Advertisement

ಕೇರಳದಲ್ಲಿ ಬಾಂಗ್ಲಾ ಪ್ರಜೆಗಳ ಅಕ್ರಮ ವಾಸ್ತವ್ಯ: 35 ಮಂದಿ ಬಂಧನ

10:26 AM Sep 07, 2017 | |

ಕಾಸರಗೋಡು: ಭಾರತಕ್ಕೆ ಅಕ್ರಮವಾಗಿ ನುಸುಳುವ ಬಾಂಗ್ಲಾ ದೇಶದ ಪ್ರಜೆಗಳು ಕೇರಳದಲ್ಲಿ ಅಪಾರ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಸಂಬಂಧ 35 ಮಂದಿಯನ್ನು ವಿವಿಧೆಡೆಗಳಿಂದ ಪೊಲೀಸರು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾಸರಗೋಡಿನಲ್ಲೂ ಬಾಂಗ್ಲಾ ಪ್ರಜೆಗಳಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

Advertisement

ಬಾಂಗ್ಲಾ ಪ್ರಜೆಗಳು ಅಕ್ರವಾಗಿ ಭಾರತದೊಳಕ್ಕೆ ನುಸುಳುತ್ತಿದ್ದು, ಇದು ದೇಶದ ಆಂತರಿಕ ಭದ್ರತೆಗೆ ಭಾರೀ ಅಪಾಯವನ್ನೊಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪತ್ತೆಹಚ್ಚಲು ಕೇರಳ ಪೊಲೀಸರು ಎಲ್ಲ ಜಿಲ್ಲೆಗಳಲ್ಲೂ ತನಿಖೆ ಆರಂಭಿಸಿದ್ದಾರೆ. ಇದರಂತೆ ಮಲಪ್ಪುರ ಎಡವಣ್ಣಪಾರದಲ್ಲಿ ಮಲಪ್ಪುರ ಜಿಲ್ಲಾ ಪೊಲೀಸ್‌ ವರಿಷ್ಠ ಅಧಿಕಾರಿ ದಿಬೇಶ್‌ ಕುಮಾರ್‌ ಬೆಹ್ರ ನೀಡಿದ ನಿರ್ದೇಶದಂತೆ ಸಿ.ಐ. ಮೊಹಮ್ಮದ್‌ ಹನೀಫಾ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 35 ಮಂದಿ ಬಾಂಗ್ರಾ ಪ್ರಜೆಗಳನ್ನು ಬಂಧಿಸಲಾಗಿದೆ.

ಎಡವಣ್ಣಾಪಾರದ ಬಾಡಿಗೆ ಮನೆಯಲ್ಲಿ ಹೊರ ರಾಜ್ಯ ಕಾರ್ಮಿಕರ ಸೋಗಿನಲ್ಲಿ ಅವರು ಇಲ್ಲಿ ವಾಸಿಸುತ್ತಿದ್ದರು. ವಿದೇಶದಿಂದ ಅಕ್ರಮವಾಗಿ ಭಾರತದೊಳಗೆ ನುಗ್ಗಿ ವಾಸಿಸುತ್ತಿರುವ ಸೆಕ್ಷನ್‌ ಪ್ರಕಾರ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರು ಭಾರತದೊಳಗೆ ಅಕ್ರಮವಾಗಿ ನುಸುಳಿದ ಮತ್ತು ಅದರ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು, ಕೇರಳ ರಾಜ್ಯ ಪೊಲೀಸ್‌ ಗುಪ್ತಚರ ವಿಭಾಗ ಮತ್ತು ಕೇಂದ್ರ ಗುಪ್ತಚರ ವಿಭಾಗವೂ ಸಮಗ್ರ ತನಿಖೆ ನಡೆಸುತ್ತಿದೆ.

ಪಾಸ್‌ಪೋರ್ಟ್‌, ಮೊಬೈಲ್‌ ವಶ: ಬಾಂಗ್ಲಾ ಪ್ರಜೆಗಳು ವಾಸಿಸುತ್ತಿದ್ದ ಬಾಡಿಗೆ ಮನೆಗಳಿಗೆ ಪೊಲೀಸರು ನಡೆಸಿದ ದಾಳಿ ಮತ್ತು ತಪಾಸಣೆಯಲ್ಲಿ ಪಾಸ್‌ಪೋರ್ಟ್‌ಗಳು, ಗುರುತು ಚೀಟಿಗಳು, ಹಲವು ಮೊಬೈಲ್‌ ಫೋನ್‌ಗಳು, ಸಿಮ್‌ಗಳನ್ನು ವಶಪಡಿಸಿಕೊಂಡು ತೀವ್ರ ಪರಿಶೀಲನೆಗೊಳಪಡಿಸಿದ್ದಾರೆ.

ಪಶ್ಚಿಮ ಬಂಗಾಲ ನಿವಾಸಿಗಳೆಂಬ ತಪ್ಪು ಮಾಹಿತಿ ನೀಡಿ ಅವರು ಕೇರಳಕ್ಕೆ ಬಂದು ಕಳೆದ ಎರಡು ವರ್ಷಗಳಿಂದ ಹಲವೆಡೆ ಪದೇ ಪದೇ ತಮ್ಮ ವಾಸ್ತವ್ಯ ಬದಲಾಯಿಸಿಕೊಂಡು ಹೊರ ರಾಜ್ಯ ಕಾರ್ಮಿಕರ ಸೋಗಿನಲ್ಲಿ ಜೀವಿಸುತ್ತಿದ್ದರು. ಅವರು ಪದೇ ಪದೇ ವಾಸ್ತವ್ಯ ಬದಲಾಯಿಸುತ್ತಿರುವುದು ಪೊಲೀಸರಲ್ಲಿ ತೀವ್ರ ಶಂಕೆ ಉಂಟು ಮಾಡಿದೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಕೇರಳದ ಹೆಚ್ಚಿನ ಜಿಲ್ಲೆಗಳಲ್ಲಿ ಸಾವಿರಾರು ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ವಾಸ್ತವ್ಯ ಹೂಡಿದ್ದಾರೆಂಬ ಬಗ್ಗೆಯೂ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ.

Advertisement

ಪಾಕ್‌ ಏಜೆಂಟರು !
ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ ಬರುವ ಬಾಂಗ್ಲಾ ಪ್ರಜೆಗಳಲ್ಲಿ ಹಲವರು ಪಾಕಿಸ್ಥಾನದ ಬೇಹುಗಾರ ಸಂಘಟನೆಯಾದ ಐಎಸ್‌ಐ ಏಜೆಂಟರಾಗಿಯೂ, ಇನ್ನು ಕೆಲವರು ಉಗ್ರಗಾಮಿ ಸಂಘಟನೆಗಳ ಏಜೆಂಟರಾಗಿಯೂ ಭಾರತದ ಹಲವೆಡೆ ಅಕ್ರಮವಾಗಿ ತಂಗಿದ್ದು ಭಾರತ ವಿರೋಧಿ ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಜತೆಗೆ ಪಾಕ್‌ನಲ್ಲಿ ಮುದ್ರಿಸಿದ ಭಾರತದ ನಕಲಿ ನೋಟುಗಳನ್ನು ಭಾರತದಲ್ಲಿ ವಿತರಿಸುವ ಏಜೆಂಟರಾಗಿಯೂ ಕಾರ್ಯವೆಸಗುತ್ತಿದ್ದಾರೆ. ಇಂತಹ ಬೆಳವಣಿಗೆ ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ ಎಂಬ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಕೇಂದ್ರ ಗೃಹ ಖಾತೆ ರಾಜ್ಯಗಳಿಗೆ ನಿರ್ದೇಶ ನೀಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next