Advertisement

ಪ್ರಧಾನಮಂತ್ರಿ ಆವಾಸ್‌ ಹಣದಲ್ಲಿ ಅವ್ಯವಹಾರ

12:05 PM Mar 27, 2018 | Team Udayavani |

ಬೆಂಗಳೂರು: ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾದ ಹಣದಲ್ಲಿ ನೂರಾರು
ಕೋಟಿ ರೂ. ಅವ್ಯವಹಾರ ನಡೆದಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ನಗರ ಘಟಕದ ವಕ್ತಾರ ಎನ್‌.ಆರ್‌. ರಮೇಶ್‌ ಆಗ್ರಹಿಸಿದ್ದಾರೆ.

Advertisement

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಎಲ್ಲರಿಗೂ ಸೂರು ಕಲ್ಪಿಸಲು ಜಾರಿಗೆ ತಂದ ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ ಮೂರು ಹಂತಗಳಲ್ಲಿ ನಿಯಮ ಬಾಹಿರವಾಗಿ ಟೆಂಡರ್‌ ಕರೆಯಲಾಗಿದೆ. ಅಷ್ಟೇ ಅಲ್ಲ, ಅನುಮೋದಿತ ಟೆಂಡರ್‌ಗಳಲ್ಲಿ ಗುತ್ತಿಗೆದಾರರು ಸರಾಸರಿ ಶೇ. 20ರಷ್ಟು ಹೆಚ್ಚು ಮೊತ್ತ ನಮೂದು ಮಾಡಿದ್ದಾರೆ. ಇಡೀ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಆರ್‌.ವಿ.
ದೇವರಾಜ್‌ ಅವರು “ಕಿಕ್‌ಬ್ಯಾಕ್‌’ ಪಡೆದಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
 
800 ಕೋಟಿ ಲೂಟಿ: ಒಟ್ಟಾರೆ ಮೂರು ಹಂತಗಳಲ್ಲಿ ಕೈಗೆತ್ತಿಕೊಂಡ ಯೋಜನೆಯಲ್ಲಿ 1 ಮತ್ತು 2ನೇ ಹಂತದಲ್ಲಿ 300 ಕೋಟಿ ರೂ. ಹಾಗೂ 3ನೇ ಹಂತದಲ್ಲಿ 562 ಕೋಟಿ ರೂ. ಹೆಚ್ಚುವರಿ ಪಡೆಯಲಾಗಿದ್ದು, 800 ಕೋಟಿ ರೂ. ಗಳಿಗೂ ಅಧಿಕ ಲೂಟಿಯಾಗಿದೆ. ಇದರಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಭೀಮಪ್ಪ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌ ಕೂಡ ಶಾಮೀಲಾಗಿದ್ದಾರೆ ಎಂದೂ ದೂರಿದರು.

ಮಾಹಿತಿ ಅಲಭ್ಯ: ಮೊದಲ ಹಂತದಲ್ಲಿ 882 ಕೋಟಿ ವೆಚ್ಚದಲ್ಲಿ 16,293 ಮನೆಗಳ ನಿರ್ಮಾಣಕ್ಕೆ ಹಾಗೂ 3ನೇ ಹಂತದಲ್ಲಿ 2,662 ಕೋಟಿ ವೆಚ್ಚದಲ್ಲಿ 49,368 ಮನೆಗಳ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನಿಸಲಾಗಿದೆ. 2ನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿದರೂ ಕೊಡುತ್ತಿಲ್ಲ ಎಂದ ಅವರು, ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ಸಲ್ಲಿಸಲಾಗಿದೆ. ಜಾರಿ ನಿರ್ದೇಶನಾಲಯಕ್ಕೂ ದೂರು ಸಲ್ಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next