ತುಮಕೂರು: ಗುಲ್ಬರ್ಗಾ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು 4000 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದಿಂದ ಹಂಚಿಕೆಯಾಗಿರುವ ಪಡಿತರ ಅಕ್ಕಿಯನ್ನು ಪಾಲಿಷ್ ಮಾಡಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಳೆದ 20 ದಿನಗಳಲ್ಲಿ ಪೊಲೀಸ್, ಕಂದಾಯ ಹಾಗೂ ಆಹಾರ ಇಲಾಖೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 4000ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಅಕ್ಕಿಯನ್ನು ಸಾಗಿಸಿದ ಲಾರಿಗಳನ್ನೂ ಸಹ ಸೀಜ್ ಮಾಡಲಾಗಿದೆ ಎಂದರು.
ಕೂಡಲೇ ಕ್ರಮ: ಯಾವುದೇ ಅಂಗಡಿಗಳಲ್ಲಿ ಸೂಕ್ತ ದಾಖಲೆ, ರಸೀದಿ ಇಲ್ಲದೆ ಅಕ್ಕಿ ಹಾಗೂ ಮತ್ತಿತರ ಪಡಿತರ ಧಾನ್ಯಗಳನ್ನು ಶೇಖರಿಸಿ ಟ್ಟಿರುವುದು ಕಂಡು ಬಂದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
180 ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ: ತಾವು ಆಹಾರ ಸಚಿವನಾಗಿ ಅಧಿಕಾರ ವಹಿಸಿ ಕೊಂಡ ನಂತರ ಪಡಿತರ ವಿತರಣೆಯಲ್ಲಿರುವ ಹಲವು ಲೋಪದೋಷಗಳನ್ನು ಸರಿಪಡಿಸಿ ದ್ದೇನೆ. ರಾಜ್ಯದಲ್ಲಿ ಈವರೆಗೆ ತೂಕದ ವ್ಯತ್ಯಾಸ, ಪಡಿತರ ದುರ್ಬಳಕೆ, ಗ್ರಾಹಕರಿಗೆ ಮೋಸ, ಅಕ್ರಮ ದಾಸ್ತಾನು, ಹಣ ದುರುಪಯೋಗ ಮಾಡುತ್ತಿದ್ದ 180 ನ್ಯಾಯಬೆಲೆ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತಿ ನಲ್ಲಿಡಲಾಗಿದೆ ಎಂದರು.
ವ್ಯತ್ಯಾಸವಾದರೆ ನಿರ್ದಾಕ್ಷಿಣ್ಯ ಕ್ರಮ: ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದರೆ ಗ್ರಾಹಕರು ಯಾವುದೇ ಕಾರಣಕ್ಕೂ ಮಣಿ ಯದೆ ಪ್ರತಿಭಟಿಸಬೇಕು. ಇಲ್ಲವೇ ಇಲಾಖೆಯ ಸಹಾಯವಾಣಿ ಸಂಖ್ಯೆ 1967ಕ್ಕೆ ದೂರು ನೀಡಿದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪ್ರತಿದಿನ ಸಹಾಯ ವಾಣಿಗೆ ಸುಮಾರು 250 ದೂರು ಕರೆಗಳು ಬರುತ್ತಿದ್ದು, ಸ್ವೀಕರಿಸಿದ ದೂರುಗಳಿಗೆ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಚಿವ ಗೋಪಾಲಯ್ಯ ಅವರು ಹೇಳಿದರು.
ಗೋದಾಮುಗಳಿಗೆ ಅನಿರೀಕ್ಷಿತ ಭೇಟಿ: ನಿಗದಿಯಂತೆ ಯಾವುದೇ ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ತೆರಳುವಾಗ ಮಾರ್ಗ ಮಧ್ಯೆ ಸಿಗುವ ನ್ಯಾಯಬೆಲೆ ಅಂಗಡಿ, ಗೋದಾಮುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವ ಕೆಲಸ ಮಾಡುತ್ತಿದ್ದೇನೆ ಎಂದರು. ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಸಮರ್ಪಕ ಸೇವೆ ಒದಗಿಸದ ಜಿಲ್ಲೆಯ 5 ನ್ಯಾಯಬೆಲೆ ಅಂಗಡಿಗಳನ್ನು ಅಮಾನತ್ತಿನಲ್ಲಿಡ ಲಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಸಚಿವರ ಗಮನಕ್ಕೆ ತಂದರು. ಮಾಜಿ ಸಚಿವ ಸೊಗಡು ಶಿವಣ್ಣ, ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.