Advertisement

ಅಕ್ರಮ ಸಕ್ರಮ2 ವರ್ಷ ವಿಸ್ತರಣೆ

06:31 AM Dec 15, 2018 | |

ಸುವರ್ಣಸೌಧ (ವಿಧಾನಸಭೆ): ಅಕ್ರಮ ಸಕ್ರಮ ಹಾಗೂ ಬಗರ್‌ ಹುಕುಂ ಸಾಗುವಳಿದಾರರ ಅರ್ಜಿ ವಿಲೇವಾರಿಗೊಳಿಸಲು ಎರಡು ವರ್ಷ ಅವಧಿ ವಿಸ್ತರಣೆಗೆ ಶಾಸಕರ ಅಧ್ಯಕ್ಷತೆಯ ಸಮಿತಿ ರಚಿಸಲು 1964ರ ಭೂ ಕಂದಾಯ ವಿಧೇಯಕಕ್ಕೆ ವಿಧಾನಸಭೆಯಲ್ಲಿ
ಅಂಗೀಕಾರ ನೀಡಲಾಯಿತು. ಕಂದಾಯ ಸಚಿವ ಆರ್‌.ವಿ.ದೇಶ ಪಾಂಡೆ ಅನುಪಸ್ಥಿತಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ವಿಧೇಯಕದ ಅಗತ್ಯತೆ ಕುರಿತು ಸದನಕ್ಕೆ ಮನವರಿಕೆ ಮಾಡಿಕೊಟ್ಟರು. ರಾಜ್ಯದಲ್ಲಿ ಫಾರಂ ನಂ. 50ರಲ್ಲಿ 9937 ಅರ್ಜಿಗಳು, ಫಾರಂ ನಂ. 53 ರಲ್ಲಿ 1,84,329 ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿವೆ ಎಂದು ಹೇಳಿದರು.

Advertisement

ಈಗಾಗಲೇ ಏಪ್ರಿಲ್‌ನಲ್ಲಿಯೇ ಅರ್ಜಿ ವಿಲೇವಾರಿ ಅವಧಿ ಮುಕ್ತಾಯವಾಗಿರುವುದರಿಂದ ಹೊಸದಾಗಿ ಅರ್ಜಿ ವಿಲೇವಾರಿಗೆ ಶಾಸಕರ ನೇತೃತ್ವದ ಬಗರ್‌ ಹುಕುಂ ಸಮಿತಿ ರಚನೆ ಮಾಡಲು ಕಾನೂನಿಗೆ ತಿದ್ದುಪಡಿ ಅಗತ್ಯವಿದೆ. ಹೀಗಾಗಿ ಅರ್ಜಿಗಳ ವಿಲೇವಾರಿಗೆ 2 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಕಾಗೋಡು ತಿಮ್ಮಪ್ಪಅವರು ಕಂದಾಯ ಸಚಿವರಾಗಿದ್ದಾಗಲೇ ಬಗರ್‌ ಹುಕುಂ ಅರ್ಜಿಗಳಿಗೆ ಮುಕ್ತಿ ಹಾಡಬೇಕು ಎಂದು ಪ್ರಯತ್ನ ಪಟ್ಟಿದ್ದರು. ಆದರೆ, ಶಾಸಕರು ಅನರ್ಹ ಅರ್ಜಿಗಳನ್ನು ವಿಲೇವಾರಿ ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದುಕೊಂಡಿವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ಶಾಸಕರು ಅನರ್ಹ ಅರ್ಜಿಗಳನ್ನು ಯಾವುದೇ ಅರ್ಜಿಗೆ ಕಾಯದೇ ವಿಲೇವಾರಿ ಮಾಡಿದರೆ, ಅರ್ಹರಿಗೆ ಆದಷ್ಟು ಬೇಗ ಹಕ್ಕು ಪತ್ರಗಳನ್ನು ನೀಡಲು ಸಾಧ್ಯವಾಗುತ್ತದೆ. ಈ ಕಾಯ್ದೆ ತಿದ್ದುಪಡಿ ಮಾಡಿದ ತಕ್ಷಣ ಹದಿನೈದು ದಿನದಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿ ರಚನೆ ಮಾಡಲು ಸರ್ಕಾರ ಸಿದ್ಧವಿದೆ. ಮುಖ್ಯಮಂತ್ರಿ ಕೂಡ ಈ ಪ್ರಕರಣಕ್ಕೆ ಮುಕ್ತಿ ಹಾಡಲು ಬಯಸಿದ್ದಾರೆ. ಹೀಗಾಗಿ ಶಾಸಕರು ಆಸಕ್ತಿವಹಿಸಿ ಅನರ್ಹ
ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಮನವಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next