ಧಾರವಾಡ : ಕುಂದಗೋಳ ತಾಲೂಕಿನ ಗುಡಗೇರಿ ಠಾಣೆ ಸರಹದ್ದಿನ ಭೂಕೊಪ್ಪ ಗ್ರಾಮದಲ್ಲಿ ಮೂರು ಪ್ರತ್ಯೇಕ ಜಮೀನುಗಳಲ್ಲಿ ಮೆಣಸಿನಕಾಯಿ ಬೆಳೆಯ ಜೊತೆಗೆ ಗಾಂಜಾ ಗಿಡಗಳನ್ನು ತಮ್ಮ ಅಕ್ರಮವಾಗಿ ಬೆಳೆದ ಬಗ್ಗೆ ಮಾಹಿತಿ ತಿಳಿದು, ಪೊಲೀಸರು ಸೆ.16 ರಂದು ದಾಳಿ ಮಾಡಿ ಗಾಂಜಾ ಗಿಡ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.
ಶನಿವಾರ ಎಸ್.ಪಿ.ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಉತ್ತರ ವಲಯದ ಐಜಿಪಿ ಎನ್.ಸತೀಶ ಕುಮಾರ ಮತ್ತು ತಮ್ಮ ಮಾರ್ಗದರ್ಶನದಲ್ಲಿ ಭೂಳ್ಳಪ್ಪನ ಕೊಪ್ಪ ಗ್ರಾಮದ ಜಮೀನಿನಲ್ಲಿ ಬೆಳೆದ ಗಾಂಜಾ ಬೆಳೆ ಪತ್ತೆ ಹಚ್ಚಿದ್ದಾಗಿ ತಿಳಿಸಿದರು.
ಆರೋಪಿಯು ಅಕ್ರಮವಾಗಿ 31 ಕೆಜಿ ತೂಕದ ಒಟ್ಟು 32 ಹಸಿಗಾಂಜಾ ಗಿಡಗಳು ಅಂದಾಜು ಮೊತ್ತ 1 ಲಕ್ಷ 25 ಸಾವಿರ ಮತ್ತು ಎರಡನೇ ಆರೋಪಿಯು 20 ಕೆಜಿ 160 ಗ್ರಾಂ. ತೂಕದ ಒಟ್ಟು 50 ಹಸಿಗಾಂಜಾ ಗಿಡಗಳು ಅಂದಾಜು ಮೊತ್ತ 80 ಸಾವಿರ ಹಾಗೂ ಮೂರನೇ ಆರೋಪಿಯು 8.5 ಕೆಜಿ ತೂಕದ 17 ಹಸಿಗಾಂಜಾ ಗಿಡಗಳು ಅಂದಾಜು ಮೊತ್ತ 25 ಸಾವಿರ, ಹೀಗೆ ಒಟ್ಟು 59 ಕೆಜಿ 760 ಗ್ರಾಂ ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದ್ದು ಇವುಗಳ ಒಟ್ಟು ಅಂದಾಜು ಮೊತ್ತ ರೂ. 2 ಲಕ್ಷ 30 ಸಾವಿರ ಆಗುತ್ತದೆ ಎಂದರು.
ಇದನ್ನೂ ಓದಿ:ತಾಕತ್ತಿದ್ದರೆ ನಿಮ್ಮ ಕ್ಷೇತ್ರದ ಅನ್ಯಧರ್ಮದ ಪ್ರಾರ್ಥನಾ ಮಂದಿರ ತೆರವು ಮಾಡಿ: ಸಿಎಂ ಗೆ ಸವಾಲು
ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿಗಳನ್ನು ವಶಕ್ಕೆ ಪಡೆದು ಸೆ.16 ರಂದು ಜಿಲ್ಲಾ ಸತ್ರನ್ಯಾಯಾಲಯದಲ್ಲಿ ಹಾಜರು ಪಡೆಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.