Advertisement
ತಾಲೂಕಿನ ಅನೇಕ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಪರೋಕ್ಷವಾಗಿ ಸರಕಾರವೇ ಇದನ್ನು ಬೆಂಬಲಿಸುತ್ತಿದೆಯೇ ಎಂಬ ಶಂಕೆ ಮೂಡಿದೆ. ಮದ್ಯ ಮಾರಾಟ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಜಾಣ ಮೌನ ವಹಿಸಿದೆ. ಈ ವರೆಗೂ ಸರಕಾರ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕದೆ, ಅಬಕಾರಿ ಇಲಾಖೆ ಗುರಿ ಮುಟ್ಟುವ ತವಕದಲ್ಲಿ ಹಳ್ಳಿ ಜನರ ಆರೋಗ್ಯದೊಂದಿಗೆ ಆಟವಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
Related Articles
Advertisement
ಹಳ್ಳಿಗಳಲ್ಲಿ ಲಕ್ಷಾಂತರ ರೂ.ಗಳಿಗೆ ಮದ್ಯ ಮಾರಾಟದ ಹರಾಜು ನಡೆಯುತ್ತದೆ. ಉಳ್ಳವರುಹರಾಜಿನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಪಡೆದು ದೇವಾಲಯದ ಆಡಳಿತ ಮಂಡಳಿಅಥವಾ ಧಾರ್ಮಿಕ ಕಾರ್ಯಕ್ರಮಕ್ಕೆ ಸೂಚಿಸಿದ ಹಣ ನೀಡುತ್ತಾರೆ ಎನ್ನಲಾಗಿದೆ. ಸರಕಾರ ಮದ್ಯ ಮಾರಾಟಕ್ಕಾಗಿ ಅಲ್ಲಲ್ಲಿ ಎಂಎಸ್‌ಐಲ್ ಮಳಿಗೆ ಸ್ಥಾಪಿಸಿದ್ದರೂ ಸಹ ಗ್ರಾಮೀಣ ಪ್ರದೇಶದ ಕೆಲ ಉಳ್ಳವರು ತಮ್ಮ ಲಾಭಕ್ಕಾಗಿ ಗ್ರಾಮದಲ್ಲಿಯೇ ಅಕ್ರಮ ಮದ್ಯ ಮಾರಾಟಕ್ಕೆ ಮುಂದಾಗುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಕೋವಿಡ್ ವೈರಸ್ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದ್ದರೂ ಅಕ್ರಮ ಮದ್ಯ ಮಾರಾಟ ಮಾತ್ರ ನಿಂತಿಲ್ಲ. ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಲಾಕ್ ಡೌನ್, ಸೀಲ್‌ಡೌನ್ ಎಲ್ಲ ಮಾಡಲಾಗಿದ್ದರೂ ಹಳ್ಳಿಗಳಲ್ಲಿ ಕದ್ದುಮುಚ್ಚಿ ಅಕ್ರಮ ಮದ್ಯ ಮಾರಾಟ ನಡೆಯುತ್ತಲೇ ಇದೆ. ಮದ್ಯ ಮಾರಾಟ ತಡೆಗೆ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ತಾಲೂಕಿನ ಮದ್ಯದಂಗಡಿ ಸನ್ನದ್ದುದಾರರು ಅಕ್ರಮ ಮಾರಾಟಕ್ಕೆ ಸಂಪೂರ್ಣ ಒತ್ತು ನೀಡುತ್ತಾರೆ. ಕಾರಣ, ಇಲಾಖೆಯವರು ಟಾರ್ಗೆಟ್ ಮುಟ್ಟಲು ಒತ್ತಾಯ ಮಾಡುವುದರಿಂದ ಮದ್ಯದಂಗಡಿಯವರು ಅಕ್ರಮ ಮಾರಾಟಕ್ಕೆ ಬೆಂಬಲಿಸುವುದು ಸಾಮಾನ್ಯವಾಗಿದೆ. ಇಂತಹ ಕೋವಿಡ್ ಸಮಯದಲ್ಲೂ ಕೂಡ ಮುಂಚಿತವಾಗಿಯೇ ಮದ್ಯ ಸಂಗ್ರಹಿಸಿ ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆದಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮದ್ಯ ಅಕ್ರಮ ಮಾರಾಟ ತಡೆಯಲು ಗ್ರಾಪಂ ಅಧಿಕಾರಿಗಳು, ಸದಸ್ಯರು, ಸ್ವಯಂಸೇವಕರು ಒಳಗೊಂಡ ತಂಡ ರಚಿಸಿ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು. -ಮಲ್ಲೇಶ್ ಕೋಗಳಿ, ಜಿಲ್ಲಾ ಸಂಯೋಜಕ, ಗ್ರಾಕೂಸ್ .
ಮದ್ಯ ಅಕ್ರಮ ಮಾರಾಟ ನಿಯಂತ್ರಣಕ್ಕೆ ತರಲು ಆಯಾ ಜಿಲ್ಲೆಗಳ ಅಬಕಾರಿ ಡಿಸಿಗಳಿಗೆ ತಿಳಿಸಲಾಗುವುದು. ಮೊದಲು ಎಲ್ಲರೂ ಕೊರೊನಾದಿಂದ ಮುಕ್ತರಾಗೋಣ. ಬಳಿಕ ಮದ್ಯ ಮಾರಾಟಕ್ಕೆ ಆದ್ಯತೆ ನೀಡೋಣ. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಮದ್ಯ ಅಕ್ರಮ ಮಾರಾಟಕ್ಕೆ ಆಸ್ಪದ ನೀಡುವುದಿಲ್ಲ. ಈ ಸಂದರ್ಭದಲ್ಲಿ ಮದ್ಯ ಅಕ್ರಮ ಮಾರಾಟಕ್ಕೆ ಬೆಂಬಲಿಸಿ ಮದ್ಯ ನೀಡಿದ ಮದ್ಯದಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು.-ಕೆ.ಗೋಪಾಲಯ್ಯ ಅಬಕಾರಿ ಸಚಿವರು
ಮದ್ಯ ಅಕ್ರಮ ಮಾರಾಟಕ್ಕೆ ಸರಕಾರವೇ ಅವಕಾಶ ಕೊಟ್ಟಂತಿದೆ. ತಾಲೂಕಿನ ಸಿಪಿಐ, ಪಿಎಸ್‌ಐಗಳು ಮದ್ಯ ಅಕ್ರಮ ಮಾರಾಟದಲ್ಲಿ ಭಾಗಿಯಾಗಿರುವ ಸಂಶಯವಿದೆ. ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಪ್ರಕರಣ ದಾಖಲಿಸಿಲ್ಲ. ತಾಲೂಕಿನ ಕೆಲ ಮದ್ಯದಂಗಡಿಗಳಲ್ಲಿ ಸೆಕೆಂಡ್ಸ್ ಮದ್ಯ ಮಾರುವವರ ವಿರುದ್ಧ ಅಬಕಾರಿ ಡಿಸಿಯವರ ಗಮನಕ್ಕೆ ತಂದರೂ ಈವರೆಗೂ ಗಮನಹರಿಸಿಲ್ಲ. -ಎಸ್.ಭೀಮಾನಾಯ್ಕ, ಶಾಸಕರು, ಹಗರಿಬೊಮ್ಮನಹಳ್ಳಿ.
ಏನ್ ಮಾಡೋದ್ರಿ ಕೊರೊನಾದಲ್ಲಿ ಕೆಲಸ ಇಲ್ದೆ ಮನೆಯಲ್ಲಿಯೇ ಇದ್ದಿವಿ. ಮನೆಗಿದ್ದರೆ ಗಂಡ ಕುಡಿಲಿಕ್ಕೆ ರೊಕ್ಕ ಕೇಳ್ತಾನ್ರಿ, ಎಲ್ಲಿಂದ ಕೊಡಬೇಕ್ರಿ. ಕೋವಿಡ್ ಅಂತಹ ಎಲ್ಲಾ ಬಂದ್ ಮಾಡ್ಯಾರ. ಆದ್ರ ಈ ಬ್ರ್ಯಾಂಡಿ ಬಂದ್ ಮಾಡೋದು ಆಗೋಲ್ದು. ನಮ್ಮ ಹಳ್ಯಾಗ ಎಲ್ಲಿಬೇಕು ಅಲ್ಲಿ ಬ್ರಾಂಡಿ ಸಿಗೋಕ್ಕತೈತಿ ಹಂಗಾ ಆಗಿ ಕುಡಿಯೋದು ಊರಾಗ ಬಾಳ ಆಗೈತಿ.-ನೊಂದ ಮಹಿಳೆ.
ಗ್ರಾಮೀಣ ಪ್ರದೇಶಗಳಲ್ಲಿ ದೈವಸ್ಥರು ಎಂದರೆ ದೇವರು ಇದ್ದಂತೆ. ಇವರನ್ನು ಜನರು ಪೂಜ್ಯ ಭಾವದಿಂದ ಕಾಣುತ್ತಾರೆ. ಕೆಲ ಹಳ್ಳಿಗಳಲ್ಲಿ ದೈವಸ್ಥರು ಇಂಥ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ತಮ್ಮ ಗೌರವ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಜನರ ಆರೋಗ್ಯ ಕಾಪಾಡಬೇಕಾದ ಸರ್ಕಾರವೇ ಅಕ್ರಮ ಮದ್ಯ ಮಾರಾಟಕ್ಕೆ ಪರೋಕ್ಷವಾಗಿ ಅವಕಾಶ ನೀಡಿ ಆರೋಗ್ಯ ಹದಗೆಡಿಸುತ್ತಿದೆ. -ಅಕ್ಕಮಹಾದೇವಿ ಮದ್ಯ ನಿಷೇಧ ಆಂದೋಲನದ ಸಂಚಾಲಕಿ
-ಸುರೇಶ ಯಳಕಪ್ಪನವರ