ರಬಕವಿ-ಬನಹಟ್ಟಿ: ತೇರದಾಳ ಮತಕ್ಷೇತ್ರದ ಬಿಜೆಪಿಯಲ್ಲಿ ಸ್ಥಳೀಯರನ್ನು ಹೊರಹಾಕುವ ಷಡ್ಯಂತ್ರ ನಡೆಯುತ್ತಿದೆ. ಕ್ಷೇತ್ರದಲ್ಲಿ ಯಾರು ಮುಂದೆ ಬರಬಾರದು ಎಂದು ನನ್ನ ವಿರುದ್ಧ ಉದ್ಧೇಶಪೂರ್ವಕವಾಗಿ ಉಚ್ಛಾಟನೆ ತಂತ್ರ ಅನುಸರಿಸುತ್ತಿದ್ದಾರೆ. ನಾನು ರಾಜ್ಯ ಮಟ್ಟದ ಹುದ್ದೆಯಲ್ಲಿರುವುದರಿಂದ ನನ್ನನ್ನು ಸ್ಥಳೀಯ ಮಂಡಲ ಅಧ್ಯಕ್ಷರು ಉಚ್ಛಾಟನೆ ಮಾಡಲು ಬರುವುದಿಲ್ಲ.ಇದು ಕಾನೂನುಬಾಹಿರ ನಡೆಯಾಗಿದೆ ಎಂದು ಸಹಕಾರಿ ಧುರೀಣ ಭೀಮಶಿ ಮಗದುಮ್ಮ ಹೇಳಿದರು.
ನಗರದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ ಆವರು, 22ಕ್ಕೂ ಅಧಿಕ ಜನರನ್ನು ಪಕ್ಷದಿಂದ ಹೊರಹಾಕುವ ಷಡ್ಯಂತ್ರ ನಡೆಯುತ್ತಿದೆ. ಹೀಗೆ ಪ್ರತಿಯೊಬ್ಬರನ್ನು ಹೊರ ಹಾಕುವುದಾದರೆ ಹೇಗೆ? ನಾವು ಬಿಜೆಪಿ ಸಿದ್ಧಾಂತವನ್ನು ಒಪ್ಪಿ ನಾವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಬಿಟ್ಟು ಹೋಗುವ ಪ್ರಮೇಯವೇ ಇಲ್ಲ ಎಂದರು.
18 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯ ಮಟ್ಟದ ಸಹಕಾರಿ ಪ್ರಕೋಷ್ಠದ ಜಿಲ್ಲೆಯ ಸಂಚಾಲಕ, ರಾಜ್ಯ ಮಟ್ಟದ ಸದಸ್ಯನಾಗಿ ಇನ್ನೂ ಇದ್ದೇನೆ. ರಾಜ್ಯ ಮಟ್ಟದ ಹುದ್ದೆಯಲ್ಲಿರುವುದರಿಂದ ಇಲ್ಲಿನ ಮಂಡಲ ಪ್ರಧಾನರಿಗೆ ನನ್ನನ್ನು ಉಚ್ಛಾಟಿಸುವ ಯಾವುದೇ ಅಧಿಕಾರ ಇಲ್ಲ. ತೇರದಾಳ ಮತಕ್ಷೇತ್ರದಲ್ಲಿ ನಿರಂತರವಾಗಿ ತುಳಿಯುವ ಕೆಲಸ ನಡೆಯುತ್ತಿದೆ. ಬನಹಟ್ಟಿಯ ಹಿರಿಯರಿಗೆ ವಿಷಯ ತಿಳಿಸದೇ ನನ್ನನ್ನು ಉಚ್ಛಾಟಿಸುವ ಕಾರ್ಯ ಮಾಡಿದ್ದಾರೆ ಎಂದರು.
ಡಾ| ಪಿ. ವಿ. ಪಟ್ಟಣ, ರಾಮಣ್ಣ ಹುಲಕುಂದ, ಸಹಕಾರಿ ಧುರೀಣ ಸುರೇಶ ಚಿಂಡಕ ಮಾತನಾಡಿದರು. ಪ್ರಭು ಪಾಲಬಾಂವಿ, ಬಸವರಾಜ ದಲಾಲ, ಶ್ರೀಶೈಲ ಧಬಾಡಿ, ಸಂಗಮೇಶ ಮಾಲಗಾಂವಿ, ಭೀರಪ್ಪ ಹಳೆಮನಿ, ಶೇಖರ ಮಾಲಾಪುರ, ಗಿರಮಲ್ಲಪ್ಪ ಅಥಣಿ, ಮಲ್ಲಪ್ಪ ಗೌಡಪ್ಪನವರ, ದುಂಡಪ್ಪ ಪಾಟೀಲ, ಬಸಯ್ಯ ಹಿರೇಮಠ, ತುಕ್ಕಪ್ಪ ಗುಮ್ಮಕ್ಕನವರ, ಅಡಿವೇಶ ಗುರವ ಇದ್ದರು.