ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪರವಾನಿಗೆ ಇಲ್ಲದೇ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಟಾಸ್ಕ್ಫೋಸ್ (ಗಣಿ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು. ಕಂಡುಬಂದಲ್ಲಿ ಕೂಡಲೇ ಸ್ಥಗಿತಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪರವಾನಿಗೆ ರದ್ದು ಮಾಡಿ: ಜಿಲ್ಲೆಯಲ್ಲಿ ಕ್ವಾರಿಗಳಿಂದ ಸರ್ಕಾರಕ್ಕೆ ಬರಬೇಕಾದ ಬಾಕಿ ರಾಜಧನವನ್ನು ಕೂಡಲೇ ವಸೂಲಿ ಮಾಡಬೇಕು. ರಾಜಧನ ಬಾಕಿ ಉಳಿಸಿಕೊಂಡ ಕ್ವಾರಿಗಳಿಗೆ ನೋಟಿಸ್ ನೀಡಿ, ಪರವಾನಿಗೆ ರದ್ದು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿರುವ ಕ್ವಾರಿಗಳ ಬಗ್ಗೆ ರೀ ಸರ್ವೇ ಮಾಡಲು ಸರ್ಕಾರದಿಂದ ಸೂಚನೆ ಬಂದಿದೆ. ಕ್ವಾರಿಗಳಲ್ಲಿ ಭಾರೀ ಮಟ್ಟದ ಸ್ಫೋಟಕ ವಸ್ತುಗಳು ಕಂಡು ಬಂದರೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇದನ್ನೂ ಓದಿ :ವಿದ್ಯುತ್ ಕಂಬಗಳಿರುವ ಸುಸಜ್ಜಿತ ರಸ್ತೆಯಲ್ಲಿ ಬೆಳಕೇ ಇಲ್ಲ!
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿ ನಂಜುಂಡಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ವಾರ್ಷಿಕ 65 ಕೋಟಿ ರೂ.ರಾಜಧನ ಗುರಿ ಹೊಂದಲಾಗಿತ್ತು. ಈ ಪೈಕಿ 2021ರ ಜನವರಿ ಅಂತ್ಯದವರೆಗೆ ನಿಗದಿಯಾಗಿದ್ದ 52 ಕೋಟಿ ರೂ.ಗುರಿಯಲ್ಲಿ 37 ಕೋಟಿ ರು. ವಸೂಲಿ ಮಾಡುವ ಮೂಲಕ ಶೇ.71.50 ಸಾಧನೆ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಅನಧಿಕೃತ ಉಪಖನಿಜ ಗಣಿಗಾರಿಕೆ/ಸಾಗಾಣಿಕೆ ಮತ್ತು ದಾಸ್ತಾನುಗಳ ವಿರುದ್ಧ 2020-21ರ ಜನವರಿ ಅಂತ್ಯದವರೆಗೆ ಒಟ್ಟು 11 ಪ್ರಕರಣ ದಾಖಲಿಸಿ, ಒಟ್ಟಾರೆ 80.67 ಲಕ್ಷ ರೂ. ದಂಡ ಹಾಕಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಎ.ಎನ್. ರಘುನಂದನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.