Advertisement

ಇಂದು ಅಕ್ರಮ ಗಣಿ ಪ್ರಕರಣ ವಿಚಾರಣೆ; ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಜರ್‌

09:01 PM Nov 08, 2022 | Team Udayavani |

ಬಳ್ಳಾರಿ: ಓಬಳಾಪುರಂ ಮೈನಿಂಗ್‌ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ ಸಿಬಿಐ ನ್ಯಾಯಾಲಯದಲ್ಲಿ ಬುಧವಾರ ವಿಚಾರಣೆ ನಡೆಯಲಿದ್ದು ಈ ಕುರಿತು ಆರೋಪಿಸಿದ್ದ ಗಣಿ ಉದ್ಯಮಿ ಟಪಾಲ್‌ ಎಕಾಂಬರಂ ಅವರಿಗೆ ದಾಖಲೆ ಸಲ್ಲಿಸುವಂತೆ ಸಮನ್ಸ್‌ ಜಾರಿಗೊಳಿಸಿದೆ.

Advertisement

ಮಾಜಿ ಸಚಿವ ಜನಾರ್ದನರೆಡ್ಡಿ ಸಹಭಾಗಿತ್ವದ ಓಎಂಸಿ ಗಣಿ ಕಂಪನಿಯಲ್ಲಿ ಅಕ್ರಮ ಮತ್ತು ಅವೈಜ್ಞಾನಿಕವಾಗಿ ಗಣಿಗಾರಿಕೆ ಮತ್ತು ಅದಿರು ಸಾಗಣೆ ಮಾಡಲಾಗಿದೆ ಎಂಬ ದೂರಿನನ್ವಯ 2011, ಸೆ.5ರಂದು ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಅ ಧಿಕಾರಿಗಳು ಬಂಧಿಸಿದ್ದರು. 5 ವರ್ಷಗಳ ಕಾಲ ಹೈದ್ರಾಬಾದ್‌ ಮತ್ತು ಬೆಂಗಳೂರು ಜೈಲಿನಲ್ಲಿರಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತಾದರೂ ಬಳ್ಳಾರಿ, ಅನಂತಪುರಂ, ಕರ್ನೂಲ್‌ ಜಿಲ್ಲೆಗಳಿಗೆ ಹೋಗದಂತೆ ಷರತ್ತು ವಿಧಿಸಿತ್ತು. ಆ ಷರತ್ತನ್ನು ಸಹ ಕಳೆದ ಒಂದು ವರ್ಷದಿಂದ ಸಡಿಲಿಸಲಾಗಿತ್ತಾದರೂ ಸುಪ್ರೀಂಕೋರ್ಟ್‌ ನ.6ರವರೆಗೆ ಮಾತ್ರ ಬಳ್ಳಾರಿಯಲ್ಲಿ ಇರಲು ಅವಕಾಶ ನೀಡಿ ಇದೀಗ ಈ ಹಿಂದಿನಂತೆ ಷರತ್ತು ಮುಂದುವರಿಸಿದೆ.

ಈ ಮಧ್ಯೆ ಸುಪ್ರೀಂ ಕೋರ್ಟ್‌ ಸಿಬಿಐ ನ್ಯಾಯಾಲಯಕ್ಕೆ ರೆಡ್ಡಿ ಮೇಲಿನ ಆರೋಪದ ಪ್ರಕರಣದ ವಿಚಾರಣೆ ತೀವ್ರ ವಿಳಂಬವಾಗುತ್ತಿದ್ದು ಬರುವ ಆರು ತಿಂಗಳಲ್ಲಿ ವಿಚಾರಣೆ ಮುಗಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಈಗ ಪ್ರಕರಣ ತೀವ್ರತೆ ಪಡೆದುಕೊಂಡಿದೆ.

ಈ ಕುರಿತು ದೂರವಾಣಿ ಮೂಲಕ ಮಾತನಾಡಿದ ಗಣಿ ಉದ್ಯಮಿ ಟಪಾಲ್‌ ಎಕಾಂಬರಂ, ಓಎಂಸಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಆಂಧ್ರ ಸರ್ಕಾರ ಪ್ರಕರಣ ದಾಖಲಿಸಿದ್ದು, ನಮ್ಮನ್ನು ಸಾಕ್ಷಿಯನ್ನಾಗಿಸಿತ್ತು. ಈ ಹಿನ್ನೆಲೆಯಲ್ಲಿ ದಾಖಲೆ ಸಲ್ಲಿಸುವಂತೆ ಸಿಬಿಐ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದೆ. ಹಾಗಾಗಿ ಬುಧವಾರ ಹೈದ್ರಾಬಾದ್‌ಗೆ ತೆರಳಿ ಸರ್ಕಾರಿ ಅಭಿಯೋಜಕರಿಗೆ ದಾಖಲೆಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next