂಧಾನ, ಪೊಲೀಸ್‌ ಅಧಿ ಕಾರಿಗಳ ಮನವೊಲಿಕೆ ಬಳಿಕ ಈ ಜಗಳ ನಿಂತಿತ್ತು. ಆದರೆ ಕೊನೆಗೆ ಚುನಾವಣೆ ಫಲಿತಾಂಶ ಬಂದ ಬಳಿಕ ಈ ಮತದಾನ ಕೇಂದ್ರದಲ್ಲಿ ನಡೆದ ಅಕ್ರಮದ ಕುರಿತು ಕೇಸ್‌ ಕೋರ್ಟ್‌ ಮೆಟ್ಟಿಲೇರಿತ್ತು.

ಚುನಾವಣೆ ವಿಳಂಬ: ಆಗಿನ ಬಿಜೆಪಿ ಅಭ್ಯರ್ಥಿ ಆಗಿದ್ದ ಆರ್‌.ಬಸನಗೌಡ ತುರುವಿಹಾಳ ಮತದಾನ ಕೇಂದ್ರ 88 ಮತ್ತು 89ರಲ್ಲಿ ಅಕ್ರಮ ಮತದಾನ ಮಾಡಲಾಗಿದೆ ಎನ್ನುವ ಸಾಕ್ಷಿ ಮತ್ತು ಆಧಾರ ಸಮೇತ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ದೂರು ದಾಖಲಿಸಿದ್ದರು. ಸುಮಾರು ಎರಡು ವರ್ಷ ಈ ಕೇಸ್‌ನ ವಿಚಾರಣೆ ನಡೆದಿತ್ತು. ಮಾಜಿ ಶಾಸಕ ಪ್ರತಾಪಗೌಡರ ಪುತ್ರಿ ಮತ್ತು ಹಲವು ಬೋಗಸ್‌ ಮತದಾರರ ಹೆಸರಿನಲ್ಲಿ ಮತದಾನದ ಕುರಿತು ನ್ಯಾಯಾಲಯದಲ್ಲಿ ಧ್ವನಿ ಎತ್ತಿದ್ದರು. ಇದೇ ಕಾರಣಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ರಾಜೀನಾಮೆ ಸಲ್ಲಿಸಿದ್ದರೂ ಇಲ್ಲಿನ ಕ್ಷೇತ್ರಕ್ಕೆ ಚುನಾವಣೆ ಶೀಘ್ರ ಘೋಷಣೆಯಾಗಿರಲಿಲ್ಲ. ಈ ಕೇಸ್‌ನ ವಿಚಾರಣೆ ನಡೆದಿರುವಾಗಲೇ ಸ್ವತಃ ದೂರುದಾರರಾದ ಆರ್‌. ಬಸನಗೌಡ ತುರುವಿಹಾಳ ಕೇಸ್‌ ವಾಪಸ್‌ ಪಡೆಯುವ ಬಗ್ಗೆ ಲಿಖೀತ ಒಪ್ಪಿಗೆಯನ್ನು ಕೋರ್ಟ್‌ಗೆ ನೀಡಿದ್ದರಿಂದ ಕೇಸ್‌ ಇತ್ಯರ್ಥವಾಗಿತ್ತು. ಈ ಕೇಸ್‌ ಇತ್ಯರ್ಥದ ಬಳಿಕವಷ್ಟೇ ಇತ್ತೀಚೆಗೆ ಉಪಚುನಾವಣೆ ಘೋಷಣೆಯಾಗಿದೆ.

ಮತ್ತೆ ಅಕ್ರಮದ ಭೀತಿ: ಈ ಹಿಂದೆ ಹೀಗೆ ಅಕ್ರಮ ಮತದಾನ ನಡೆದ ಈ ಎರಡು ಬೂತ್‌ಗಳಲ್ಲಿ ಮತ್ತೆ ನಕಲಿ ಮತಗಳ ಚಲಾವಣೆಯ ಭೀತಿ ಇದೆ ಎಂದು ಕಾಂಗ್ರೆಸ್‌ನ ಬ್ಲಾಕ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ ಆತಂಕ ವ್ಯಕ್ತಪಡಿಸಿ, ಈ ಎರಡು ಬೂತ್‌ಗಳನ್ನು ಬೇರೆಡೆ ವರ್ಗಾಯಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದಾರೆ. ಮಾಜಿ ಶಾಸಕರ ನಿವಾಸದಿಂದ ಕೇವಲ 10 ಮೀಟರ್‌ ಅಂತರದಲ್ಲಿಯೇ ಇರುವುದರಿಂದ ಇಲ್ಲಿ ಮತ್ತೆ ಬೋಗಸ್‌ ವೋಟ್‌ ನಡೆಯಲಿವೆ. ಹೀಗಾಗಿ ಇವುಗಳನ್ನು ಬೇರೆಡೆ ವರ್ಗಾಯಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದಾರೆ. ಆದರೆ ಇತ್ತೀಚೆಗೆ ಇಲ್ಲಿನ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವೆಂಕಟೇಶಕುಮಾರ್‌ ಈ ಬೂತ್‌ಗಳನ್ನು ಬದಲಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಬೇಕಿದ್ದರೆ ಹೆಚ್ಚಿನ ಬಂದೋಬಸ್ತ್, ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಆದರೆ ಈ ಬೂತ್‌ಗಳನ್ನು ಬದಲಾಯಿಸಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಆದರೆ ಈಗ ಕಾಂಗ್ರೆಸ್‌ ಪಕ್ಷದಿಂದ ಲಿಖೀತ ದೂರು ಸಲ್ಲಿಸಲಾಗಿದ್ದು, ಆಯೋಗ ಏನು ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.

Advertisement

ಮಲ್ಲಿಕಾರ್ಜುನ ಚಿಲ್ಕರಾಗಿ   

Advertisement

Udayavani is now on Telegram. Click here to join our channel and stay updated with the latest news.

Next