Advertisement

ಅಕ್ರಮ ಮರಳು ಸಾಗಣೆ ಕಂಡರೆ ಅಧಿಕಾರಿಗಳ ವಿರುದ್ಧ ಕ್ರಮ: ಕೂರ್ಮಾರಾವ್‌

08:54 AM Feb 01, 2019 | |

ಯಾದಗಿರಿ: ಜಿಲ್ಲೆಯಲ್ಲಿ ಮರಳು ಅಕ್ರಮ ಸಾಗಣೆ ಕಂಡು ಬಂದರೆ ಆಯಾ ತಾಲೂಕು ಮಟ್ಟದಲ್ಲಿ ರಚಿಸಿರುವ ವಿವಿಧ ಇಲಾಖೆ ಅಧಿಕಾರಿಗಳ ತಂಡದ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಎಚ್ಚರಿಕೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಮರಳು ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುರಪುರ ತಾಲೂಕಿನಲ್ಲಿ ತಹಶೀಲ್ದಾರ್‌ ಸುರೇಶ ಅಂಕಲಗಿ ನೇತೃತ್ವದ ತಂಡ ಹೇಮನೂರು, ಕರ್ನಾಳ, ಅಡ್ವಡ್ಗಿ, ಹೆಮ್ಮಡಗಿ ಗ್ರಾಮಗಳಲ್ಲಿ ಮರಳು ಅಕ್ರಮ ಸಾಗಣೆ ಮತ್ತು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಎಎಸ್‌ಐ ಸೋಮಲಿಂಗಪ್ಪ ವಡಿಯಾರ್‌ ಅವರ ತಂಡಕ್ಕೆ ಚೌಡೇಶ್ವರಹಾಳ, ಸೂಗೂರು, ಶೆಳ್ಳಗಿ ಗ್ರಾಮಗಳನ್ನು ವಹಿಸಲಾಗಿದೆ. ಶಹಾಪುರ ತಾಲೂಕಿನಲ್ಲಿ ತಹಶೀಲ್ದಾರ್‌ ಸಂಗಮೇಶ ತಂಡ ಟೊಣ್ಣೂರು, ಕೊಳ್ಳೂರು, ಮರಕಲ್‌ ಗ್ರಾಮಗಳಲ್ಲಿ ನಿಗಾವಹಿಸಬೇಕು. ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್‌ ಬಕ್ಕಪ್ಪ ಅವರ ತಂಡ ಹಯ್ನಾಳ, ಯಕ್ಷಿಂತಿ ಹಾಗೂ ವಡಗೇರಾ ತಹಶೀಲ್ದಾರ್‌ ಪ್ರಕಾಶ ಹೊಸಮನಿ ತಂಡ ಚೆನ್ನೂರು, ಬೆಂಡೆಗುಂಬಳಿ ಗ್ರಾಮಗಳಲ್ಲಿ ನಿಗಾವಹಿಸಲು ನಿರ್ದೇಶಿಸಲಾಗಿದೆ.

ಯಾದಗಿರಿ ತಾಲೂಕಿನಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ತಂಡ ಹತ್ತಿಕುಣಿ, ಹೊರುಂಚಾ, ಯಡ್ಡಳ್ಳಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ನಾಗಪ್ಪ ಅವರ ತಂಡ ಕೂಡ್ಲೂರು, ರಾಂಪುರ, ಗೂಡೂರ, ಭೂ ವಿಜ್ಞಾನಿ ಕಿರಣ್‌ ತಂಡ ಕೊಂಡಾಪುರ, ಶೆಟ್ಟಳ್ಳಿ ಹಾಗೂ ಸಾರಿಗೆ ಇನ್‌ಸ್ಪೆಕ್ಟರ್‌ ವೆಂಕಟಪ್ಪ ಅವರ ತಂಡ ಕೊಂಕಲ್‌, ಯಲೆØೕರಿ ಗ್ರಾಮಗಳಲ್ಲಿ ನಿಗಾವಹಿಸಬೇಕು. ತಂಡದ ಸದಸ್ಯರು ಪ್ರತಿದಿನ ಈ ಗ್ರಾಮಗಳ ನದಿಪಾತ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕು. ಮುಖ್ಯಸ್ಥರು ವಾರದಲ್ಲಿ ಎರಡು ಬಾರಿ ಭೇಟಿ ನೀಡಬೇಕು ಎಂದು ಆದೇಶಿಸಿದ ಜಿಲ್ಲಾಧಿಕಾರಿಗಳು, ಒಂದು ವೇಳೆ ತಮಗೆ ವಹಿಸಿದ ಹಳ್ಳಿಗಳ ವ್ಯಾಪ್ತಿಯಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹ ಅಥವಾ ಸಾಗಾಣಿಕೆ ಕಂಡುಬಂದರೆ ತಂಡದ ಮುಖ್ಯಸ್ಥರನ್ನು ಹೊಣೆ ಮಾಡಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಮಾತನಾಡಿ, ನಿಗಾ ತಂಡದಲ್ಲಿರುವ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಮರಳು ನಿಯಂತ್ರಣ ಸಮಿತಿಯ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಮಾತನಾಡಿ, ಪೊಲೀಸ್‌ ಸಿಬ್ಬಂದಿ ಸರಿಯಾಗಿ ಸಹಕರಿಸದಿದ್ದರೆ ವರದಿ ನೀಡಿ. ಅಂತಹವರನ್ನು ತಕ್ಷಣ ಅಮಾನತು ಮಾಡಲಾಗುವುದು ಎಂದು ತಿಳಿಸಿದರು.

Advertisement

ಮರಳು ಬ್ಲಾಕ್‌ನಲ್ಲಿ ಸಿ.ಸಿ ಟಿವಿ, ವಾಹನ ತೂಕ ಮಾಡುವ ವೇಬ್ರಿಡ್ಜ್ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸುತ್ತಿರಬೇಕು. ಅಕ್ರಮ ಮರಳು ಸಾಗಾಣಿಕೆಗಾಗಿ ನದಿಗೆ ಹೋಗಲು ದಾರಿ ಮಾಡಿಕೊಟ್ಟ ಮತ್ತು ಅನಧಿಕೃತ ಮರಳು ಸಂಗ್ರಹಣೆಗೆ ಅವಕಾಶ ನೀಡಿದ ಜಮೀನು ಅನ್ನು ಕರ್ನಾಟಕ ಭೂ ಕಂದಾಯ ಅಧಿನಿಯಮದ ಅಡಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ. ಆದ್ದರಿಂದ ಜಮೀನು ಮಾಲೀಕರು ಇದಕ್ಕೆ ಆಸ್ಪದ ಕೊಡಬಾರದು. ಒಂದು ವೇಳೆ ಅಕ್ರಮ ಮರಳುಗಾರಿಕೆಗೆ ಜಮೀನು ಮಾಲೀಕರು ಸಹಕರಿಸಿದ್ದರೆ ಅವರ ವಿರುದ್ಧ ನೋಟಿಸ್‌ ಜಾರಿ ಮಾಡುವಂತೆ ಆದೇಶಿಸಿದರು.

ಚೆಕ್‌ಪೋಸ್ಟ್‌ಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಹಿಂದಿನ ಸಮಿತಿ ಸಭೆಯಲ್ಲಿ ಸೂಚಿಸಿದಂತೆ ಜಲಾಲ್‌ಪುರ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಲು ಕ್ರಮ ಕೈಗೊಳ್ಳದ ಕಾರಣ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಿಫ್‌ವುಲ್ಲಾ ಅವರ ವಿರುದ್ಧ ನೋಟಿಸ್‌ ಜಾರಿ ಮಾಡಲು ತಿಳಿಸಿದರು. ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌. ರವಿಶಂಕರ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜಿಲ್ಲಾಡಳಿತಕ್ಕೆ ವರದಿ ನೀಡಿ
ಮರಳು ಅಕ್ರಮ ಸಾಗಾಣಿಕೆ ಕುರಿತಂತೆ ನಿಗಾವಹಿಸಲು ರಚಿಸಿರುವ 9 ತಂಡಗಳ ಕಾರ್ಯನಿರ್ವಹಣೆ ಕುರಿತಂತೆ ರ್‍ಯಾಂಡಮ್‌ ಆಗಿ ಪರೀಕ್ಷಿಸಲು ಮೊಬೈಲ್‌ ಟೀಮ್‌ ರಚಿಸಿ, ಸಹಾಯಕ ಆಯುಕ್ತರು 15 ದಿನಕ್ಕೊಮ್ಮೆ ತಾಲೂಕು ಮಟ್ಟದ ಸಮಿತಿ ಸಭೆ ನಡೆಸಬೇಕು. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ತಡೆಗೆ 24/7 ಸಹಾಯವಾಣಿ ಆರಂಭಿಸಿ, ಸಿಬ್ಬಂದಿ ನೇಮಿಸಬೇಕು. ಅಕ್ರಮ ಮರಳು ಗಣಿಗಾರಿಕೆ ಅಥವಾ ಸಾಗಾಣಿಕೆ ಕಂಡು ಬಂದಲ್ಲಿ ನಿಯಮಾನುಸಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು. ನದಿಪಾತ್ರದಲ್ಲಿ ರಸ್ತೆ ನಿರ್ಮಿಸದಂತೆ ನಿಗಾವಹಿಸಬೇಕು. ತಂಡದ ಸದಸ್ಯರು ಭೇಟಿ ನೀಡದೆ ಗೈರಾದಲ್ಲಿ, ಅವರ ವಿರುದ್ಧ ಕ್ರಮಕ್ಕಾಗಿ ಆಯಾ ಇಲಾಖೆಗಳ ಮೇಲಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ವರದಿ ನೀಡಿ.
• ಎಂ. ಕೂರ್ಮಾರಾವ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next