ಉಡುಪಿ: ಪರ್ಕಳ- ಮಣಿಪಾಲ ನಡುವಿನ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ವೇಳೆ ಈಶ್ವರ ನಗರ ಪೇಟೆಯಲ್ಲಿ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ನಿಲ್ದಾಣ ಪಕ್ಕದ ಅತಿಕ್ರಮಿತ ಗೂಡಂಗಡಿಯನ್ನು ಶನಿವಾರ ತೆರವುಗೊಳಿಸಲಾಗಿತ್ತು. ಸೋಮವಾರ ಮತ್ತೆ ಈ ಗೂಡಂಗಂಡಿ ಹೊಸದಾಗಿ ನಿರ್ಮಾಣಗೊಂಡ ರಸ್ತೆ ಕಾಂಕ್ರೀಟಿಕರಣದ ಬದಿಯ ಫುಟ್‌ಪಾತ್ ಮೇಲೆ ತಲೆ ಎತ್ತಿ ನಿಂತಿದೆ.
ಈಶ್ವರ ನಗರ ಪೇಟೆಯ ರಸ್ತೆ ಬದಿಯಲ್ಲಿ ಅಕ್ರಮವಾಗಿ ಜಾಗ ಅತಿಕ್ರಮಿಸಿಕೊಂಡು ಅಂಗಡಿ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿ ವಾಟು ನಡೆಸುತ್ತಿದ್ದ ಕಟ್ಟಡ ಗಳನ್ನು ತೆರವುಗೊಳಿಸುವ ಕಾರ್ಯ ಚರಣೆ ಶನಿವಾರ ನಡೆದಿತ್ತು. ಈಶ್ವರನಗರ ಬಸ್ ಸ್ಟಾಂಡ್ ಬಳಿ ಕಾರ್ಯಾಚರಿಸುತ್ತಿದ್ದ ಗೂಡಂಗಡಿ ಯೊಂದನ್ನು ಅಂದು ಕ್ರೇನ್ ಬಳಸಿ ತೆರವುಗೊಳಿಸಲಾಗಿತ್ತು.
ತೆರವಾಗಿದ್ದ ಗೂಡಂಗಡಿ ಬಸ್ ತಂಗುದಾಣ ಪಕ್ಕದಲ್ಲಿ ಮತ್ತೆ ನಿರ್ಮಾಣಗೊಂಡಿದೆ. ತಗಡಿನ ಶೀಟ್ ಬಳಸಿ ಗೂಡಂಗಡಿ ನಿರ್ಮಿಸಲಾಗಿದೆ. ಹೊಸ ಕಾಂಕ್ರೀಟ್ ರಸ್ತೆ ಬದಿಯ ಫುಟ್‌ಪಾತ್ ಮೇಲೆಯೇ ಗೂಡಂ ಗಡಿ ನಿರ್ಮಿಸಿರುವುದು ಅಚ್ಚರಿ ಮೂಡಿಸಿದೆ. ಫುಟ್‌ಪಾತ್ ಮೇಲೆ ಅಕ್ರಮವಾಗಿ ಗೂಡಂಗಡಿ ನಿರ್ಮಿಸಲು ಮಾಲಕರಿಗೆ ಪರವಾನಿಗೆ ನೀಡಿ ರುವವರು ಯಾರು ಅನ್ನುವ ಪ್ರಶ್ನೆ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಟ್ಟ ಫುಟ್‌ಪಾತ್ ಮೇಲೆ ಗೂಡಂಗಡಿ ನಿರ್ಮಿಸಿದಲ್ಲಿ ಪಾದಚಾರಿಗಳಿಗೆ ತೆರಳಲು ಕಷ್ಟವಾಗುತ್ತದೆ. ಇಲ್ಲಿ ವ್ಯಾಪಾರ ನಡೆಸಿದಲ್ಲಿ ಜನ ಹೇಗೆ ಓಡಾಡೋದು ಅನ್ನುವ ಪಶ್ನೆಯನ್ನು ಸ್ಥಳೀಯರು ಕೇಳುತ್ತಿದ್ದಾರೆ. ತತ್‌ಕ್ಷಣವೇ ಈ ಅಕ್ರಮ ಗೂಡಂಗಡಿಯನ್ನು ತೆರವುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.
ಕ್ರಮ
ಫುಟ್‌ಪಾತ್ ಮೇಲೆ ಗೂಡಂಗಡಿ ನಿರ್ಮಿಸುವುದು ಕಾನೂನು ಬಾಹಿರ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಈ ಕುರಿತು ಪರಿಶೀಲಿಸುವೆ. ಅಕ್ರಮವಾಗಿ ನಿರ್ಮಿಸಿಕೊಂಡದ್ದು ಕಂಡುಬಂದರೆ ತೆರವಿಗೆ ಕ್ರಮವಹಿಸುತ್ತೇನೆ.
-ಸುಮಿತ್ರಾ ಆರ್. ನಾಯಕ್, ನಗರ ಸಭೆ ಸದಸ್ಯೆ ಪರ್ಕಳ