ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
Advertisement
ಅಕ್ರಮ ಮರಳುಗಾರಿಕೆಯವರು ಜಿಲ್ಲಾಧಿ ಕಾರಿಗಳ ಸಹಿತ ಇತರ ಅಧಿಕಾರಿಗಳ ಮೇಲೆ ನಡೆಸಿದ್ದ ಕೊಲೆ ಯತ್ನ ಪ್ರಕರಣದ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಕಾರ್ಮಿಕರನ್ನು ಮಾತ್ರ ಬಂಧಿಸಲಾಗಿದೆ; ಮೂಲಸೂತ್ರಧಾರರನ್ನು ಬಂಧಿಸಿಲ್ಲ. ಅವರನ್ನೂ ಬಂಧಿಸಿ ಗೂಂಡಾ ಕಾಯ್ದೆ ಹಾಕಿ ಜೈಲಿಗಟ್ಟಿ ಎನ್ನುವ ಆಗ್ರಹಕ್ಕೆ ಎಎಸ್‌ಪಿಯವರು ಮೇಲಿನಂತೆ ಪ್ರತಿಕ್ರಿಯಿಸಿದರು. ಜಿಲ್ಲಾಧಿಕಾರಿಗಳ ಮೇಲಾದ ಕೊಲೆಯತ್ನ ಪ್ರಕರಣಕ್ಕೆ ಖಂಡನಾ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.
ಅಧಿಕಾರಿಗಳ ಮೇಲೆಯೇ ಹಲ್ಲೆಗೆ ಮುಂದಾಗುವ ಸ್ಥಿತಿಗೆ ನಮ್ಮ ವ್ಯವಸ್ಥೆಯೇ ಕಾರಣ. ಎಲ್ಲಿ ಲೋಪವಾಗುತ್ತಿದೆ ಎನ್ನುವುದನ್ನು ವಿಮರ್ಶಿಸೋಣ ಎಂದು ವಿಪಕ್ಷ ಸದಸ್ಯರು ಹೇಳಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿ ಸರಕಾರ, ಸಚಿವರದ್ದೇ ನಿರ್ಲಕ್ಷ್ಯ ಕಾರಣ. ಜಿ.ಪಂ. ಕಾನೂನು ರೂಪಿಸುವುದಲ್ಲ. ಸರಕಾರ ನಿರ್ಧರಿಸುವಂತಹದ್ದು. ಇಲ್ಲಿ ಮೊದಲು ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. “ಮರಳು ದಾಸ್ತಾನಿದೆ’
ಪ್ರಭಾರ ಸಿಇಒ, ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಮಾತನಾಡಿ, ಅಕ್ರಮ ಮರಳುಗಾರಿಕೆಯಿಂದ ದಾಸ್ತಾನಿರಿಸಿದ್ದ ಮರಳುಗಳನ್ನು ವಶಕ್ಕೆ ಪಡೆದು ಕುಂದಾಪುರ ಯಾರ್ಡ್‌ನಲ್ಲಿ ಶೇಖರಿಸಿಡಲಾಗಿದೆ. 89 ಲೋಡ್ ದಾಸ್ತಾನಿದೆ. ಬೇಡಿಕೆ ಬಂದಂತೆ ವಿತರಣೆ ಮಾಡಲಾಗುವುದು. ಹೆಚ್ಚಿನ ಮರಳಿನ ಅಗತ್ಯ ಕಂಡುಬಂದಲ್ಲಿ ಮಂಗಳೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮರಳು ತರಿಸಿಕೊಳ್ಳಲಾಗುವುದು ಎಂದರು.
Related Articles
ಯಾವುದೇ ಇಲಾಖೆ, ಏಜೆನ್ಸಿಯವರು ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವಾಗ ಸ್ಥಳೀಯ ಗ್ರಾ.ಪಂ.ಗೆ ಮಾಹಿತಿಗಳನ್ನು ನೀಡಬೇಕು. ಗ್ರಾ.ಪಂ.ನವರು ಅರ್ಜಿ ಕೊಡಿ ಮಾಹಿತಿ ನೀಡುತ್ತೇವೆಂದು ಹೇಳುವಂತಿಲ್ಲ ಎಂದು ಸಿಇಒ ತಿಳಿಸಿದರು.
Advertisement
ಗ್ರಾ.ಪಂ. ನೌಕರರಿಗೆ ಮಂಗಳೂರಿನಲ್ಲಿ ನೀಡುತ್ತಿರುವಂತೆ ಗ್ರೇಡ್-1 ಸಂಬಳ ನೀಡಲು ಜಿ.ಪಂ. ಉಪಾಧ್ಯಕ್ಷೆ ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿಇಒ ಹೇಳಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಸಮಸ್ಯೆ, ಸಭೆಗೆ ತಪ್ಪು ಉತ್ತರ ನೀಡುವುದು, ಕುಡಿಯುವ ನೀರು ಸರಬರಾಜು, ಸಣ್ಣ ನೀರಾವರಿ ಇಲಾಖೆಯ ಕಿಂಡಿ ಅಣೆಕಟ್ಟು ಸೋರಿಕೆ, ಕಟಪಾಡಿ ಏಣಗುಡ್ಡೆ ಫಾರೆಸ್ಟ್‌ಗೇಟ್ ಬಳಿ ಅಕ್ರಮ ಚಟುವಟಿಕೆ, ಬಸವ ವಸತಿ ಹಣ ಸಕಾಲದಲ್ಲಿ ಬಿಡುಗಡೆಯಾಗದ ಸಹಿತ ವಿವಿಧ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು.
ಸದಸ್ಯರಾದ ಜನಾರ್ದನ ತೋನ್ಸೆ, ಪ್ರತಾಪ್ ಹೆಗ್ಡೆ ಮಾರಾಳಿ, ಬಟ್ವಾಡಿ ಸುರೇಶ್ ಶೆಟ್ಟಿ, ಮೈರ್ಮಾಡಿ ಸುಧಾಕರ ಶೆಟ್ಟಿ, ಶಂಕರ ಪೂಜಾರಿ ಬೈಂದೂರು, ಶಿಲ್ಪಾ ಗಂಗಾಧರ ಸುವರ್ಣ, ಗೀತಾಂಜಲಿ ಎಂ. ಸುವರ್ಣ, ಗೌರಿ ದೇವಾಡಿಗ, ರಾಘವೇಂದ್ರ ಕಾಂಚನ್, ಚಂದ್ರಿಕಾ ರಂಜನ್ ಕೇಳ್ಕರ್, ರೇಶ್ಮಾ ಉದಯಕುಮಾರ್ ಶೆಟ್ಟಿ ಇನ್ನ, ಸುಮಿತ್ ಶೆಟ್ಟಿ ಬೈಲೂರು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಟಿ. ಬಾಬು ಶೆಟ್ಟಿ, ಉದಯ್ ಎಸ್. ಕೋಟ್ಯಾನ್, ಶಶಿಕಾಂತ್ ಪಡುಬಿದ್ರಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.
40 ಗುತ್ತಿಗೆದಾರರಿಗೆ ನೋಟಿಸ್ಕಳಪೆ ಕಾಮಗಾರಿ, ಟೆಂಡರ್ ಕರೆದರೂ ಕೆಲಸ ನಿರ್ವಹಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು ಬಂದ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, 40 ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು. ಕಳಪೆ ಕಾಮಗಾರಿಯಾಗಲು ಎಂಜಿನಿಯರ್‌ಗಳೂ ಹೊಣೆ. ಅವರನ್ನೂ ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. “ಬಿಪಿಎಲ್‌ಗೂ ಸೀಮೆಎಣ್ಣೆ ಲಭ್ಯ’
ರೇಶನ್ ಕಾರ್ಡು ಸಮಸ್ಯೆಗಳ ಕುರಿತು ಚರ್ಚೆಗೆ ಬಂದಾಗ, ಗ್ಯಾಸ್ ಇದ್ದರೆ ಸೀಮೆಎಣ್ಣೆ ಯಾಕೆ ಕೊಡೋದಿಲ್ಲ? ಎಂದು ಸದಸ್ಯರು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಗ್ರಾಮಾಂತರ ಪ್ರದೇಶದ ಎಪಿಎಲ್ ಕಾರ್ಡುದಾರರಿಗೂ 1 ಲೀ. ಸೀಮೆಎಣ್ಣೆ ವಿತರಿಸಲು ಹೊಸ ಆದೇಶ ಬಂದಿದೆ ಎಂದರು. ಆದೇಶದ ಪ್ರತಿ ಸಲ್ಲಿಸುವಂತೆ ಸಿಇಒ ಸೂಚಿಸಿದರು. ಸಚಿವರ ಮಾಹಿತಿಯೂ ಸೋರಿಕೆ!
ಉಸ್ತುವಾರಿ ಸಚಿವರು ಬ್ರಹ್ಮಾವರ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ; ನಿಲ್ಲಿಸಿ ಎಂದು ಬ್ರಹ್ಮಾವರ ಠಾಣೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯೂ ಸೋರಿಕೆಯಾಗಿ ಅಕ್ರಮ ಮರಳು ದಂಧೆಕೋರರಿಗೆ ಲಭಿಸಿತ್ತು. ಈ ಬಗ್ಗೆ ತನಿಖೆಯಾಗುತ್ತಿದೆ. ಇಲಾಖೆಯಲ್ಲಿನ ಲೋಪಗಳ ಬಗ್ಗೆ ಮಾತನಾಡುವಾಗ ಸದಸ್ಯ ಜನಾರ್ದನ ತೋನ್ಸೆ ಈ ವಿಷಯ ಪ್ರಸ್ತಾವಿಸಿದರು. ಸಚಿವರು, ಸರಕಾರವನ್ನೇ ಎಲ್ಲದಕ್ಕೂ ದೂಷಿಸಬೇಡಿ. ಎಲ್ಲರೂ ಒಕ್ಕೊರಲಿನಿಂದ ಅಕ್ರಮ ತಡೆಗೆ ಯೋಜನೆ ರೂಪಿಸೋಣ ಎಂದು ಹೇಳಿದ ಅವರು, ಅಕ್ರಮದಾಳಿಗೆ ತಂಡ ರಚಿಸುವಾಗ ದಕ್ಷ ಅಧಿಕಾರಿಗಳನ್ನೇ ನೇಮಿಸಿ ಎಂದು ಆಗ್ರಹಿಸಿದರು. “ಮಾದರಿ ಜಲ ಮರುಪೂರಣ ವ್ಯವಸ್ಥೆ’ ರಾಜ್ಯಕ್ಕೆ ಮಾದರಿಯಾಗಿ ಜಲ ಮರುಪೂರಣ ವ್ಯವಸ್ಥೆಯನ್ನು ಉಡುಪಿ ಜಿಲ್ಲೆಯಲ್ಲಿ ಅಳವಡಿಸಲಾಗುವುದು. ಜಿಲ್ಲೆಯ 26 ಜಿ.ಪಂ. ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಪ್ರಾರಂಭಿಕವಾಗಿ ಒಂದು ಕೊಳವೆ ಬಾವಿಗಳಿಗೆ ಜಲ ಮರುಪೂರಣ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಹಾಗೆಯೇ ಎಲ್ಲ ಜಿ.ಪಂ. ಸದಸ್ಯರು ತಮ್ಮ ಮನೆಗಳಿಗೆ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಸಹಕರಿಸಬೇಕು.
– ದಿನಕರ ಬಾಬು, ಜಿ.ಪಂ. ಅಧ್ಯಕ್ಷರು