ರಬಕವಿ-ಬನಹಟ್ಟಿ: ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹ ಮಾಡಿದ್ದ ಗೋದಾಮಿನ ಮೇಲೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ 64,650 ರು ಮೌಲ್ಯದ 4310 ಕಿಲೋ ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಬನಹಟ್ಟಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕುಲಹಳ್ಳಿ ಗ್ರಾಮದ ಖಾಸಿಂಸಾಬ್ ಸಂತಿ ಎಂಬಾತನ ಜಮೀನಿನ ಪತ್ರಾಸ್ ಶೆಡ್‌ನಲ್ಲಿ ಶೇಖರಿಸಿಟ್ಟ 4310 ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರಲ್ಲದೇ ಖಾಸೀಂಸಾಬ ಸಂತಿ ಹಾಗೂ ಮುಬಾರಕ ಬಾರಿಗಡ್ಡಿ ಅವರನ್ನು ಅಕ್ರಮ ಅಕ್ಕಿ ಸಂಗ್ರಹದ ಆರೋಪದ ಮೇಲೆ ಬನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಇದನ್ನೂ ಓದಿ:ಡೆಲ್ಟಾ ಪ್ಲಸ್ ವೈರಾಣು ಬಗ್ಗೆ ಆತಂಕಪಡಬೇಕಿಲ್ಲ : ಸಚಿವ ಡಾ.ಕೆ.ಸುಧಾಕರ್
ಸಂಗ್ರಹವಾದ ಅಕ್ಕಿ ಬಡವರ ಪಾಲಿನ ಪಡಿತರ ಅಕ್ಕಿಯಾಗಿದ್ದು, ಬಡವರು ಅಕ್ಕಿ ಪಡೆದು ಮನೆಗೆ ಹೋದ ಬಳಿಕ ದುಡ್ಡಿನಾಸೆ ತೋರಿಸಿ ಅವರಿಂದ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಬನಹಟ್ಟಿ ಪಿಎಸ್‌ಐ ರವಿಕುಮಾರ ಧರ್ಮಟ್ಟಿ ನೇತೃತ್ವದಲ್ಲಿ ಎಎಸ್ ಐ ಎಸ್. ಎಸ್. ಬಾಬಾನಗರ ಹಾಗೂ ಕಂದಾಯ ನೀರಿಕ್ಷಕ ಪ್ರಕಾಶ ಮಠಪತಿ, ಕಂದಾಯ ಶಿರಸ್ತೆದಾರರಾದ ನಿಂಗಪ್ಪ ದೇಸಾಯಿ, ಗ್ರಾಮ ಲೆಕ್ಕಾದಿಕಾರಿ ರಾಚಯ್ಯ ಮಠಪತಿ ಅವರನ್ನು ಒಳಗೊಂಡ ಅಧಿಕಾರಿಗಳ ತಂಡ ಅಕ್ರಮ ಗೋದಾಮಿನ ಮೇಲೆ ದಾಳಿ ನಡೆಸಿ ಅಕ್ರಮ ಅಕ್ಕಿಯನ್ನು ವಶಪಡಿಸಿ ಕೊಂಡಿದ್ದಾರೆ.
ಈ ಆರೋಪಿಗಳು ಮಹಾರಾಷ್ಟ್ರಕ್ಕೆ ಅಕ್ಕಿ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.