ಬೆಳಗಾವಿ: ಬೈಲಹೊಂಗಲ-ಬೆಳಗಾವಿ ರಾಜ್ಯ ಹೆದ್ದಾರಿಯ ಗದ್ದಿಕರವಿನಕೊಪ್ಪ ಕ್ರಾಸ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 7.39 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಬೈಲಹೊಂಗಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಪಾತೇಶಾ ನಗರದ ಜಮಾಲಸಾಬ್ ಸತ್ತರಖಾನ ಪಠಾಣ, ದಿಲಾವರಖಾನ ಸತ್ತಾರಖಾನ ಪಠಾಣ ಹಾಗೂ ಪಡಿತರ ಅಕ್ಕಿಯ ಮಾಲೀಕ ಹುಬ್ಬಳ್ಳಿಯ ಬಿಡನಾಳನ ಮಂಜುನಾಥ ವಿರೂಪಾಕ್ಷಪ್ಪ ಹರ್ಲಾಪುರ ಎಂಬವರನ್ನು ಬಂಧಿಸಲಾಗಿದೆ.
ಲಾರಿಯಲ್ಲಿ ಅಕ್ರಮವಾಗಿ 5 ಲಕ್ಷ ರೂ. ಮೌಲ್ಯದ 50 ಕೆ.ಜಿ. ತೂಕದ 500 ಪಡಿತರ ಅಕ್ಕಿ ಚೀಲಗಳನ್ನು ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿದಾಗ ಅಕ್ಕಿ ಹಾಗೂ ಲಾರಿ ಪತ್ತೆಯಾಗಿದೆ. ನಂತರ ವಿಚಾರಣೆ ನಡೆಸಿದಾಗ ಹಳೇ ಹುಬ್ಬಳ್ಳಿಯ ಬಂಕಾಪುರ ಚೌಕ್‌ದಲ್ಲಿರುವ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ 2.39 ಲಕ್ಷ ರೂ. ಮೌಲ್ಯದ 50 ಕೆ.ಜಿಯ. 239 ಅಕ್ಕಿ ಚೀಲಗಳು ಸೇರಿ ಒಟ್ಟು 7.39 ಲಕ್ಷ ರೂ,. ಮೌಲ್ಯದ ಪಡಿತರ ಅಕ್ಕಿ ಹಾಗೂ ಲಾರಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ:5 ಮಂದಿ ಯುವಕರ ಬೆನ್ನಟ್ಟಿದ ಪೊಲೀಸರು: ರಕ್ಷಣೆಗಾಗಿ ನದಿಗೆ ಜಿಗಿದ ಯುವಕರು! ಮುಂದೇನಾಯ್ತು?
ಬೈಲಹೊಂಗಲ ಠಾಣೆ ಸಿಪಿಐ ಯು.ಎಚ್. ಸಾತೇನಹಳ್ಳಿ ನೇತೃತ್ವದಲ್ಲಿ ಪಿಎಸ್‌ಐ ಈರಪ್ಪ ರಿತ್ತಿ, ಸಿಬ್ಬಂದಿಗಳಾದ ಡಿ.ವೈ. ನಾಯ್ಕರ, ಯು.ಎಚ್. ಪೂಜೇರ, ಎಲ್.ಬಿ. ಹಮಾಣಿ, ಎಸ್.ವೈ. ವರಣ್ಣವರ ಹಾಗೂ ಆಹಾರ ನಿರೀಕ್ಷಕ ವೀರಭದ್ರ ಸೇಬನ್ನವರ ದಾಳಿಯಲ್ಲಿದ್ದರು. ಈಕುರಿತು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.