Advertisement

ಅಕ್ರಮ ಕಲ್ಲು ಗಣಿಗಾರಿಕೆಗಿಲ್ಲ ಕಡಿವಾಣ

05:25 PM Feb 27, 2021 | Team Udayavani |

ರಾಣಿಬೆನ್ನೂರ: ತಾಲೂಕಿನ ಕೂನಬೇವು, ಕಾಕೋಳ, ಕಜ್ಜರಿ, ಹುಣಸಿಕಟ್ಟಿ ಹಾಗೂ ದೇವರಗುಡ್ಡ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತವೆ.

Advertisement

ಜೆಸಿಬಿ, ಹಿಟಾಚಿ, ಬೃಹತ್‌ ವಾಹನಗಳ ಸದ್ದೇ ಸದ್ದು. ಇನ್ನು ಅಲ್ಲಿ ಜಿಲೆಟಿನ್‌ ಬಳಸಿ ಕಲ್ಲುಗಳನ್ನು ಸ್ಫೋಟ ಮಾಡಲಾಗುತ್ತದೆ. ಇದರಿಂದ, ಸುತ್ತಮುತ್ತಲಿನ ರಸ್ತೆ, ಜಮೀನುಗಳಿಗೆ ಕಲ್ಲುಗಳು ಸಿಡಿಯುತ್ತವೆ. ಅಲ್ಲದೇ,  ಕ್ವಾರಿಗಳ ಧೂಳಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಶಿವಮೊಗ್ಗದ ಹುಲಸಗೋಡು ಪ್ರಕರಣ ಮಾಸುವ ಮುನ್ನವೇ ಚಿಕ್ಕಬುಳ್ಳಾಪುರ ಜಿಲ್ಲೆಯಲ್ಲಿ ಮತ್ತೆ ಜಿಲೆಟಿನ್‌ ಸ್ಫೋಟಗೊಂಡು ಆರು ಜೀವಗಳನ್ನು ಬಲಿ ಪಡೆದಿದೆ.

ತಾಲೂಕಿನಲ್ಲಿ ಕೂಡಾ ಜಿಲೆಟಿನ್‌ ಸ್ಫೋಟಕವನ್ನು ಯಥೇಚ್ಚವಾಗಿ ಬಳಸಲಾಗುತ್ತಿದೆ. ಹೊರ ರಾಜ್ಯದ ಕಾರ್ಮಿಕರು ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಕ್ವಾರಿ ಮಾಲಿಕರು ಕಾರ್ಮಿಕರಿಗೆ ಯಾವುದೇ ಸುರಕ್ಷತೆ ಕ್ರಮಗಳನ್ನು ಅನುಸರಿಸುವುದಿಲ್ಲ. ಕಾರ್ಮಿಕರು ಕುಟುಂಬಗಳ ನಿರ್ವಹಣೆಗಾಗಿ ಕಡಿಮೆ ಸಂಬಳದಲ್ಲಿ ಜೀವ ಕೈಯಲ್ಲಿ ಹಿಡಿದು ದುಡಿಯುತ್ತಾರೆ. ಈ ಕಲ್ಲುಗಣಿಯ ಮಾಲಿಕರು ಪ್ರಭಾವಿ ವ್ಯಕ್ತಿಗಳಾಗಿದ್ದು, ಕಾರ್ಮಿಕರು ಯಾವುದೇ ಸೌಲಭ್ಯ ಕೇಳುವಂತಿಲ್ಲ. ಕೇಳಿದರೆ ಕೆಲಸ ಬಿಡಿಸುತ್ತಾರೆ ಎಂಬ ಭಯ ಅವರಿಲ್ಲಿ ಕಾಡುತ್ತಿದೆ. ಹಾಗಾಗಿ, ಜೀವದ ಹಂಗು ತೊರೆದು ದುಡಿಯುತ್ತಾರೆ.

ಕಜ್ಜರಿ, ಬುಡಪನಹಳ್ಳಿ, ದೇವರಗುಡ್ಡದ ಬಳಿ ನೂರಾರು ಎಕರೆ ಹುಲ್ಲುಗಾವಲು ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆ ಹಗಲು-ರಾತ್ರಿ ಎನ್ನದೇ ಜೋರಾಗಿಯೇ ನಡೆಯುತ್ತದೆ. ಇದರಿಂದ ದನಕರುಗಳನ್ನು ಮೇಯಿಸಲು ಜಾಗವಿಲ್ಲದಂತಾಗಿದೆ. ಇಲ್ಲಿ ಪ್ರಭಾವಿಗಳೇ ಗಣಿಗಾರಿಕೆ ಮಾಡುವುದರಿಂದ ಯಾರೂ ಮಾತನಾಡದ ಸ್ಥಿತಿ ಇದೆ. ಇದರಿಂದ ಜನತೆಗೆ ಶಾಂತಿ ಇಲ್ಲದಂತಾಗಿದೆ ಎಂದು ಕುರಿಗಾಯಿಯೊಬ್ಬರು ತಮ್ಮ ನೋವನ್ನು “ಉದಯವಾಣಿ’ ಎದುರು ತೋಡಿಕೊಂಡರು.

ಹುಲಸಗೋಡು ಹಾಗೂ ಚಿಕ್ಕಬುಳ್ಳಾಪುರ ಜಿಲ್ಲೆಯಲ್ಲಿ ಜಿಲೆಟಿನ್‌ ಸ್ಫೋಟಗೊಂಡು ಆರು ಜೀವಗಳನ್ನು ಬಲಿ ಪಡೆದಿದೆ. ತಾಲೂಕಿನಲ್ಲಿ ಹಾಗಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

Advertisement

ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವ ಬಗ್ಗೆ ಗ್ರಾಮೀಣ ಪೊಲೀಸ್‌ ಠಾಣೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ನಡೆಸಿ ಸ್ಫೋಟಕಗಳನ್ನು ಬಳಸದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಸ್ಫೋಟಕ ಬಳಕೆ ಮತ್ತು ಅಕ್ರಮ ಗಣಿಗಾರಿಕೆ ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. -ಶಂಕರ ಜಿ.ಎಸ್‌., ತಹಶೀಲ್ದಾರ್‌ ರಾಣಿಬೆನ್ನೂರ

ತಾಲೂಕಿನಲ್ಲಿ ಭಾರೀ ಸ್ಫೋಟಕಗಳಿಂದ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಿದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. -ರವಿಂದ್ರಗೌಡ ಪಾಟೀಲ, ರೈತ ಮುಖಂಡ, ಮುಷ್ಟೂರ

ಜಿಲ್ಲೆಯಲ್ಲಿ 48 ಪರವಾನಗಿ ಪಡೆದ ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ. ಎಲ್ಲೂ ಅಕ್ರಮ ಗಣಿಗಾರಿಕೆ ನಡೆಯತ್ತಿಲ್ಲ. ಹೊರಗಡೆ ಒಪ್ಪಂದ ಮಾಡಿಕೊಂಡು ನಡೆಸುತ್ತಾರೆ. ನಮ್ಮಲ್ಲಿ ಬ್ಲಾಸ್ಟ್‌ ಮಾಡಲು ಅವಕಾಶವಿಲ್ಲ. ಕಾರ್ಮಿಕರ ಸುರಕ್ಷತೆಗಾಗಿ ಕ್ರಷರ್‌ ಮಾಲಿಕರಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. -ಮಧಸೂದನ ಎಸ್‌.ಬಿ., ಗಣಿ ಮತ್ತು ಭೂವಿಜ್ಞಾನ ಇಲಾಖೆ, ಹಾವೇರಿ

 

-ಮಂಜುನಾಥ ಎಚ್‌. ಕುಂಬಳೂರ

Advertisement

Udayavani is now on Telegram. Click here to join our channel and stay updated with the latest news.

Next