Advertisement

Illegal sale of alcohol: ಕುಡುಕರ ಸಂತೆಯಂತಾದ ಗ್ರಾಮಗಳು!

02:52 PM Mar 20, 2024 | Team Udayavani |

ತಿಪಟೂರು: ತಾಲೂಕಿನಾದ್ಯಂತ ನಗರ ಹಾಗೂ ಹಳ್ಳಿಹಳ್ಳಿಗಳಲ್ಲಿ ಎಗ್ಗಿಲ್ಲದ ಅಕ್ರಮ ಮದ್ಯಮಾರಾಟ ನಡೆಯುತ್ತಿರುವುದು ಅಬಕಾರಿ ಹಾಗೂ ಪೊಲೀಸರಿಗೆ ಗೊತ್ತಿದ್ದರೂ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರೇ ಆರೋಪಿಸುತ್ತಿದ್ದಾರೆ.

Advertisement

ಬಹುತೇಕ ಗ್ರಾಮೀಣ ಪ್ರದೇಶಗಳ ಪೆಟ್ಟಿಗೆ ಅಂಗಡಿ ಹಾಗೂ ವಾಸದ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ  ನಡೆಯುತ್ತಿದ್ದು ಕೆಲ ಮದ್ಯದ ಅಂಗಡಿ ಮಾಲಿಕರು ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಈ ವಿಷಯ ಅಬಕಾರಿ ಇಲಾಖೆಗೆ ತಿಳಿದಿದ್ದರೂ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ.

ಗ್ರಾಮಗಳಲ್ಲಿ ಶಾಂತಿ ಇಲ್ಲ: ಪ್ರತಿನಿತ್ಯ ಕುಡಿದು ಬಂದು ಮಹಿಳೆಯರ ಮೇಲೆ ದೌರ್ಜನ್ಯ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವುದರಿಂದ ಮಕ್ಕಳು, ಮಹಿಳೆಯರು, ಹಿರಿಯರು ಮಾನಸಿಕ ಸಂಕಷ್ಟಕ್ಕೀ ಡಾಗಿದ್ದಾರೆಂದು ಮಹಿಳಾ ಸಂಘಟನೆಗಳವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಅನೇಕ ಗ್ರಾಮೀಣ ಪ್ರದೇಶಗಳು ಕುಡುಕರ ಸಂತೆಯಾಗಿದ್ದು ಸಂಜೆ 7ಗಂಟೆಯಾದರೆ ಸಾಕು ಅಕ್ರಮ ಮದ್ಯ ಮಾರಾಟ ಮನೆಗಳ ಬಳಿ, ಪೆಟ್ಟಿಗೆ ಅಂಗಡಿಗಳಲ್ಲಿ ನಡೆಯುತ್ತಿದ್ದು ಗ್ರಾಮಗಳಲ್ಲಿ ಶಾಂತಿ ಇಲ್ಲದಂತಾಗಿದೆ ಎಂಬುದು ಹಿರಿಯರ ದೂರಾಗಿದೆ.

ಅಧಿಕಾರಿ ಕಾರ್ಯವೈಖರಿ ಕಾದು ನೋಡಬೇಕಿದೆ:

ಜಿಲ್ಲಾ ಅಬಕಾರಿ ಅಧಿಕಾರಿಗಳು, ಪೊಲೀಸ್‌ ವರಿ ಷ್ಠಾಧಿಕಾರಿಗಳು, ತಾಲೂಕು ಅಬಕಾರಿ ಅಧಿಕಾರಿಗಳ ವಿರುದ್ಧ ಹಾಗೂ ಅಕ್ರಮ ಮದ್ಯದಂಗಡಿ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಂಡು ಅಕ್ರಮ ಮದ್ಯ ಮಾರಾಟ ದಂಧೆಗೆ ಬ್ರೇಕ್‌ ಹಾಕುವರೇ ಎಂಬುದನ್ನು ಕಾದುನೋಡಬೇಕಿದೆ.

Advertisement

ಸ್ತ್ರೀ ಕುಲಕ್ಕೆ ಕಪ್ಪು ಚುಕ್ಕೆ :

ಕುಡಿತದ ದಾಸರಾಗಿರುವ ಕೆಲವರು ಹಳ್ಳಿಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದು ಕಳ್ಳರನ್ನು ಕಾಯು ವುದೇ ಒಂದು ಕೆಲಸವಾಗಿದೆ ಎಂದು ಕಿಬ್ಬನಹಳ್ಳಿ ಕ್ರಾಸ್‌ನ ರೈತ ಪ್ರಸಾದ್‌ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ದೂರು ನೀಡುತ್ತೇವೆಂದು ಮದ್ಯ ಮಾರುವ ಅಂಗಡಿಗಳ ಮಾಲಿಕರಿಗೆ ಮಹಿಳೆ ಯರು ಹೇಳಿದರೆ ಏನಾದರೂ ಮಾಡಿಕೊಳ್ಳಿ ನಾವು ಯಾರಿಗೂ ಹೆದರುವುದಿಲ್ಲ. ಎಲ್ಲರಿಗೂ ಮಾಮೂಲಿ ಕೊಟ್ಟೇ ವ್ಯಾಪಾರ ಮಾಡುತ್ತಿದ್ದೇವೆಂದು ರಾಜರೋಷ ವಾಗಿ ಹೇಳುತ್ತಾರೆಂದು ನೊಂದ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಇನ್ನೂ ಕೆಲ ಗ್ರಾಮ ಗಳಲ್ಲಿ ಮಹಿಳೆಯರೇ ತಮ್ಮ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಸ್ತ್ರೀಕುಲಕ್ಕೆ ಕಪ್ಪುಚುಕ್ಕೆ ಇಟ್ಟಂತಾಗಿದೆ ಎಂಬುದು ಜವಾಬ್ದಾರಿ ಯುತ ಮಹಿಳಾ ಸಂಘಗಳವರ ಆರೋಪವಾಗಿದೆ.

ನಗರ, ಬಹುತೇಕ ಗ್ರಾಮಗಳ ಅಂಗಡಿ, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಮನೆಯಲ್ಲಿ ಪ್ರತಿನಿತ್ಯ ಜಗಳ, ಗಲಾಟೆ ಹೆಚ್ಚಾಗುತ್ತಿದ್ದು ನೆಮ್ಮದಿಯಾಗಿರಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.-ರಾಧಾ, ವಸಂತಮ್ಮ, ನೊಂದ ಮಹಿಳೆಯರು, ಹೊನ್ನವಳ್ಳಿ

ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದೆ. ಈ ಬಗ್ಗೆ ಅಬಕಾರಿ, ಸಂಬಂಧಪಟ್ಟ ಠಾಣೆಗೂ ಮನವಿ ಸಲ್ಲಿಸಿದ್ದರೂ ಗಮನಹರಿಸಿಲ್ಲ.-ಚಿಕ್ಕಮ್ಮ, ಭಾಗ್ಯ, ಮಹಿಳಾ ಸ್ವಸಹಾಯ ಸಂಘ ಒಕ್ಕೂಟದ ಸದಸ್ಯೆಯರು, ನೊಣವಿನಕೆರೆ.

– ರಂಗಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next