ಕೊಪ್ಪಳ: ಕೃಷಿ ಜಮೀನುಗಳಲ್ಲಿ ಅಕ್ರಮ ಪಂಪ್‌ಸೆಟ್ ಹೊಂದಿದ್ದ ರೈತರಿಗೆ ಈ ಹಿಂದೆ ಸರ್ಕಾರವು ಸಕ್ರಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಜೆಸ್ಕಾಂ ಮೂಲಕ ಪ್ರತಿ ರೈತರಿಂದ 18,500 ರೂ. ಹಣ ತುಂಬಿಸಿಕೊಂಡಿದೆ. ಆದರೆ 2ನೇ ಹಂತದಲ್ಲಿ ಅಕ್ರಮ ಪಂಪ್‌ಸೆಟ್‌ಗಳಿಗೆ ಸಕ್ರಮದ ಭಾಗ್ಯ ಕಲ್ಪಿಸುತ್ತಿಲ್ಲ. ಹೀಗಾಗಿ ಜೆಸ್ಕಾಂ ಕಚೇರಿಗೆ ರೈತರು ಅಲೆದಾಡಿ ಸುಸ್ತು ಹೊಡೆದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ರೈತರು ಈ ಹಿಂದೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿ ನೀರು ಬಂತು ಎಂದರೆ ತಮ್ಮ ಹಣಕಾಸಿನ ನೆರವಿನಲ್ಲೇ ಅನಧಿಕೃತವಾಗಿ ಕಟ್ಟಿಗೆ, ಕಲ್ಲಿನ ಕಂಬವನ್ನು ಅಳವಡಿಕೆ ಮಾಡಿಕೊಂಡು ಮುಖ್ಯ ವಿದ್ಯುತ್ ಪರಿವರ್ತಕದ ಮೂಲಕ ಲೈನ್ ಹಾಕಿಕೊಂಡು ಹೊಲದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಯಾವುದೇ ಆರ್‌ಆರ್ ನಂಬರ್ ಪಡೆದಿರಲಿಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ ವಿದ್ಯುತ್ ಹೊರೆ ಹೆಚ್ಚಾಗಿತ್ತು. ರೈತರ ಜಮೀನಿನಲ್ಲಿ ಪದೇ ಪದೆ ಟಿಸಿ ಸುಡುತ್ತಿದ್ದವು. ಕೃಷಿಗೆ ಸಕಾಲಕ್ಕೆ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನರಿತ ಸರ್ಕಾರ 2014ರ ಅವಧಿಯಲ್ಲಿ ರಾಜ್ಯದಲ್ಲಿನ ಅಕ್ರಮ ಪಂಪ್‌ಸೆಟ್‌ಗಳನ್ನು ರೈತರು ವಂತಿಕೆ ತುಂಬಿ ಸಕ್ರಮ ಮಾಡಿಕೊಂಡು ಆರ್‌ಆರ್ ನಂಬರ್ ಪಡೆದುಕೊಳ್ಳುವಂತೆ ಆದೇಶ ಹೊರಡಿಸಿ ವರ್ಷಗಳೇ ಕಳೆದಿವೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ-ಯಲಬುರ್ಗಾ ವಿಭಾಗದಲ್ಲಿ 2ನೇ ಹಂತದಲ್ಲಿ ಅಕ್ರಮ ಪಂಪ್‌ಸೆಟ್‌ಗಳಿಗೆ ಇನ್ನೂ ಸಕ್ರಮದ ಭಾಗ್ಯವೇ ದೊರೆತಿಲ್ಲ.
ಹಣ ತುಂಬದ ರೈತರು: ಈ ಹಿಂದೆ ತಮ್ಮ ಪಂಪ್‌ಸೆಟ್‌ಗಳಿಗೆ ಸಕ್ರಮಾತಿ ದೊರೆಯಲಿದೆ ಎಂದು ಖುಷಿಯಲ್ಲಿದ್ದ ರೈತರು ಎದ್ದು ಬಿದ್ದು ಸರದಿ ಸಾಲಿನಲ್ಲಿ ನಿಂತು ಜೆಸ್ಕಾಂ ಕಚೇರಿಯಲ್ಲಿ ಕೊಪ್ಪಳ-ಯಲಬುರ್ಗಾ ವಿಭಾಗದಲ್ಲಿ ಮೊದಲನೇ ಹಂತದಲ್ಲಿ 356 ರೈತರು ಹಣ ತುಂಬಿದ್ದು ಅವರ ಪಂಪ್‌ಸೆಟ್ ಸಕ್ರಮಾತಿ ಮಾಡಿಕೊಂಡರೆ, 2ನೇ ಹಂತದಲ್ಲಿ 599 ರೈತರು ಪ್ರತಿಯೊಬ್ಬರು 18,496 ರೂ. ಪಾವತಿ ಮಾಡಿದ್ದಾರೆ. ಇದರಲ್ಲಿ 526 ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಲ್ಲ. ಪ್ರತಿ ದಿನವೂ ರೈತರು ಕಚೇರಿಗೆ ಸುತ್ತಾಡಿ ಸುಸ್ತು ಹೊಡೆದಿದ್ದಾರೆ.
ಅಚ್ಚರಿಯಂದರೆ, ಅಕ್ರಮ-ಸಕ್ರಮ ಪಂಪ್‌ಸೆಟ್‌ಗಳ ಬಗ್ಗೆ ರೈತ ಕಚೇರಿಯಲ್ಲಿ ಮಾಹಿತಿ ಕೇಳಿದರೆ ಯಾವುದೇ ಅಧಿಕಾರಿ ರೈತರಿಗೆ ಪರಿಪೂರ್ಣ ಮಾಹಿತಿ ನೀಡುತ್ತಿಲ್ಲ. ಬರಿ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಅಲ್ಲದೇ ಕಚೇರಿಯ ಸಿಬ್ಬಂದಿ ಇದು ಮೇಲ್ಮಟ್ಟದಲ್ಲಿ ನಡೆಯಬೇಕಾದ ಪ್ರಕ್ರಿಯೆ, ನಮ್ಮಿಂದ ಯಾವುದೇ ವಿಳಂಬ ಮಾಡಿಲ್ಲ ಎನ್ನುತ್ತಿದ್ದಾರೆ. ಇದರಿಂದ ರೈತ ಸಮೂಹ ಸರ್ಕಾರದ ನಡೆ, ಕಚೇರಿ ಸಿಬ್ಬಂದಿ ವರ್ತನೆ, ವಿಳಂಬ ಮಾಡುತ್ತಿರುವ ಜೆಸ್ಕಾಂ ಕಾರ್ಯ ವೈಖರಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಕ್ರಮ-ಸಕ್ರಮಕ್ಕೆ ವಿಳಂಬವೇಕೆ?: ಪಂಪ್‌ಸೆಟ್‌ಗಳ ಸಕ್ರಮಕ್ಕೆ ಈ ಹಿಂದೆ ಜೆಸ್ಕಾಂನಿಂದ ಒಂದು ಬಾರಿ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಆದರೆ ಗುತ್ತಿಗೆದಾರ ಟೆಂಡರ್ ಪಡೆದು ಕೊನೆ ಗಳಿಗೆಯಲ್ಲಿ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಮತ್ತೆ ಎರಡನೇ ಬಾರಿಗೆ ಟೆಂಡರ್ ಕರೆಯಲು ನಿಗಮವೇ ವಿಳಂಬ ಮಾಡಿದೆ. ವಿಳಂಬ ಆಗಿರುವುದು ಕಲಬುರ್ಗಿ ನಿಗಮದಿಂದಲೇ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಧಾನಸಭಾ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಾಗಿದೆ ಎನ್ನುವ ಮಾಹಿತಿ ದೊರೆತಿದೆ.
ಇನ್ನಾದರೂ ನಿಗಮವು ಎಚ್ಚೆತ್ತು ರೈತರ ತಾಳ್ಮೆ ಪರೀಕ್ಷಿಸದೇ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಿ ಅಕ್ರಮ ಪಂಪ್‌ಸೆಟ್‌ಗಳಿಗೆ ಸಕ್ರಮ ಭಾಗ್ಯ ಕರುಣಿಸಬೇಕಿದೆ. ರೈತನು ಜಮೀನುಗಳಿಗೆ ವಿದ್ಯುತ್ ಕಂಬ ಅಳವಡಿಕೆ, ಅವಶ್ಯವಿದ್ದರೆ ವಿದ್ಯುತ್ ಪರಿವರ್ತಕ ಅಳವಡಿಸಿ ಅವರಿಗೆ ಅನುವು ಮಾಡಿಕೊಡಬೇಕಿದೆ.
•ದತ್ತು ಕಮ್ಮಾರ