Advertisement

ಅಕ್ರಮ ಮರಳು ಮಾಫಿಯಾ: ಬೆರಗಾದ ಜಿಲ್ಲೆಯ ಜನತೆ

02:06 PM Apr 06, 2017 | Team Udayavani |

ಕುಂದಾಪುರ: ಕಳೆದ ಒಂದು ವರ್ಷದಿಂದ ಅಕ್ರಮ ಮರಳುಗಾರಿಕೆಯ ದಂಧೆಗೆ ತತ್ತರಿಸಿ ಹೋದ  ತಾಲೂಕು ಪ್ರಸಕ್ತವಾಗಿ ಎರಡು ದಿನಗಳ ಕಾಲ ಈ ದಂಧೆಗೆ ಬ್ರೇಕ್‌  ದೊರಕಿದ್ದರೂ ಅದೇ ಅಡ್ಡೆಗಳಲ್ಲಿ  ಪುನಃ ಸಣ್ಣ ಪ್ರಮಾಣದಲ್ಲಿ  ಅಕ್ರಮ ಮರಳುಗಾರಿಕೆಗಳು ಆರಂಭವಾಗಿದೆ ಎನ್ನುವ ಸುದ್ದಿಗಳು ಕೇಳಿಬಂದಿವೆ.

Advertisement

ಕಂಡೂರಿನಲ್ಲಿ  ರವಿವಾರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ಮೇಲೆ  ನಡೆದ ಹಲ್ಲೆಯ ಘಟನೆಯ ಅನಂತರ ಮರಳು ಅಡ್ಡೆೆಗಳಲ್ಲಿ ಯಾವುದೇ ಚಟುವಟಕೆಗಳು ಕಂಡು ಬರದಿದ್ದರೂ ಒಳನಾಡಿಗ ಕೆಲವು ಕಡೆಗಳಲ್ಲಿ ಸಣ್ಣಪ್ರಮಾಣದಲ್ಲಿ  ಕದ್ದು ಮುಚ್ಚಿ ಮತ್ತೆ ಈ ದಂಧೆ ಆರಂಭವಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.  ಆದರೆ ಹೆಚ್ಚಿನ ಎಲ್ಲ ದಕ್ಕೆಗಳಲ್ಲೂ  ಮೇಲ್ನೊಟಕ್ಕೆ ಯಾವುದೇ ಮರಳುಗಾರಿಕೆ ಕಂಡು ಬಂದಿಲ್ಲ. ಕಂಡೂರು ಹಾಗೂ ಹಳ್ನಾಡು ಮರಳುಗಾರಿಕಾ ಪ್ರದೇಶದಲ್ಲಿ ಪೊಲೀಸ್‌ ಕಣ್ಗಾವಲನ್ನು ಒದಗಿಲಾಗಿದೆ.  ರವಿವಾರದ ಘಟನೆಯ ಅನಂತರ ಎರಡು ದಿನಗಳ ಕಾಲ ಯಾವುದೇ ಮರಳುಗಾರಿಕೆ  ಚಟುವಟಿಕೆಗಳು ನಡೆಯದಿದ್ದರೂ ಮೊಳಹಳ್ಳಿ, ಹಟ್ಟಿಯಂಗಡಿಗಳಲ್ಲಿ ಸಣ್ಣ ಪ್ರಮಾಣದ ಮರಳುಗಾರಿಕೆ ಪುನಃ ಆರಂಭವಾಗಿದೆ ಎನ್ನುವ ಅಂಶ ತಿಳಿದು ಬಂದಿದೆ.   ಆದರೆ ಕಂಡೂರು, ಹಳ್ನಾಡು, ಬಳ್ಕೂರು, ಜಪ್ತಿ, ಗುಲ್ವಾಡಿ ಭಾಗಗಳಲ್ಲಿ ಸಂಪೂರ್ಣ ಮರಳುಗಾರಿಕೆ ನಿಂತಿದೆ.

ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತು  ನೀಡಲು ಆಗ್ರಹ 
ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತು ನೀಡದೇ ಹಾಗೂ ಕರಾವಳಿಗೆ ಪ್ರತ್ಯೇಕ ನೀತಿಯನ್ನು ಅಳವಡಿಸುವಲ್ಲಿ ವೈಫಲ್ಯ ಕಂಡುಕೊಂಡಿರುವುದೇ ಅಕ್ರಮ ಮರಳುಗಾರಿಕೆಗೆ ಕಾರಣವಾಗಿದೆ ಎನ್ನುವುದು ಕೆಲವರ ವಾದವಾಗಿದೆ.  ಸರಕಾರ ಏಕ ರೂಪದ ಮರಳು ನೀತಿಯನ್ನು ಜಾರಿಗೆ ತಂದು ಮರಳು ಏಕರೂಪದ ನೀತಿಯಡಿ ಟೆಂಡರ್‌ ಮೂಲಕ ಮರಳು ವಿಕ್ರಯವಾದಾಗ ಮರಳು ಅಭಾವವಾಗಲು  ಒಂದು ಕಾರಣವಾದರೆ,  ಇನ್ನೊಂದೆಡೆ ಸಾಂಪ್ರದಾಯಿಕ  ಪದ್ಧತಿಯಲ್ಲಿ ಮರಳು ತೆಗೆಯುವ ಪ್ರಕ್ರಿಯೆ ನಿಂತಿರುವುದು ಇನ್ನೊಂದು ಕಾರಣವಾಗಿದೆ ಎನ್ನಲಾಗಿದೆ.  ಪ್ರತಿ ವರ್ಷ ತಮ್ಮ ತಮ್ಮ ಪರಿಸರದಲ್ಲಿ ತಮಗೆ ಕೈಗೆಟಕುವ ಮರಳನ್ನು ಸ್ವತಃ ತೆಗೆದು ಸಂಪ್ರದಾಯಬದ್ಧವಾಗಿ ಮರಳು ತೆಗೆ‌ಯುತ್ತಿದ್ದ  ಜನರಿಗೆ ಸರಕಾರದ ಈ ಹೊಸ ನೀತಿಯಿಂದ ಮರಳು ತೆಗೆಯಲು ಅವಕಾಶ ದೊರೆಯದೇ ಅವರು ಕೆಲಸ ಕಳೆದುಕೊಂಡು ಕೈ ಚೆಲ್ಲಿ ಕುಳಿತರು. ಈ ಹಂತದಲ್ಲೇ ಅಕ್ರಮ ಮರಳುಗಾರಿಕೆ ಹುಟ್ಟಿಕೊಳ್ಳಲು ಕಾರಣವಾಯಿತು ಎಂಬುದು ಹಲವರ ಅಭಿಪ್ರಾಯ.

ಸರಕಾರದ ನೀತಿ: ಅನ್ಯ ರಾಜ್ಯಕ್ಕೆ ಮರಳು 
ಸರಕಾರ ಲೋಕೋಪಯೋಗಿ ಇಲಾಖೆಯ ಟೆಂಡರ್‌ ಮೂಲಕ ಮರಳುಗಾರಿಕೆಯ ಪರವಾನಿಗೆಯನ್ನು ಕೊಡಲು ಆರಂಭಿಸಿತು. ಆದರೆ ಇಲ್ಲಿ ಪರವಾನಿಗೆ ಹೊಂದಿದವರು ಭಟ್ಕಳ, ಶಿವಮೊಗ್ಗ, ಬೆಂಗಳೂರು ಹೀಗೆ ಅನ್ಯ ರಾಜ್ಯಗಳಿಗೆ  ಮರಳನ್ನು ಕಳುಹಿಸುತ್ತಿದ್ದಾರೆ ಎನ್ನುವ ದೂರು ಗಳು ಕಂಡು ಬಂದಾಗ ಜಿಲ್ಲಾಡಳಿತ ಸೂಕ್ತ ಸ್ಥಳದಲ್ಲಿ ಚೆಕ್‌ ಪೋಸ್ಟ್‌ನ್ನು ಸ್ಥಾಪಿಸಿತ್ತಾದರೂ  ಚೆಕ್‌ ಪೋಸ್ಟ್‌ಗಳ ಮೂಲಕ ನುಸುಳಿಕೊಂಡು ಇವುಗಳು ವಹಿವಾಟು ನಡೆಸುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು.  

ಉದಯ ಆಚಾರ್‌ ಸಾಸ್ತಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next