Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳುಗಡೆ ಸಂತ್ರಸ್ತರಿಗೆ ಪರ್ಯಾಯವಾಗಿ ಭೂಮಿ ಮಂಜೂರು ಮಾಡುವಾಗ ಮುಳುಗಡೆ ಸಂತ್ತಸ್ತರ ಸರ್ಟಿಫಿಕೇಟ್‌ಗಳನ್ನು ಪಡೆದು, ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಬಂದ ಹಿನ್ನಲೆಯಲ್ಲಿ ಹಾಸನ ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಅವರ ಅಧ್ಯಕ್ಷತೆಯ ತನಿಖಾ ಸಮಿತಿಯು 2015 ರ ಜನವರಿಯಿಂದ 2018ರ ನವೆಂಬರ್ 30 ರ ಅವಧಿಯಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಿತ್ತು. ಸುಮಾರು 1,674 ಎಕರೆ ಅಕ್ರಮವಾಗಿ ಮಂಜೂರಾಗಿದೆ ಎಂದೂ ಸಮಿತಿಯು ವರದಿ ಸಲ್ಲಿಸಿತ್ತು.
Related Articles
Advertisement
ಕಾನೂನು ಹೋರಾಟ: ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿರುವವರ ಹಾಗೂ ಅವರಿಗೆ ಸಹಕಾರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟಕ್ಕೂ ನಾನು ಮತ್ತು ನನ್ನ ಪಕ್ಷ ಸಿದ್ಧ ಎಂದ ರೇವಣ್ಣ ಅವರು, ಅದಕ್ಕೆ ಅವಕಾಶ ನೀಡದಂತೆ ಕ್ರಮ ಜಾರಿಯಾಗಬಹುದೆಂಬ ವಿಶ್ವಾಸವಿದೆ ಎಂದರು.
ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ: ಈ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮವಾಗಿ ಭೂಮಿ ಮಂಜೂರಾಗಿದೆ ಎಂದು ವರದಿ ನೀಡಿದ ತಕ್ಷಣವೇ ತನಿಖಾ ಸಮಿತಿಯ ಅಧ್ಯಕ್ಷರಾಗಿದ್ದ ಹಾಸನ ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಅವರಿಗೆ ಸ್ಥಳ ತೋರಿಸದೇ ಎತ್ತಂಗಡಿ ಮಾಡಲಾಗಿಯಿತು.
ಅದರ ಬೆನ್ನ ಹಿಂದೆಯೇ ಶಿಸ್ತಿನ ಅಧಿಕಾರಿ ಎಂದೇ ಗುರ್ತಿಸಿದ್ದ ಸಕಲೇಶಪುರ ತಹಶೀಲ್ದಾರ್ ರಕ್ಷಿತ್ ಅವರನ್ನೂ ವರ್ಗಾವಣೆ ಮಾಡಿ, ಮಂಜುನಾಥ್ ಎಂಬವರನ್ನು ಸಕಲೇಶಪುರ ತಹಸೀಲ್ದಾರ್ ಹುದ್ದೆಗೆ ವರ್ಗ ಮಾಡಲಾಗಿದೆ. ಸಕಲೇಶಪುರ ತಾಲೂಕಿನಲ್ಲಿಯೇ ಸುಮಾರು 1000 ಕರೆ ಅಕ್ರಮವಾಗಿ ಭೂಮಿ ಮಂಜೂರಾಗಿರುವುದನ್ನು ತಹಸೀಲ್ದಾರ್ ರಕ್ಷಿತ್ ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದರು. ಈಗ ಅವರನ್ನೂ ತಕ್ಷಣ ವರ್ಗ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಮೇಲೆ ಸಿಎಂ ದ್ವೇಷ: ಬೇರೆ, ಬೇರೆ ಜಿಲ್ಲೆಗಳಲ್ಲಿ ಅಕ್ರಮ ಎಸಗಿ ಅಮಾನತಾಗಿರುವ ಅಧಿಕಾರಿಗಳನ್ನು ಈಗ ಹಾಸನ ಜಿಲ್ಲೆಗೆ ಸರ್ಕಾರ ವರ್ಗ ಮಾಡುತ್ತಿದೆ. ಭ್ರಷ್ಟ ಅಧಿಕಾರಿಗಳನ್ನು ಹಾಸನ ಜಿಲ್ಲೆಗೆ ಮಂಜೂರು ಮಾಡಲೂ ಇಂತಿಷ್ಟು ಎಂದು ದರ ನಿಗದಿಪಡಿಸಿ ವಸೂಲಿ ಆದ ನಂತರವೇ ವರ್ಗ ಮಾಡಲಾಗಿದೆ ಎಂದ ರೇವಣ್ಣ ಅವರು, ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಹಾಸನ ಜಿಲ್ಲೆಯಿಂದ ವರ್ಗ ಮಾಡುವ ಮೂಲಕ ಹಾಸನ ಜಿಲ್ಲೆಯ ಮೇಲೆ ಮುಖ್ಯಮಂತ್ರಿಯವರು ದ್ವೇಷ ಸಾಧಿಸುತ್ತಿದ್ದಾರೆ. ಇಂಥ ದ್ವೇಷದ ರಾಜಕಾರಣ ಒಳ್ಳೆಯದಲ್ಲ ಎಂದೂ ರೇವಣ್ಣ ಹೇಳಿದರು.