ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಮೃತ ಹೆಣ್ಣು ಮಗು ಶವ ಬಿಟ್ಟು ತಲೆಮರೆಸಿಕೊಂಡಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಗೋಕುಲ ರಸ್ತೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರು ತಮ್ಮ ಅಕ್ರಮ ಸಂಬಂಧಕ್ಕೆ ನಾಲ್ಕು ವರ್ಷದ ಮಗುವನ್ನು ಬಲಿ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಕರಣದಲ್ಲಿ ಮೂಲತಃ ಬೆಳಗಾವಿಯ ಕಾಸಬಾಗ ಮಾರುತಿ ಗಲ್ಲಿಯ ಇಲ್ಲಿನ ಗೋಕುಲ ಗ್ರಾಮದ ಕುರ್ಡಿಕೇರಿ ಓಣಿಯ ಪೂಜಾ ಆರ್. ತಾಳೂಕರ ಹಾಗೂ ವಿದ್ಯಾನಗರ ನೇಕಾರ ಕಾಲೋನಿಯ ದಾದಾಪೀರ ಊರ್ಫ್ ದದ್ದು ಬಿ. ಚಳ್ಳಮರದಶೇಖ ಎಂಬುವವರೇ ಬಂಧಿತರಾಗಿದ್ದಾರೆ ಎಂದರು.
ಇವರಿಬ್ಬರು ತಮ್ಮ ಮಗಳು ಖುಷಿ ರಾಜು ತಾಳೂಕರ (4) ಮನೆಯಲ್ಲಿ ಬಿದ್ದು ಗಾಯಗೊಂಡಿದ್ದಾಳೆ ಎಂದು ಆ. 20ರಂದು ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ ಮಗು ಮೃತಪಟ್ಟಿದೆ ಎಂದು ಗೊತ್ತಾಗುತ್ತಿದ್ದಂತೆ ಶವ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಬಾಲಕಿಯ ತಲೆಯ ಹಿಂಭಾಗದಲ್ಲಿ ಹೊಡೆತ ಬಿದ್ದಿದ್ದರಿಂದ ಸಾವಿನಲ್ಲಿ ಸಂಶಯವಿದೆ ಎಂದು ಗೋಕುಲ ರಸ್ತೆ ಠಾಣೆ ಇನ್‌ಸ್ಪೆಕ್ಟರ್ ದಿಲೀಪ ಪಿ. ನಿಂಬಾಳಕರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇವರಿಬ್ಬರು ಕಿಮ್ಸ್‌ನಲ್ಲಿ ಮೃತ ಮಗು ಬಿಟ್ಟು ಹೋಗಿದ್ದು ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ದಾಖಲಾಗಿದ್ದವು. ಮೃತ ಬಾಲಕಿಯ ವಾರಸುದಾರರ ಬಗ್ಗೆ ಕಲೆ ಹಾಕಿ, ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗಿತ್ತು ಎಂದು ಹೇಳಿದರು.
ಪತಿ ಬಿಟ್ಟು ಪ್ರಿಯಕರನೊಂದಿಗಿದ್ದ ಪೂಜಾ: ಬೆಳಗಾವಿ ಕಾಸಬಾಗದಲ್ಲಿದ್ದ ಬಂಧಿತ ಪೂಜಾ ತಾಳೂಕರ ಒಂದು ತಿಂಗಳ ಹಿಂದೆ ತನ್ನೆರಡು ಮಕ್ಕಳಾದ ಖುಷಿ ಮತ್ತು ಸಾನ್ವಿಯೊಂದಿಗೆ ಮನೆ ಬಿಟ್ಟು ನಗರಕ್ಕೆ ಬಂದಿದ್ದಳು. ಇಲ್ಲಿ ತನ್ನ ಹಳೆಯ ಪ್ರಿಯಕರ ದಾದಾಪೀರನೊಂದಿಗೆ ಗೋಕುಲ ಕುರ್ಡಿಕೇರಿ ಓಣಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಇವರಿಬ್ಬರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದು, ಇವರ ಅಕ್ರಮ ಸಂಬಂಧದಿಂದ ಎರಡನೇ ಮಗು ಸಾನ್ವಿ ಜನಿಸಿದ್ದಳು. ಒಂದನೇ ಮಗು ಖುಷಿಯು ಪೂಜಾಳ ಪತಿಗೆ ಜನಿಸಿದ್ದು, ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾಳೆ ಎಂದುಕೊಂಡು ಅವಳಿಗೆ ತಿರಸ್ಕಾರ ಮಾಡುತ್ತಿದ್ದರು. ಸರಿಯಾಗಿ ಊಟ ಕೊಡುತ್ತಿರಲಿಲ್ಲ. ಹಲ್ಲೆ ಮಾಡುತ್ತ ತೊಂದರೆ ಕೊಡಲಾಗುತ್ತಿತ್ತು.
ಆ. 20ರಂದು ಮಧ್ಯಾಹ್ನ ದಾದಾಪೀರನು ಖುಷಿಯ ತಲೆಯ ಹಿಂಭಾಗಕ್ಕೆ ಕಟ್ಟಿಗೆಯಿಂದ ಹೊಡೆದಾಗ ಬಿದ್ದು ಪ್ರಜ್ಞಾಹೀನವಾಗಿದ್ದಳು. ಅವಳು ಇನ್ನೂ ಬದುಕಿದ್ದಾಳೆ ಎಂದುಕೊಂಡು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಮಗು ಮೃತಪಟ್ಟಿದೆ ಎಂಬುದು ಗೊತ್ತಾಗುತ್ತಿದ್ದಂತೆ, ತಮ್ಮ ಅಕ್ರಮ ಸಂಬಂಧ ಎಲ್ಲಿ ಬಯಲಾಗುತ್ತದೋ ಎಂದುಕೊಂಡು ಮಗುವಿನ ಶವ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು ಎಂದು ಆಯುಕ್ತರು ತಿಳಿಸಿದರು.
ಕಿಮ್ಸ್‌ನಲ್ಲಿ ಮಗು ದಾಖಲಿಸುವಾಗ ದಾದಾಪೀರನು ತಾನು ಮಗುವಿನ ತಂದೆ ರಾಜು ಎಂದು ಹೆಸರು ದಾಖಲಿಸಿದ್ದ, ಸಿಸಿಟಿವಿ ದೃಶ್ಯಾವಳಿ ಹಾಗೂ ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ನರಗುಂದ ತಾಲೂಕು ಶಿರೋಳ ಗ್ರಾಮದಲ್ಲಿ ಬಂಧಿಸಲಾಗಿದೆ. ಇವರು ತಾವೇ ಮಗು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ದಾದಾಪೀರನ ಮೇಲೆ ಈಗಾಗಲೇ ಎಪಿಎಂಸಿ-ನವನಗರ, ವಿದ್ಯಾನಗರ ಠಾಣೆಯಲ್ಲಿ ಕಳ್ಳತನ ಪ್ರಕರಣಗಳಿದ್ದು, ಈತ ವೃತ್ತಿಪರ ಕಳ್ಳನಾಗಿದ್ದಾನೆ. ಇವರಿಬ್ಬರನ್ನು ಬಂಧಿಸುವಲ್ಲಿ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಅವರಿಗೆ ಬಹುಮಾನ ಘೋಷಿಸಲಾಗಿದೆ ಎಂದರು.