ಕನಕಗಿರಿ: ಸಮೀಪದ ಇಂಗಳದಾಳ ಗ್ರಾಮದ ಸರ್ವೇ ನಂ. 1ರ ಸರ್ಕಾರಿ ಭೂಮಿಯಲ್ಲಿ ಮೂರು ನಾಲ್ಕು ತಿಂಗಳಿಂದ ಅಕ್ರಮ ಮರಳು ಸಾಗಾಣಿಕೆ ಅವ್ಯಾಹತವಾಗಿ ನಡೆತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದ ಅಧಿಕಾರಿಗಳು ಜಾಣ ಕುರುಡುತನವನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಅಕ್ರಮ ಮರಳು ಸಾಗಾಣಿಕೆಯನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂಗಳದಾಳ ಗ್ರಾಮದ ಹನುಮಂತಪ್ಪ ವಾಲ್ಮೀಕಿ ಎಂಬುವವರು ಹಲವಾರು ಬಾರಿ ತಹಶೀಲ್ದಾರ್‌ಗೆ ಮತ್ತು ಪೊಲೀಸ್ ಠಾಣೆಗೆ ಲಿಖೀತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಅಕ್ರಮ ಮರಳು ದಂಧೆಗೆ ಅಧಿಕಾರಿಗಳೇ ಸಹಕರಿಸುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ನ್ಯಾಯಕ್ಕಾಗಿ ಅಲೆದಾಟ: ಇಂಗಳದಾಳ ಗ್ರಾಮದ ಸರ್ವೇ ನಂ. 1 ಸರ್ಕಾರಿ ಭೂಮಿಯಲ್ಲಿ ಹನುಮಂತಪ್ಪ ವಾಲ್ಮೀಕಿ ಎಂಬುವವರು ಮೂರು ವರ್ಷಗಳಿಂದ ಕೃಷಿ ಚಟುವಟಿ ಮಾಡುತ್ತಿದ್ದಾರೆ. ಆದರೆ ಇದೇ ಗ್ರಾಮದ ಯಮನೂರಪ್ಪ ರಾಠೊಡ್ ಎಂಬುವವರು ಸರ್ಕಾರಿ ಭೂಮಿಯಲ್ಲಿ ರಾಜರೋಷವಾಗಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಹೋದಾಗ ಹನುಮಂತಪ್ಪ ವಾಲ್ಮೀಕಿ ಹಾಗೂ ಅವರ ಪುತ್ರನ ಮೇಲೆ ಯಮನೂರಪ್ಪ ರಾಠೊಡ್ ಹಲ್ಲೆಗೆ ಯತ್ನಿಸಿದ್ದಾರೆ ಈ ಬಗ್ಗೆ ವಿಡಿಯೋಗಳು ಇವೆ. ಇದರಿಂದ ಯಮನೂರಪ್ಪ ರಾಠೊಡ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ತಹಶೀಲ್ದಾರ್ ಕಚೇರಿಗೆ ಮತ್ತು ಪೊಲೀಸ್ ಠಾಣೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹನುಮಂತಪ್ಪ ವಾಲ್ಮೀಕಿ.
ಅಧಿಕಾರಿಗಳು ಭಾಗಿ: ಇಂಗಳದಾಳ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ಹಲವಾರು ವಿಡಿಯೋಗಳು ಇದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳಲು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂಬ ವಂದತಿ ಕೇಳಿ ಬರುತ್ತಿದೆ.
ಇಂಗಳದಾಳ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ವರದಿಯನ್ನು ನೀಡುವಂತೆ ಕಂದಾಯ ನಿರೀಕ್ಷಕರಿಗೆ ಸೂಚಿಸಿದ್ದೇನೆ. ವರದಿ ನೀಡಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
•ರವಿ ಅಂಗಡಿ, ತಹಶೀಲ್ದಾರ್
ಶರಣಪ್ಪ ಗೋಡಿನಾಳ