ರಾಯಚೂರು: ಜಿಲ್ಲೆಯಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಕುರಿತು ಆರ್‌ಟಿಐ ಕಾರ್ಯಕರ್ತರೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಕ್ರಮ ವಹಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ.
ಅಕ್ರಮ ಮರಳು ಗಣಿಗಾರಿಕೆ ತಡೆಗೆ ಹೆಚ್ಚು ಶ್ರದ್ಧೆಯಿಂದ ಕೆಲಸ ಮಾಡುವಂತೆ ಎಸ್‌ಪಿ ನಿಖೀಲ್ ಬಿ. ಸೂಚನೆ ನೀಡಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕಾಡ್ಲೂರು, ಕರೇಕಲ್, ದೇವದುರ್ಗ ಭಾಗಗಳಲ್ಲಿ ಹೆಚ್ಚಾಗಿ ಅಕ್ರಮ ಮರಳು ಸಾಗಣೆ ಪ್ರಕರಣಗಳಿದ್ದು, ದೇವದುರ್ಗದ ಆರ್‌ಟಿಐ ಕಾರ್ಯಕರ್ತ ಸರ್ವೋತ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಕ್ರಮ ಮರಳು ತಡೆಗಟ್ಟುವಲ್ಲಿ ಸಂಬಂಧಪಟ್ಟ ಇಲಾಖೆ ವಿಫಲವಾಗಿರುವ ಬಗ್ಗೆ ದೂರು ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲು ಸರ್ವೋತ್ಛ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಅನಧಿಕೃತ ಮರಳು ಸಾಗಣೆಯಾಗದಂತೆ ನಿಗಾ ವಹಿಸಬೇಕಿದೆ. ತನಿಖಾ ಠಾಣೆಗಳಿಗೆ ನಿತ್ಯ ಶಿಫ್ಟ್‌ಗಳಂತೆ ಠಾಣೆಯ ಸಿಬ್ಬಂದಿ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ಮತ್ತು ಮರಳು ಸಮಿತಿ ಸದಸ್ಯರ ತಂಡದೊಂದಿಗೆ ಪರವಾನಗಿ ಇಲ್ಲದೇ ಹಾಗೂ ಪರವಾನಗಿ ಮೀರಿ ಹೆಚ್ಚಿನ ಪ್ರಮಾಣದ ಮರಳು ಸಾಗಿಸುವ ವಾಹನಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದರು.
ಅಕ್ರಮ ಮರಳು ಸಾಗಿಸುತ್ತಿದ್ದಲ್ಲಿ ವಿಡಿಯೋ, ಛಾಯಾಚಿತ್ರ ತೆಗೆದು ದಾಖಲೆ ತಯಾರಿಸಬೇಕು. ಇಲ್ಲವಾದರೆ ವಾಹನ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಹೂಡುವ ಪ್ರಕರಣ ವಜಾಗೊಳ್ಳುವ ಸಂಭವವಿರುತ್ತದೆ. ತಾಲೂಕು ಮಟ್ಟದ ಟಾಸ್ಕ್ಪೋರ್ಸ್ ಸಮಿತಿ ರಚಿಸಿ ಹೆಚ್ಚಿನ ಪ್ರಮಾಣದ ಲೋಡ್‌ಗಳನ್ನು ಹೊಂದಿರುವ ಮರಳು ವಾಹನಗಳನ್ನು ತಡೆದು ವಿಚಾರಣೆ ನಡೆಸಬೇಕು ಎಂದರು.
ಎಡಿಸಿ ಕೆ.ಆರ್. ದುರುಗೇಶ್ ಮಾತನಾಡಿ, ಅಕ್ರಮ ಮರಳು ಗಣಿಗಾರಿಕೆ ತಡೆಗಿರುವ ಕಾಯಿದೆ ಕಾನೂನನ್ನು ಸರಿಯಾಗಿ ಬಳಸಿಕೊಳ್ಳುವಂತೆ ಅಧಿ ಕಾರಿಗಳಿಗೆ ತಿಳಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ವಿಶ್ವನಾಥ, ಕಿರಣ ಕುಮಾರ್, ಸಾರಿಗೆ ಅಧಿಕಾರಿ ವಿನಯಾ ಕಟ್ಟೋಕರ್ ಸೇರಿ ಇತರರಿದ್ದರು.