ಹೊಸಕೋಟೆ: ತಾಲೂಕಿನ ನಂದಗುಡಿ ಯಲ್ಲಿ ಕಾನೂನು ಬಾಹಿರ ಹಾಗೂ ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವು ದನ್ನು ಪತ್ತೆ ಹಚ್ಚಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ವ್ಯಾಪಾರಿಗಳ ವಿರುದ್ಧ 22 ಪ್ರಕರಣ ದಾಖಲಿಸಿಕೊಂಡು, 3,170 ರೂ.ಗಳ ದಂಡ ವಿಧಿಸಿದ್ದಾರೆ.
ಶಾಲೆ, ಕಾಲೇಜು ಆವರಣದಿಂದ 100 ಮೀ.ಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಆದಾಗ್ಯೂ ಕೆಲವರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದಿದ್ದು, ಪರಿಶೀಲನೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸಿಗರೇಟ್ ಒಳಗೊಂಡಂತೆ ನಿಷೇಧಿತ ತಂಬಾಕು ಉತ್ಪನ್ನಗಳ ಮಾರಾಟ ಖಚಿತವಾಗಿ ದಾಳಿ ನಡೆಸಿದ್ದಾರೆ.
ದಾಳಿಯ ನೇತೃತ್ವ ವಹಿಸಿದ್ದ ತಂಬಾಕು ನಿಯಂತ್ರಣ ಜಿಲ್ಲಾ ಸಲಹೆಗಾರ್ತಿ ಡಾ. ಪಿ.ಎಸ್. ವಿದ್ಯಾರಾಣಿ ಮಾತನಾಡಿ, ಪ್ರಥಮ ಹಂತದಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿತ ಸ್ಥಳಗಳಲ್ಲಿ ಮಾರಾಟ ಮಾಡದಂತೆ ಸೂಕ್ತ ಎಚ್ಚರಿಕೆ ನೀಡಿ ದಂಡ ವಿಧಿಸಲಾಗಿದೆ. ಮರುಕಳಿಸಿದಲ್ಲಿ ಕಾನೂನಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ತಂಬಾಕು ಉತ್ಪನ್ನ ಮಾರಾಟ ಮಾಡುವ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಕಡ್ಡಾಯವಾಗಿ ಎಚ್ಚರಿಕೆ ನಾಮಫಲಕ ಅಳಡಿಸಲು ಸೂಚಿಸಿದ್ದು ಪಾಲಿಸದವರಿಗೂ ದಂಡ ವಿಧಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ಧೂಮಪಾನ, ತಂಬಾಕು ಉತ್ಪನ್ನಗಳ ಸೇವನೆ ಮಾಡುವವರಿಂದ ಪರಿಣಾಮ ಬೀರುತ್ತಿದೆ. ಅದನ್ನು ತಡೆಗಟ್ಟಲು ಆಸ್ಪತ್ರೆ, ಸರ್ಕಾರಿ ಕಚೇರಿ, ಬಸ್ ನಿಲ್ದಾಣ, ಪ್ರಾರ್ಥನೆ ಸ್ಥಳ, ಸಂಘ ಸಂಸ್ಥೆಗಳನ್ನು ಧೂಮಪಾನ ನಿಷೇಧಿತ ಪ್ರದೇಶಗಳೆಂದು ಗುರುತಿಸಲಾಗಿದೆ. ನಿಷೇಧಿತ ಸ್ಥಳಗಳಲ್ಲಿ ಧೂಮಪಾನ ಮಾಡುವರಿಗೆ ಪೊಲೀಸರು ದಂಡ ವಿಧಿಸಲು ಅಧಿಕಾರ ನೀಡಲಾಗಿದೆ ಎಂದರು.
ಪೊಲೀಸ್ ಇಲಾಖೆಯ ಮೈತ್ರಿ, ಲಕ್ಷ್ಮೀಕಾಂತಪ್ಪ, ಸಮಾಜ ಸೇವಕ ಸಂಪತ್‌ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ರವಿಕುಮಾರ್ ಇನ್ನಿತರರು ಭಾಗವಹಿಸಿದ್ದರು.