ಕುಷ್ಟಗಿ: ತಾಲೂಕಿನ ಕೆ. ಬೋದೂರು ಗ್ರಾಮ ವ್ಯಾಪ್ತಿಯ ಪಟ್ಟಾ ಜಮೀನಿನಲ್ಲಿ ಮರಂ ಮಣ್ಣು ಅಕ್ರಮ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ತಾಲೂಕಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ.
ತಾಲೂಕಿನ ವ್ಯಾಪ್ತಿಯಲ್ಲಿ ಮರಂ ಮಣ್ಣಿಗೆ ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ತಾಲೂಕು ಆಡಳಿತದ ಪರವಾನಗಿ ಇಲ್ಲದೇ ರಾಜಕೀಯ ಪ್ರಭಾವ ಬಳಸಿ ಮರಂ ಮಣ್ಣನ್ನು ಸಾಗಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವುದು ಸವಾಲಾಗಿದೆ.
ಕುಷ್ಟಗಿ-ಇಲಕಲ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೆ. ಬೋದೂರು ವ್ಯಾಪ್ತಿಯ ರೈತರೊಬ್ಬರ ಜಮೀನಿನಲ್ಲಿ ಮರಂ ಮಣ್ಣು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಪಟ್ಟಾ ಜಮೀನಿನಲ್ಲಿ ಮರಂ ಮಣ್ಣು ಸಾಗಿಸಲು ತಾಲೂಕಾಡಳಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಗಿ ಇಲ್ಲ, ಸಾಗಿಸುವಂತಿಲ್ಲ. ಆದರೆ ಈ ಪ್ರದೇಶದಲ್ಲಿ ಹಿಟಾಟಿ, ಜೆಸಿಬಿ ಟಿಪ್ಪರ್‌ಗಳು ಸದ್ದು ಮಾಡುತ್ತಿವೆ.
ನಿತ್ಯ ಮೂರ್‍ನಾಲ್ಕು ಟಿಪ್ಪರ್ ಮಣ್ಣು ಸಾಗಿಸಲಾಗುತ್ತಿದೆ. ತಾಲೂಕಾಡಳಿತ, ಪೊಲೀಸ್ ಇಲಾಖೆ ಮೌನವಹಿಸಿರುವುದು ಅಚ್ಚರಿ ಹುಟ್ಟಿಸಿದೆ. ಮರಂ ಮಣ್ಣನ್ನು ಸಾಗಿಸುವ ಟಿಪ್ಪರ್‌ಗಳಿಗೆ ನಂಬರ್ ಪ್ಲೇಟ್ ಇಲ್ಲದಿರುವುದು ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎನ್ನುವುದು ಪುಷ್ಟೀಕರಿಸಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಹೆದ್ದಾರಿ ಫ್ಲೈಓವರ್, ಗದಗ-ವಾಡಿ ರೈಲು ಮಾರ್ಗದ ಕಾಮಗಾರಿಗೆ ಮರಂ ಮಣ್ಣನ್ನು ಪರವಾನಿಗಿ ಪಡೆದು ಸಾಗಿಸಲಾಗುತ್ತಿದೆ. ಆದರೆ ಈ ಪ್ರದೇಶದಲ್ಲಿ ಸದ್ಯ ಐದಾರು ಎಕರೆ ಪ್ರದೇಶದಲ್ಲಿ ಮರಂ ಮಣ್ಣು ಖಾಲಿಯಾಗಿದ್ದರೂ, ತಾಲೂಕಾಡಳಿತ ಗಮನ ಹರಿಸಿಲ್ಲ.
ಮರಂ ಮಣ್ಣು ಗಣಿಗಾರಿಕೆ ನಡೆಯುತ್ತಿರುವುದು ಗಮನಕ್ಕೆ ಬಂದಿಲ್ಲ. ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಳುಹಿಸಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಸದರಿ ಪ್ರದೇಶದಲ್ಲಿ ಮರಂ ಮಣ್ಣು ಸಾಗಾಣಿಕೆ ಸಾಗಿಸಲು ಅಧಿಕೃತ ಪರವಾನಗಿ ಪಡೆದಿಲ್ಲ. ಅಕ್ರಮವಾಗಿ ಸಾಗಿಸುತ್ತಿರುವ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗುವುದು. ಒಂದು ವೇಳೆ ಕ್ರಮ ಕೈಗೊಳ್ಳಲು ವಿಳಂಬವಾದರೆ ಕೋರ್ಟ್ ಮೂಲಕ ನೋಟಿಸ್ ಜಾರಿ ಮಾಡಲಾಗುವುದು.
•ಕೆ.ಎಂ. ಗುರುಬಸವರಾಜ್, ತಹಶೀಲ್ದಾರ್