ತೀರ್ಥಹಳ್ಳಿ : ಪಟ್ಟಣದ ಸೊಪ್ಪುಗುಡ್ಡೆಯ ವಿನಾಯಕ ಚಲನಚಿತ್ರ ಮಂದಿರದ ಮಾಲೀಕನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣವೊಂದು ದಾಖಲಾಗಿದ್ದು, ಕಟ್ಟಡದ ಲೈಸೆನ್ಸ್ ಹಾಗೂ ಪ್ರದರ್ಶನದ ಲೈಸೆನ್ಸ್ ಇಲ್ಲದೆ ಚಿತ್ರಮಂದಿರ ನಡೆಸುತ್ತಿದ್ದ ಕಾರಣ ಎಫ್ಐಆರ್ ದಾಖಲಾಗಿದೆ.
ಘಟನೆ ಹಿನ್ನಲೆ ಏನು?
ವಿನಾಯಕ ಚಿತ್ರಮಂದಿರದ ಕಟ್ಟಡವು ಆ.22 ರ ರಾತ್ರಿ ಸುಮಾರು 09.30 ರ ಸಮಯದಲ್ಲಿ ರಜಿನಿಕಾಂತ್ ನಟನೆಯ ಜೈಲರ್ ಚಿತ್ರ ಪ್ರದರ್ಶನ ನಡೆಯುತ್ತಿದ್ದಾಗ ಮುಂಭಾಗದ ಕಟ್ಟಡ ಕುಸಿದು ಬಿದ್ದಿತ್ತು. ಚಿತ್ರ ಮಂದಿರದ ಮುಂಭಾಗ ನಿಲಿಸಿದ್ದ 5 ಕ್ಕೂ ಹೆಚ್ಚು ಬೈಕ್ ಗಳು ಜಖಂಗೊಂಡಿತ್ತು.
ಚಿತ್ರಮಂದಿರ ಮಾಲೀಕ ಕೆ.ರವೀಂದ್ರ ಕಾಮತ್ ಬಿನ್ ವೆಂಕಟರಾಯ ಕಾಮತ್ ತಮ್ಮ ವಿನಾಯಕ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಮಾಡಲು ಸೂಕ್ತ ಪರವಾನಿಗೆಯನ್ನು ಪಡೆದುಕೊಳ್ಳದೇ ನಡೆಸುತ್ತಿರುವುದು ಈಗ ಬೆಳಕಿಗೆ ಬಂದಿದೆ.
ಸಾರ್ವಜನಿಕ ಸ್ಥಳವಾಗಿರುವ ವಿನಾಯಕ ಚಿತ್ರ ಮಂದಿರದ ಕಟ್ಟಡದ ಸದೃಢತೆ ಪ್ರಮಾಣ ಪತ್ರದ ಅವಧಿ ಈಗಾಗಲೇ ಮೀರಿ ಹೋಗಿದ್ದು, ಸೂಕ್ತ ಪ್ರಮಾಣ ಪತ್ರ ಪಡೆದುಕೊಳ್ಳದೇ ಮಾನವನ ಜೀವಕ್ಕೆ ಅಪಾಯವಾಗುವ ಸಾಧ್ಯತೆಯ ಬಗ್ಗೆ ಅರಿವಿದ್ದರೂ ಕೂಡ ಚಿತ್ರ ಮಂದಿರ ಮಾಲೀಕರು ಹಳೆಯ ಕಟ್ಟಡಕ್ಕೆ ಅಧಿಕೃತ ಪ್ರಾಧಿಕಾರದಿಂದ ಕಟ್ಟಡದ ಸದೃಢತೆ ಬಗ್ಗೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳದೇ ಇರುವುದರಿಂದ ಚಲನಚಿತ್ರ ಮಂದಿರದಲ್ಲಿ ಸಾರ್ವಜನಿಕರನ್ನ ಕೂರಿಸಿಕೊಂಡು ಸಿನಿಮಾ ಪ್ರದರ್ಶನ ನಡೆಸಿರುವ ಕಾರಣ ಸುಮೋಟೋ ಪ್ರಕರಣ ದಾಖಲಾಗಿದೆ.
ಅಧಿಕಾರಿಗಳ ವಿರುದ್ಧ ಕ್ರಮ ಇಲ್ವಾ?
ಈ ವಿಷಯದ ಬಗ್ಗೆ ಶುಕ್ರವಾರ ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈಗಾಗಲೇ ಕಟ್ಟಡದ ಬಗ್ಗೆ ಜಿಲ್ಲಾಧಿಕಾರಿ ಸೇರಿ ಎಲ್ಲಾ ಅಧಿಕಾರಿಗಳಿಗೂ ತಿಳಿಸಿದ್ದೆವು ಎಂದು ಹೇಳಿದ್ದರು. ಆದರೆ ಮಾಲೀಕನ ವಿರುದ್ಧ ಮಾತ್ರ ಎಫ್ಐಆರ್ ಆಗಿದ್ದು, ಕಾನೂನುಗಳೆಲ್ಲಾ ಸಣ್ಣಪುಟ್ಟ ಜನರಿಗೆ ವಿನಃ ಅಧಿಕಾರಿ, ರಾಜಕಾರಣಿಗಳ ವಿರುದ್ಧವಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಾಗಾದರೆ ಈ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇಲ್ವಾ? ಅವರ ವಿರುದ್ಧ ಕ್ರಮವೇನು? ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.