Advertisement

ಎಗ್ಗಿಲ್ಲದೇ ಸಾಗಿದೆ ಕೇರಳ ರಾಜ್ಯಕ್ಕೆ ಅಕ್ರಮ ಕಲ್ಲು ಸಾಗಟ

04:20 PM Jul 08, 2023 | Team Udayavani |

ಗುಂಡ್ಲುಪೇಟೆ: ರಾಜ್ಯದ ಗಡಿ ತಾಲೂಕು ಗುಂಡ್ಲುಪೇಟೆಯಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಕಲ್ಲು ಸಾಗಾಟ ಎಗ್ಗಿಲ್ಲದೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ರಾಜ್ಯದ ಗಣಿ ಸಂಪತ್ತು ಯಾರ ಅಂಕುಶವೂ ಇಲ್ಲದೆ ಪಕ್ಕದ ಕೇರಳಿಗರ ಪಾಲಾಗುತ್ತಿದೆ. ಇಷ್ಟೆಲ್ಲ ಲೂಟಿಯಾಗುತ್ತಿದ್ದರೂ ಸಹ ಅರಣ್ಯಾಧಿಕಾರಿಗಳು, ಪೊಲೀಸರು ಹಾಗೂ ಜನ ಪ್ರತಿನಿಧಿಗಳು ಜಾಣ ಮೌನ ತಾಳಿದ್ದಾರೆ.

Advertisement

ತಾಲೂಕಿನ ಕೂತನೂರು ಗುಡ್ಡದಲ್ಲಿ ಬಿಳಿಕಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿಂದ ಪ್ರತಿನಿತ್ಯ ನೂರಾರು ಟಿಪ್ಪರ್‌ ಲಾರಿಗಳು ಕಲ್ಲು ತುಂಬಿಕೊಂಡು ಕೇರಳಕ್ಕೆ ಗಡಿ ಚೆಕ್‌ಪೋಸ್ಟ್‌ಗಳ ಮೂಲಕ ಹಗಲು ಹಾಗೂ ರಾತ್ರಿ ಗಡಿ ಚೆಕ ಪೋಸ್ಟ್‌ ಬಂದ್‌ ಆಗುವವರೆಗೂ ಸಂಚಾರ ಮಾಡುತ್ತಿವೆ. ಒಂದು ಟಿಪ್ಪರ್‌ ಲಾರಿ ಲೋಡ್‌ಗೆ ಪರ್ಮಿಟ್‌ ತೆಗೆದುಕೊಂಡು ಹತ್ತಾರು ಲಾರಿಗಳು ಸಂಚಾರ ಮಾಡುತ್ತಿವೆ. ಇದರಿಂದ ರಾಜಧನವೂ ಕೂಡ ಸರ್ಕಾರಕ್ಕೆ ನಷ್ಟವಾಗುತ್ತಿದೆ.

ಚಕಾರ ಎತ್ತದ ಅರಣ್ಯ ಮತ್ತು ಪೊಲೀಸ್‌ ಇಲಾಖೆ: ತಾಲೂಕಿನ ಗಡಿ ಮದ್ದೂರು, ಮೂಲೆಹೊಳೆ ಸೇರಿದಂತೆ ಪೊಲೀಸ್‌ ಚೆಕ್‌ಪೋಸ್ಟ್‌ ಮೂಲಕವೇ ಪ್ರತಿನಿತ್ಯ ಹತ್ತಾರು ಟಿಪ್ಪರ್‌ ಲಾರಿಗಳು ಅಧಿಕ ಭಾರ ಹೊತ್ತು, ಪರ್ಮಿಟ್‌ ಹಾಗೂ ಇನ್ಶೂರೆನ್ಸ್‌ ಇಲ್ಲದೆ ಸಂಚಾರ ಮಾಡುತ್ತಿದ್ದರೂ ಸಹ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಚಕಾರ ಎತ್ತುತ್ತಿಲ್ಲ. ಜೊತೆಗೆ ಯಾವೊಂದು ಟಿಪ್ಪರ್‌ ಲಾರಿಗಳ ಪರ್ಮಿಟ್‌ ಸೇರಿದಂತೆ ಇನ್ನಿತರ ಯಾವುದೇ ದಾಖಲಾತಿ ಪರಿಶೀಲನೆ ನಡೆಸುತ್ತಿಲ್ಲ. ಇದರಿಂದ ಲಾರಿಗಳು ಮನಬಂದಂತೆ ಸಂಚಾರ ಮಾಡುತ್ತಿದೆ. ಈ ದಂಧೆ ಕೆಲ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳ ಸೋಗಿನಲ್ಲಿಯೇ ನಡೆಯುತ್ತಿದೆ ಎಂದು ಪಟ್ಟಣದ ನಿವಾಸಿ ಪಾಪಣ್ಣ ಆರೋಪಿಸಿದರು.

ತಪಾಸಣೆ ನಡೆಸದ ಆರ್‌ಟಿಒ ಅಧಿಕಾರಿಗಳು: ರಾಜ್ಯದ ಗಡಿ ಚೆಕ್‌ಪೋಸ್ಟ್‌ಗಳ ಮೂಲಕ ಬಿಳಿಕಲ್ಲು ಸಾಗಾಟ ಸೇರಿದಂತೆ ಹಲವು ಅಕ್ರಮ ದಂಧೆಗಳು ನಡೆಯುತ್ತಿದ್ದರು ಸಹ ಆರ್‌ಟಿಒ ಅಧಿಕಾರಿಗಳು ತಪಾಸಣೆ ನಡೆಸದೆ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಜೊತೆಗೆ ಚೆಕ್‌ಪೋಸ್ಟ್‌ ಕಚೇರಿ ಮುಂಭಾಗದ ಹೆದ್ದಾರಿ ರಸ್ತೆಯಲ್ಲೇ ಟಿಪ್ಪರ್‌ ಲಾರಿಗಳು ಅಧಿಕ ಭಾರ ಹೊತ್ತು ಎಗ್ಗಿಲ್ಲದೆ ಸಂಚಾರ ಮಾಡುತ್ತಿದ್ದರೂ ಸಹ ತಪಾಸಣೆ ಮಾತ್ರ ಮಾಡುತ್ತಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಶಾಸಕರೇ ಅಕ್ರಮಕ್ಕೆ ಕಡಿವಾಣ ಹಾಕಿ: ತಾಲೂಕಿನ ಬಿಳಿಕಲ್ಲು, ಕೆಂಪು ಮಣ್ಣು ಸೇರಿದಂತೆ ಇನ್ನಿತರ ಹಲವು ವಸ್ತುಗಳು ಕೆಲ ಅಧಿಕಾರಿಗಳ ಸೋಗಿನಲ್ಲಿಯೇ ಪಕ್ಕದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟಯಾಗುತ್ತಿದೆ. ಜೊತೆಗೆ ಇತ್ತೀಚೆಗೆ ಅಕ್ರಮವಾಗಿ ಜಾನುವಾರುಗಳ ಸಾಗಾಟಯೂ ಸಹ ಆರಂಭವಾಗಿದೆ. ಇದಕ್ಕೆ ನೂತನ ಶಾಸಕ ಎಚ್‌. ಎಂ.ಗಣೇಶಪ್ರಸಾದ್‌ ಕಡಿವಾಣ ಹಾಕಬೇಕೆಂದು ವಿವಿಧ ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಗುಂಡ್ಲುಪೇಟೆಯಿಂದ ಕೇರಳಕ್ಕೆ ಅಧಿಕ ಭಾರ ಹೊತ್ತು, ಪರ್ಮಿಟ್‌ ಹಾಗೂ ಇನ್ಶೂರೆನ್ಸ್‌ ಇಲ್ಲದೆ ಟಿಪ್ಪರ್‌ ಲಾರಿಗಳು ಸಂಚರಿಸುತ್ತಿರುವ ಕುರಿತು ಮಾಹಿತಿ ಪಡೆದು ಸೂಕ್ತ ಕ್ರಮ ಜರುಗಿಸಲಾಗುವುದು. –ಪದ್ಮಿನಿ ಸಾಹೋ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಚಾ.ನಗರ.

Advertisement

Udayavani is now on Telegram. Click here to join our channel and stay updated with the latest news.

Next