Advertisement

ಅಕ್ರಮ ಗಣಿಗಾರಿಕೆ: 320 ಕೋಟಿ ದಂಡ

06:00 AM Sep 19, 2018 | |

ಬೆಂಗಳೂರು: ನಿಯಮಗಳನ್ನು ಗಾಳಿಗೆ ತೂರಿ ನಿಗದಿತ ಪ್ರಮಾಣಕ್ಕಿಂತ ಅತಿ ಹೆಚ್ಚು ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ಕೈಗೊಂಡ 132 ಗುತ್ತಿಗೆ ಸಂಸ್ಥೆಗಳ ಗಣಿ ಚಟುವಟಿಕೆಗೆ “ಬ್ರೇಕ್‌’ ಹಾಕಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ರಾಯಧನ ಸಹಿತ 320 ಕೋಟಿ ರೂ. ದಂಡ ಸಂಗ್ರಹಕ್ಕೆ ಮುಂದಾಗಿದೆ.  ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ತಾವರೆಕೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಒಟ್ಟು 132 ಕಲ್ಲು ಗಣಿ ಗುತ್ತಿಗೆ ಹಾಗೂ 73 ಕ್ರಷರ್‌ಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿರುವ ಇಲಾಖೆ ಅಧಿಕಾರಿಗಳು ಅಕ್ರಮ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ
ಸ್ಥಗಿತಗೊಳಿಸಿದ್ದಾರೆ. ಈವರೆಗೆ ಕಂಡು ಬಂದಿರುವ ನಿಯಮ ಉಲ್ಲಂಘನೆಗಳನ್ನು ಸರಿಪಡಿಸಿ ನಿಯಮಾನುಸಾರ ಗಣಿಗಾರಿಕೆ ಮುಂದುವರಿಸಲಿದೆ ಎಂಬ ಬಗ್ಗೆ ಪರಿಶೀಲಿಸಿ ಖಾತರಿಪಡಿಸಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ.

Advertisement

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ತಾವರೆಕೆರೆ, ಹುಲವೇನಹಳ್ಳಿ, ಮಾದಾ ಪಟ್ಟಣ, ಸೂಲಿವಾರ, ದೊಡ್ಡೇರಿ, ಸುತ್ತ ಮುತ್ತಲ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯಲ್ಲೇ ಕಲ್ಲು ಗಣಿಗಾರಿಕೆಗೆ ಇಲಾಖೆ ಅವಕಾಶ ನೀಡಿತ್ತು. ಅದರಂತೆ 132 ಗುತ್ತಿಗೆ ಸಂಸ್ಥೆಗಳು ಹಲವು ವರ್ಷಗಳಿಂದ ಗಣಿಗಾರಿಕೆ ಕೈಗೊಂಡಿದ್ದು 73 ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಸಾಕಷ್ಟು ನಿಯಮ ಉಲ್ಲಂಘನೆ, ಪರಿಸರ ಹಾನಿ ಸಂಬಂಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಲಾಖೆ ಇತ್ತೀಚೆಗೆ ದಿಢೀರ್‌ ದಾಳಿ ನಡೆಸಿದಾಗ ಭಾರೀ ಅಕ್ರಮ ನಡೆದಿರುವುದು ಬಯಲಾಗಿದೆ.

ಸಾಲು ಸಾಲು ಅಕ್ರಮ: ನಿಯಮಾನುಸಾರ ಗುತ್ತಿಗೆ ಸಂಸ್ಥೆಗಳು ಗಣಿಗಾರಿಕೆ ಕೈಗೊಂಡಿರುವ ಪ್ರದೇಶದಲ್ಲಿ ಗಡಿ ಗುರುತು ಮಾಡಿಕೊಂಡಿಲ್ಲ. ಪರಿಸರಾತ್ಮಕ ಅಂಶಗಳನುಸಾರ ನೀಡಿದ ಅನುಮತಿ ಯೋಜನೆ (ಇಸಿ ಪ್ಲಾನ್‌) ಉಲ್ಲಂಘನೆಯಾಗಿದೆ. ಮುಖ್ಯವಾಗಿ ಅನುಮತಿ ನೀಡಿದ ಮಿತಿಗಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸಿರುವುದರಿಂದ ಪರಿಸರಕ್ಕೆ ತೀವ್ರ ಹಾನಿಯಾಗಿರುವುದು ಕಂಡುಬಂದಿದೆ. ಸುರಕ್ಷತಾ ಕ್ರಮಗಳನ್ನು ಕಡೆಗಣಿಸಿ ಅಪಾಯಕಾರಿ ಸ್ಥಿತಿಯಲ್ಲೇ ಗಣಿಗಾರಿಕೆ ನಡೆಸುತ್ತಿರುವುದು ದಾಳಿ ವೇಳೆ ಬಯಲಾಗಿದೆ. ಸಮರ್ಪಕವಾಗಿ ರಸ್ತೆಗಳನ್ನು
ಅಭಿವೃದಿಟಛಿಪಡಿಸದ ಕಾರಣ ಅಪಾಯಕಾರಿ ಮಾರ್ಗದಲ್ಲೇ ಕಲ್ಲು ಸಾಗಿಸುತ್ತಿರುವುದು ಗೊತ್ತಾಗಿದೆ. ಭಾರೀ ಪ್ರಮಾಣದಲ್ಲಿ ಸ್ಫೋಟಕ ನಡೆಸಿ ನಿಯಮ ಉಲ್ಲಂ ಸಿರುವುದು ಬೆಳಕಿಗೆ ಬಂದಿದೆ. ಕ್ವಾರಿಯಿಂದ ಕ್ರಷರ್‌ಗೆ ಹಾಗೂ ಕ್ರಷರ್‌ನಿಂದ ಹೊರಕ್ಕೆ ಸಾಗಿಸಿ ಮಾರಾಟ ಮಾಡಿರುವ ಕಲ್ಲಿನ ಪ್ರಮಾಣ ಕುರಿತಂತೆ ಯಾವುದೇ ಮಾಹಿತಿ, ದಾಖಲೆಯನ್ನು ಪರಿಶೀಲನೆ ವೇಳೆ ಗುತ್ತಿಗೆ ಸಂಸ್ಥೆಗಳು ಅಧಿಕಾರಿಗಳಿಗೆ ನೀಡದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಗುತ್ತಿಗೆ ಪಡೆದವರು ಒಬ್ಬರಾದರೆ, ಗಣಿಗಾರಿಕೆ ನಡೆಸುತ್ತಿರುವವರು ಮತ್ತೂಬ್ಬರು ಎಂಬಂತಾಗಿದ್ದು, ಇಲ್ಲಿಯೂ ನಿಯಮ
ಉಲ್ಲಂಘನೆಯಾಗಿದೆ. ಇದರ ಹಿಂದೆ ಕೆಲವು ಪ್ರಭಾವಿ ವ್ಯಕ್ತಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಈ ಅಕ್ರಮ ಗಣಿಗಾರಿಕೆ ದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರಿಂದಲೂ ದೂರು: ಭಾರೀ ತೀವ್ರತೆಯ ಸ್ಫೋಟಕಗಳನ್ನು ಬಳಸುವುದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ರಾತ್ರಿ ವೇಳೆ ಸ್ಫೋಟಕ ಬಳಸಿ ಬಂಡೆಗಳನ್ನು ಸಿಡಿಸುತ್ತಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ದೂಳಿನ ಸಮಸ್ಯೆ ತೀವ್ರವಾಗಿದ್ದು, ಆರೋಗ್ಯ ಸಮಸ್ಯೆಗಳು
ಕಾಣಿಸಿಕೊಳ್ಳಲಾರಂಭಿಸಿವೆ. ಭಾರಿ ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬುದಾಗಿ ಸ್ಥಳೀಯರು ಇಲಾಖೆಗೆ ಸಾಕಷ್ಟು ದೂರು ಸಲ್ಲಿಸಿದ್ದಾರೆ.  ಗಣಿಗಾರಿಕೆ, ಕ್ರಷರ್‌ ಸ್ಥಗಿತ ನಿಯಮಗಳನ್ನು ಉಲ್ಲಂ ಸಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ 132 ಗುತ್ತಿಗೆ ಸಂಸ್ಥೆಗಳ ಗಣಿ ಚಟುವಟಿಕೆಯನ್ನು ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಜತೆಗೆ 72 ಕ್ರಷರ್‌ ಘಟಕಗಳನ್ನು ತಾತ್ಕಾಲಿಕವಾಗಿ “ಬಂದ್‌’ ಮಾಡಿಸಿದೆ. ಜತೆಗೆ ರಾಯಧನ ಸಹಿತ 320 ಕೋಟಿ ರೂ. ದಂಡ ಪಾವತಿಗೆ ಸೂಚಿಸಿದೆ. ದಾಖಲೆಗಳನ್ನು ಪರಿಶೀಲಿಸಿ ಬಾಕಿ ರಾಯಧನ ಸೇರಿದಂತೆ ದಂಡ ಪಾವತಿ ನಂತರ ನಿಯಮಾನುಸಾರ ನಿಗದಿತ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸುವ ಖಾತರಿಯಾದ ಬಳಿಕವಷ್ಟೇ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಿಕೆ ಬಗ್ಗೆ ತೀರ್ಮಾನಿಸಲಿದೆ. ಕಳೆದ ಐದು ತಿಂಗಳಲ್ಲಿ ಇಲಾಖೆ ಪ್ರಮುಖವಾಗಿ ನಾಲ್ಕು  ಕಡೆ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆಯನ್ನು ಬಯಲಿಗೆಳೆಯುವ ಜತೆಗೆ ಬರೋಬ್ಬರಿ 208 ಕೋಟಿ ರೂ. ದಂಡ ವಿಧಿಸಿ ಸಂಗ್ರಹಿಸಿತ್ತು. ಇದೀಗ ಮತ್ತೂಂದು ಪ್ರಮುಖ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಣಿಗಾರಿಕೆ ನಡೆಸುವವರಿಗೆ ಬಿಸಿ ಮುಟ್ಟಿಸಿದೆ.

ರಾಯಧನಸಹಿತ 320 ಕೋಟಿ ರೂ. ದಂಡ ಸಂಗ್ರಹಿಸಲು ಕ್ರಮ ವಹಿಸಲಾಗಿದೆ. ಸಾರ್ವಜನಿಕರಿಂದ ದೂರು, ಮಾಹಿತಿ ಬಂದಾಗ, ಪರಿಸರಕ್ಕೆ ಮಾರಕವೆಂದು ಕಂಡು ಬಂದಾಗ ಕಾರ್ಯಾಚರಣೆ ನಡೆಸಿ ಅಕ್ರಮಗಳ ವಿರುದಟಛಿ ಕ್ರಮ ಜರುಗಿಸುವ ಕಾರ್ಯ ಮುಂದುವರಿಯಲಿದೆ.
● ಎನ್‌.ಎಸ್‌.ಪ್ರಸನ್ನ ಕುಮಾರ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ

Advertisement

ಎಂ. ಕೀರ್ತಿಪ್ರಸಾದ್ 

Advertisement

Udayavani is now on Telegram. Click here to join our channel and stay updated with the latest news.

Next