Advertisement

ಅಕ್ರಮವಾಗಿ ಕಲ್ಲು ಗಣಿಗಾರಿಕೆ ಉಪ ಲೋಕಾಯುಕ್ತ ದಾಳಿ

03:45 AM Jul 02, 2017 | Harsha Rao |

ಉಪ್ಪಿನಂಗಡಿ: ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ದೂರಿನ ಆಧಾರದಲ್ಲಿ ಉಪ ಲೋಕಾಯುಕ್ತ ಜ| ಸುಭಾಷ್‌ ಬಿ. ಅಡಿ ನೇತೃತ್ವದ ಲೋಕಾಯುಕ್ತ ತಂಡ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಕಲ್ಲಿನ ಕೋರೆಗೆ ಶನಿವಾರ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಗಣಿ ಮತ್ತು ಕಂದಾಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Advertisement

ಯೊಗೀಶ್‌ ಪೂಜಾರಿ ಹಾಗೂ ಪ್ರಸಾದ್‌ ಕಡ್ತಿಲ ಅವರು ಸರಕಾರಿ ಜಾಗದಲ್ಲಿ, ಪರವಾನಿಗೆ ಇಲ್ಲದೆ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಕ್ರಷರ್‌ ಕೂಡ ನಡೆಸಲಾಗುತ್ತಿದೆ ಎಂದು ನ್ಯಾಯವಾದಿ ಅಗರ್ತ ಕೇಶವ ಭಟ್‌ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಉಭಯ ಸ್ಥಳಗಳಲ್ಲಿ ಕಲ್ಲುಗಣಿಗಾರಿಕೆಯಿಂದ ಬೃಹತ್‌ ಕೆರೆಗಳು ನಿರ್ಮಾಣವಾಗಿ ಅದರಲ್ಲಿ ನೀರು ತುಂಬಿಕೊಂಡಿರುವುದನ್ನು ನೋಡಿದ ಉಪ ಲೋಕಾಯುಕ್ತರು “ಈ ರೀತಿ ಆಗುವವರೆಗೆ ನೀವು ಯಾಕೆ ಸುಮ್ಮನಿದ್ದಿರಿ’ ಎಂದು ಗಣಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ನ್ಯಾಯವಾದಿ ಕೇಶವ ಪ್ರಸಾದ್‌ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲನೆಗೆಂದು ಬಂದಿದ್ದು, ಮೇಲ್ನೋಟಕ್ಕೆ ಇಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಸರ್ವೆ ನಂಬರ್‌ 72ರಲ್ಲಿ ಹೆಚ್ಚಿನವು ಅರಣ್ಯ ಪ್ರದೇಶವಾಗಿದ್ದು, ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಆದರೆ ಇಲ್ಲಿ ಭೂಮಿಯ ವಿಂಗಡನೇ ನಡೆಸದೇ ಕಲ್ಲು ಗಣಿಗಾರಿಕೆಗೆ ಪರವಾನಿಗೆ ಕೊಟ್ಟಿರುವುದು ಕಂಡು ಬರುತ್ತಿದೆ. ಇವರ ಪರವಾನಿಗೆ ಅವಧಿ ಕೊನೆಗೊಂಡಿದ್ದರೂ, ಬಳಿಕವೂ ಇಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದೆ ಹಾಗೂ ಕಲ್ಲು ಸಾಗಾಟ ನಡೆಸಲಾಗಿದೆ.

ಇಲ್ಲಿ ಎಷ್ಟು ಆಳದಲ್ಲಿ, ಎಷ್ಟು ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗಿದೆ ಎಲ್ಲದರ ಸಮಗ್ರ ಸರ್ವೆ ನಡೆಸಿ, ಸಮಗ್ರ ವಿವರ ನೀಡಲು ಗಣಿ ಇಲಾಖೆ, ಕಂದಾಯ ಇಲಾಖೆಗೆ ಸೂಚಿಸಿದ್ದೇನೆ. ಇಲ್ಲಿಗೆ ವಿದ್ಯುತ್‌ ಸರಬರಾಜು ಮಾಡಿದ ಬಗ್ಗೆಯೂ ಮಾಹಿತಿ ನೀಡಲು ಮೆಸ್ಕಾಂಗೆ ಸೂಚಿಸಿದ್ದೇನೆ. ಅಲ್ಲದೇ, ಇಲ್ಲಿ ಜೆಸಿಬಿ, ಕ್ರಷರ್‌ ಮೆಷಿನ್‌, ಟಿಪ್ಪರ್‌ ಲಾರಿಗಳು, ಜಲ್ಲಿಕಲ್ಲುಗಳು ಕಂಡು ಬಂದಿದ್ದು, ಇವೆಲ್ಲವನ್ನು ದಾಖಲಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮುಂದೆ ಈ ಬಗ್ಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರಲ್ಲದೇ, ಒಟ್ಟು ದ.ಕ. ಜಿಲ್ಲೆಯಲ್ಲಿ ಇಂತಹ ಎಷ್ಟು ಅಕ್ರಮಗಳು ನಡೆಯುತ್ತಿವೆ ಎಂಬ ಬಗ್ಗೆ ಲೋಕಾಯುಕ್ತ ಪರಿಶೀಲನೆ ನಡೆಸಲಿದೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಇಂತಹ ವ್ಯವಹಾರಗಳು ನಡೆದರೆ ನಮ್ಮ ಗಮನಕ್ಕೆ ಬರುವುದಿಲ್ಲ. ಆದ್ದರಿಂದ ಅನಧಿಕೃತ ವ್ಯವಹಾರಗಳನ್ನು ತಡೆಯಲು ಸಾರ್ವಜನಿಕರೂ ಮಾಹಿತಿ ನೀಡಬೇಕು ಎಂದರು.

Advertisement

ಕಂದಾಯ ನಿರೀಕ್ಷಕರು ತರಾಟೆಗೆ: ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ನಡೆಯುತ್ತಿದ್ದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ ಎಂದು ಕಂದಾಯ ನಿರೀಕ್ಷಕ ಪ್ರತೀಶ್‌ ಅವರನ್ನು ಉಪ ಲೋಕಾಯುಕ್ತ ಜಸ್ಟೀಸ್‌ ಸುಭಾಶ್‌ ಬಿ. ಅಡಿ ಅವರು ತೀವ್ರವಾಗಿ ತರಾಟೆಗೆತ್ತಿಕೊಂಡರು. ಆಗ “ಸರ್‌ ನಾನು ಆರ್‌ಐ ಆಗಿ ಇಲ್ಲಿಗೆ ಬಂದು 6 ತಿಂಗಳಾಗಿದೆ. ಹಾಗಾಗಿ ಗಮನಕ್ಕೆ ಬಂದಿಲ್ಲ ಎಂದಾಗ, ಉಪಲೋಕಾಯುಕ್ತರು, “”ಏನ್ರಿ ನಿಮ್ಗೆ ಇಂತಹ ಅಕ್ರಮಗಳನ್ನೆಲ್ಲಾ ತಿಳ್ಕೊಳ್ಳೋಕೆ ಆರು ವರ್ಷ ಬೇಕಾ? ಎಂದು ಖಾರವಾಗಿಯೇ ಪ್ರಶ್ನಿಸಿದರು. ಆಗ ಮಧ್ಯಪ್ರವೇಶಿಸಿದ ದೂರುದಾರರು, ಸರ್‌ ಇಲ್ಲಿ ಕಲ್ಲು ಗಣಿಗಾರಿಕೆ ಸುಮಾರು 7-8 ವರ್ಷದಿಂದ ನಡೆಯುತ್ತಿದೆ. ಆರ್‌ಐ ಆಗುವ ಒಂದು ವರ್ಷದ ಮೊದಲು ಈ ಗ್ರಾಮದ ವಿಎ ಇವರೇ ಆಗಿದ್ದರು ಎಂದರು. ಆಗ ಉಪ ಲೋಕಾಯುಕ್ತರು ಕಂದಾಯ ನಿರೀಕ್ಷಕರಲ್ಲಿ ಹೌದ್ರೇನ್ರಿ ಎಂದು ಪ್ರಶ್ನಿಸಿದಾಗ ತೆಪ್ಪಗಾಗುವ ಸರದಿ ಕಂದಾಯ ನಿರೀಕ್ಷಕರದ್ದಾಗಿತ್ತು.

ಗಣಿ ಇಲಾಖೆಯವರಿಗೆ ಕರ್ತವ್ಯದ ಪಾಠ: ಗಣಿ ಮತ್ತು ಭೂವಿಜಾnನ ಇಲಾಖೆಯ ದ.ಕ. ಜಿಲ್ಲಾ ಜಂಟಿ ನಿರ್ದೇಶಕಿ ಸುಮಿತ್ರಾ ಅವರನ್ನು ತರಾಟೆಗೆ ತೆಗೆದುಕೊಂಡ ಉಪ ಲೋಕಾಯುಕ್ತರು, ಪರವಾನಿಗೆ ಅವಧಿ ಮುಗಿದರೂ ಇಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗಿದೆ. ನೀವು ಏನು ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದಾಗ, ಸರ್‌ ಈಗ ಮಳೆಗಾಲ ಕಲ್ಲು ತೆಗೆಯಲು ಸಾಧ್ಯವಿಲ್ಲ ಎಂದು ಸುಮಿತ್ರ ಅವರು ಸ್ಪ$ಷ್ಟನೆ ನೀಡಿದರು. ಉಪ ಲೋಕಾಯುಕ್ತರು, ಏನ್ರಿ? ನಿನ್ನೆ ಕೂಡಾ ಇಲ್ಲಿ ಗಣಿಗಾರಿಕೆ ನಡೆದು, ಸಾಗಾಟವಾದ ಬಗ್ಗೆ ದಾಖಲೆಗಳು ಸಿಗುತ್ತವೆ. ನೀವೇನು ಮಾತಾಡ್ತ ಇದ್ದೀರಾ ಎಂದು ಆಕ್ರೋಶದಿಂದಲೇ ಪ್ರಶ್ನಿಸಿದರು. ಈ ಸಂದರ್ಭ ಸುಮಿತ್ರ ಅವರು ಸರ್‌ ನಾವು ಈಗಾಗಲೇ ಅವರಿಗೆ ನೊಟೀಸ್‌ ನೀಡಿದ್ದೇವೆ. ಫೆನಾಲ್ಟಿ ಕೂಡಾ ಹಾಕಿದ್ದೇವೆ. ಆದರೆ ಅವರು ಫೆನಾಲ್ಟಿಯನ್ನು ಇನ್ನೂ ಕಟ್ಟಿಲ್ಲ. ನಾವು ಎಷ್ಟು ಹೇಳಿದರೂ ಅವರು ಕೇಳುವುದೇ ಇಲ್ಲ ಎಂದು ಅಸಹಾಯಕತೆಯಿಂದ ನುಡಿದಾಗ, ಉತ್ತರಿಸಿದ ಉಪಲೋಕಾಯುಕ್ತರು “”ನೋಡಿ ನೀವು ಅಧಿಕಾರಿಗಳು ಹೌದೋ. ಅಲ್ವೋ?. ಯಾರೊಂದಿಗೂ ನೀವು ಪ್ರೀತಿ, ಪ್ರೇಮ ತೋರಿಸೋದು ಬೇಡ. ನೀವು ನಿಮ್ಮ ಕರ್ತವ್ಯ ನಿಷ್ಠೆಯಿಂದ ಮಾಡಿ ಎಂದು ಖಾರವಾಗಿಯೇ ಬೋಧಿಸಿದರು.

ಈ ಸಂದರ್ಭ ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಜಗದೀಶ್‌, ಇನ್ಸ್‌ಪೆಕ್ಟರ್‌ ವಿಜಯಪ್ರಸಾದ್‌, ಗಣಿ ಮತ್ತು ಭೂವಿಜಾnನ ಇಲಾಖೆಯ ದ.ಕ. ಜಿಲ್ಲಾ ಜಂಟಿ ನಿರ್ದೇಶಕಿ ಸುಮಿತ್ರಾ, ಸಹಾಯಕ ನಿರ್ದೇಶಕಿ ಪದ್ಮಶ್ರೀ, ಪುತ್ತೂರು ತಹಶೀಲ್ದಾರ್‌ ಅನಂತ ಶಂಕರ್‌, ಪುತ್ತೂರು ಗ್ರಾಮಾಂತರ ಸರ್ಕಲ್‌ ಇನ್ಸ್‌ಪೆಕ್ಟರ್‌ ಅನಿಲ್‌ ಕುಲಕರ್ಣಿ, ಕೊಕ್ಕಡ ಕಂದಾಯ ಹೋಬಳಿಯ ಕಂದಾಯ ನಿರೀಕ್ಷಕ ಪ್ರತೀಶ್‌, ಮೊಗ್ರು ಗ್ರಾಮಕರಣಿಕ ರಫೀಕ್‌ ಮತ್ತಿತರರ ಅಧಿಕಾರಿಗಳು ಹಾಗೂ ದೂರುದಾರ ಕೇಶವ ಪ್ರಸಾದ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next