Advertisement

ಕದ್ದುಮುಚ್ಚಿ ಬೆಂಗಳೂರಿಗೆ ಅಕ್ರಮ ಮರಳು ಸಾಗಣೆ

09:27 PM Mar 08, 2020 | Lakshmi GovindaRaj |

ಬಂಗಾರಪೇಟೆ: ತಾಲೂಕಲ್ಲಿ ಮತ್ತೆ ಸದ್ದಿಲ್ಲದೆ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಬೆಂಗಳೂರಿಗೆ ಪ್ರತಿ ನಿತ್ಯ ರಾತ್ರಿವೇಳೆ ಟಿಪ್ಪರ್‌ಗಳಲ್ಲಿ ಸಾಗಣೆ ಮಾಡುತ್ತಿದ್ದರೂ ತಾಲೂಕು ಆಡಳಿತ ಮೌನಕ್ಕೆ ಶರಣಾಗಿದೆ. ಮಳೆ ಇಲ್ಲದೆ ಕೆರೆಗಳು ಬರಿದಾಗಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು ರಾತ್ರಿ ವೇಳೆ ಮರಳನ್ನು ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದಾರೆ. ಇದರಿಂದ ಅಂತರ್ಜಲ ಮತ್ತಷ್ಟು ಕುಸಿಯುವಂತಾಗಿದೆ.

Advertisement

ಸರ್ಕಾರ ಕೆರೆ ಮತ್ತು ಕೃಷಿ ಜಮೀನಿನಲ್ಲಿ ಮರಳು ತೆಗೆಯಬಾರದೆಂದು ಕಟ್ಟುನಿಟ್ಟಿನ ಆದೇಶ ನೀಡಿದೆ. ಆದರೂ, ತಾಲೂಕಿನ ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿ ಮಟ್ಟದ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾತ್ರಿ ವೇಳೆ ಮರಳು ಸಾಗಣೆ ಮಾಡಲಾಗುತ್ತಿದೆ.

ರಾಜಕಾರಣಿಗಳ ಕೃಪೆ: ಕೆಜಿಎಫ್ ಜಿಲ್ಲಾ ಪೊಲೀಸ್‌ಗೆ ಎಸ್ಪಿಯಾಗಿ ಬಂದ ಹೊಸದರಲ್ಲಿ ಮೊಹಮದ್‌ ಸುಜೀತ ಕಟ್ಟುನಿಟ್ಟಾಗಿ ಮರಳು ದಂಧೆಗೆ ಕಡಿವಾಣ ಹಾಕಿದ್ದರು. ಮನೆ ಕಟ್ಟಲು ಸಹ ಸ್ಥಳೀಯವಾಗಿ ಮರಳು ಬಳಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಬಿಗಿ ಮಾಡಿದ್ದರು. ಕೆಲವು ರಾಜಕಾರಣಿಗಳು ಹಾಕಿದ್ದ ಸವಾಲ್‌ಗೆ ಕೆಜಿಎಫ್ ಪೊಲೀಸ್‌ ಜಿಲ್ಲೆ ಕಣ್ಣುಮುಚ್ಚಿ ಕುಳಿತಿರುವುದರಿಂದ ಪ್ರತಿ ನಿತ್ಯ ಕನಿಷ್ಠ 20ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ ಮರಳು ಸಾಗಾಣಿಕೆಯಾಗುತ್ತಿದೆ. ಬೂದಿಕೋಟೆ, ಕಾಮಸಮುದ್ರ, ಕನಮನಹಳ್ಳಿ ಕಡೆಗಳಲ್ಲಿ ಯಥೇತ್ಛವಾಗಿ ಮರಳು ಸಿಗುವುದರಿಂದ ಈ ಭಾಗದ ಕಂದಾಯ ಅಧಿಕಾರಿಗಳ ಹಾಗೂ ಪೊಲೀಸರ ಪರೋಕ್ಷ ಸಹಕಾರದಿಂದ ಎಗ್ಗಿಲ್ಲದೆ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಮೇಲೆ ಎಂ.ಸ್ಯಾಂಡ್‌, ಕೆಳಗೆ ಮರಳು: ಯಾರಿಗೂ ಅನುಮಾನ ಬಾರದಂತೆ ಮೇಲ್ಭಾಗದಲ್ಲಿ ಎಂ.ಸ್ಯಾಂಡ್‌ ಲೇಪಿಸಿಕೊಂಡು ಹಳ್ಳ, ಕೆರೆಗಳಲ್ಲಿನ ಮರಳನ್ನು ಟಿಪ್ಪರ್‌ಗಳಲ್ಲಿ ಸಾಗಿಸುತ್ತಿದ್ದಾರೆ. ಅಕ್ರಮ ಮರಳನ್ನು ಕಾಮಸಮುದ್ರ ಹೋಬಳಿಯಲ್ಲಿ ಲಾರಿಗೆ ತುಂಬಿಸಿಕೊಂಡು ನಂತರ ಮಾಲೂರು ತಾಲೂಕಿನ ಟೇಕಲ್‌ ಬಳಿ ಇರುವ ಜಲ್ಲಿ ಕ್ರಷರ್‌ಗಳ ಬಳಿ ಎಂ.ಸ್ಯಾಂಡ್‌ಅನ್ನು ಹಾಕಿಕೊಂಡು ಪೊಲೀಸರಿಗೆ ಯಾಮಾರಿಸುತ್ತಿದ್ದಾರೆ. ಹಾಡಹಗಲೇ ಮರಳು ಸಾಗಿಸುತ್ತಿದ್ದು, ಗ್ರಾಮೀಣ ರಸ್ತೆಗಳು ಬಹುಬೇಗನೆ ಹಾಳಾಗುತ್ತಿವೆ. ಇದರಿಂದ ಸರ್ಕಾರಕ್ಕೂ ನಷ್ಟವಾಗುತ್ತಿದೆ.

ಪೊಲೀಸರಿಂದ ಟಿಪ್ಪರ್‌ ವಶ: ಮಾಲೂರು ತಾಲೂಕಿನ ಟೇಕಲ್‌ ಮೂಲಕವಾಗಿ ಇದೇ ರೀತಿ ಮರಳು ಮೇಲೆ ಎಂ.ಸ್ಯಾಂಡ್‌ ಹಾಕಿಕೊಂಡು ಬಂದ ಟಿಪ್ಪರ್‌ ಲಾರಿ ಯೊಂದನ್ನು ಶುಕ್ರವಾರ ರಾತ್ರಿ ಬಂಗಾರಪೇಟೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು, ಪರಿಶೀಲಿಸಿದಾಗ ಮರಳು ಮೇಲೆ 6 ಇಂಚು ಎಂ.ಸ್ಯಾಂಡ್‌ ಹಾಕಿರುವುದು ಕಂಡು ಬಂದಿದೆ. ಈ ಬಗ್ಗೆ ದೂರು ದಾಖಲಾಗಿದೆ.

Advertisement

ಮರಳು ಸಾಗಣೆಯ ಮಾಹಿತಿ ಇಲ್ಲ: ತಾಲೂಕಿನ ಬೂದಿಕೋಟೆ ಹಾಗೂ ಕಾಮಸಮುದ್ರ ಹೋಬಳಿಗಳಲ್ಲಿ ಅಕ್ರಮ ಮರಳು ದಂಧೆ ಪತ್ತೆಹಚ್ಚಲು ತಹಶೀಲ್ದಾರ್‌ ಕೆ.ಬಿ.ಚಂದ್ರಮೌಳೇಶ್ವರ್‌ ಅವರ ಸರ್ಕಾರಿ ವಾಹನವು ರಾತ್ರಿ ವೇಳೆಯಲ್ಲಿ ಓಡಾಡುತ್ತಿದೆ. ಈ ಬಗ್ಗೆ ತಹಶೀಲ್ದಾರ್‌ರಿಂದ ಮಾಹಿತಿ ಕೇಳಿದ್ರೆ, ಅಕ್ರಮ ಮರಳು ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಸಿಬ್ಬಂದಿ ಕಳುಹಿಸಲಾಗಿತ್ತು ಎಂದು ಹೇಳುತ್ತಾರೆ. ಅಲ್ಲದೆ, ಈ ಸಮಯದಲ್ಲಿ ಯಾವುದೇ ಟಿಪ್ಪರ್‌ಗಳ ಮರಳು ಸಾಗಾಣಿಕೆ ಮಾಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸುತ್ತಾರೆ.

ಬೆಂಗಳೂರಿಗೆ ಸಾಗಣೆ: ತಾಲೂಕಿನ ಕಾಮಸಮುದ್ರದ ಕನಮನಹಳ್ಳಿ, ತೊಪ್ಪನಹಳ್ಳಿ ಗ್ರಾಮಗಳ ಬಳಿ ಅಕ್ರಮವಾಗಿ ಮರಳು ಫಿಲ್ಟರ್‌ ಕೆಲಸ ನಡೆಯುತ್ತಿದೆ. ಇದು ಸ್ಥಳೀಯ ಪೊಲೀಸ್‌, ಕಂದಾಯ ಇಲಾಖೆ, ಗ್ರಾಮಲೆಕ್ಕಿಗರಿಗೂ ತಿಳಿದಿದೆ. ಮರಳು ಚೆನ್ನಾಗಿದ್ದರೆ ಮಾತ್ರ ಬೆಂಗಳೂರಿನಲ್ಲಿ ಮಾರಾಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಮಸಮುದ್ರ ಹೋಬಳಿಯಲ್ಲಿ ಮರಳು ಫಿಲ್ಟರ್‌ಗಳು ಹೇರಳವಾಗಿ ತಲೆಎತ್ತಿವೆ.

ಪ್ರತಿ ದಿನ ರಾತ್ರಿ 12 ಗಂಟೆ ಮೇಲೆ ಈ ಅಕ್ರಮ ಮರಳು ಲಾರಿಗಳು ಬೆಂಗಳೂರಿಗೆ ಹೊರಡುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ತಾಲೂಕಿನಲ್ಲಿ ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಲ್ಲವನ್ನೂ ನಿಯಂತ್ರಿಸಲಾಗಿದೆ ಎಂದು ಕಂದಾಯ ಇಲಾಖೆ ಉತ್ತರ ನೀಡುತ್ತದೆ. ಕೆಜಿಎಫ್ ಎಸ್ಪಿ ಅವರು ಇನ್ನಾದರೂ ಯಾವುದೇ ಒತ್ತಡಕ್ಕೆ ಮಣಿಯದೇ ಕಟ್ಟುನಿಟ್ಟಾಗಿ ಮರಳು ದಂಧೆಗೆ ಕಡಿವಾಣ ಹಾಕುವ ಮೂಲಕ ಅಂತರ್ಜಲ ರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.

ತಾಲೂಕಿನ ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವುದು ಮಾಹಿತಿ ಸಿಕ್ಕಿಲ್ಲ. ಕೆಜಿಎಫ್ ಜಿಲ್ಲಾ ಎಸ್ಪಿ ಮಹಮ್ಮದ್‌ ಸುಜೀತ ಅವರು 15 ದಿನಗಳ ರಜೆ ಇದ್ದಾಗ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇತ್ತು. ಅನಂತರ ಯಾವುದೇ ಅಕ್ರಮ ಮರಳು ಸಾಗಾಣಿಕೆಯಾಗುತ್ತಿಲ್ಲ. ಜನರಿಗೆ ಅಕ್ರಮ ಮರಳು ಸಾಗಣೆ ಮಾಡುವುದು ಕಂಡು ಬಂದಾಗ ಮಾಹಿತಿ ನೀಡಿದ್ರೆ ಕ್ರಮಕೈಗೊಳ್ಳುತ್ತೇನೆ.
-ಕೆ.ಬಿ.ಚಂದ್ರಮೌಳೇಶ್ವರ್‌, ತಹಶೀಲ್ದಾರ್‌, ಬಂಗಾರಪೇಟೆ

ತಾಲೂಕಿನ ಕಾಮಸಮುದ್ರ ಹೋಬಳಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಮರಳು ಉಪಯೋಗಿಸಲು ಬಿಡುತ್ತಿಲ್ಲ. ರಾಜಕಾರಣಿಗಳು ಶಿಫಾರಸು ಮಾಡಿದರೂ ಅಕ್ರಮ ಮರಳು ದಂಧೆ ನಡೆಯಲು ಬಿಡುವುದಿಲ್ಲ. ದಿನದ 24 ಗಂಟೆಯೂ ಪೊಲೀಸ್‌ ಇಲಾಖೆ ನಿಗಾವಹಿಸಿದೆ. ಅಕ್ರಮ ಮರಳು ದಂಧೆ ಹಾಗೂ ಮರಳು ಫಿಲ್ಟರ್‌ ಮಾಡದಂತೆ ಎಚ್ಚರವಹಿಸಲಾಗಿದೆ.
-ಆರ್‌.ದಯಾನಂದ್‌, ಸಬ್‌ ಇನ್ಸ್‌ಪೆಕ್ಟರ್‌, ಕಾಮಸಮುದ್ರ

Advertisement

Udayavani is now on Telegram. Click here to join our channel and stay updated with the latest news.

Next