ಕೊರಟಗೆರೆ: ಗ್ರೇಡ್-1 ಗ್ರಾಪಂಗೆ ಕಾಯಂ ಪಿಡಿಒ ಇಲ್ಲದ ಪರಿಣಾಮ ಸರ್ಕಾರಿ ಯೋಜನೆಗಳ ಅನುದಾನದ ಸಮರ್ಪಕ ಅನುಷ್ಠಾನವಿಲ್ಲದೆ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ತೋವಿನಕೆರೆ ಗ್ರೇಡ್-1 ಗ್ರಾಪಂ ನಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.
ಗ್ರಾಪಂಗೆ ಕಳೆದ 15 ತಿಂಗಳಿಂದ ಕಾಯಂ ಪಿಡಿಒ ನೇಮಕ ಆಗಿಲ್ಲ. ಅಧ್ಯಕ್ಷರು ರಾಜೀ ನಾಮೆ ನೀಡಿರುವುದರಿಂದ ಸಮಸ್ಯೆ ನಿವಾರಣೆ ಯಾಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರು ಪೂರೈಕೆ, ಕೊಳವೆ ಬಾವಿ ನಿರ್ವಹಣೆ, ಕಂದಾಯ ವಸೂಲಾತಿ, ಸ್ವತ್ಛ ಭಾರತ ಮಿಷನ್ ಮತ್ತು 14ನೇ ಹಣಕಾಸು, ಬಿಸಾಡಿಹಳ್ಳಿ ಕೊಳವೆ ಬಾವಿ ಪೈಪ್, ಕೇಬಲ್ ಹಾಗೂ ಉದ್ಯೋಗ ಖಾತ್ರಿ ಕಾಮಗಾರಿ ಅಕ್ರಮದ ಬಗ್ಗೆ ಗ್ರಾಪಂ ಸದಸ್ಯ ಮತ್ತು ನೀರು ವಿತರಕನ ನಡುವೆ ನಡೆದಿರುವ ಆಡಿಯೋ ಸಂಭಾಷಣೆ ಸ್ಥಳೀಯ”ನಗುವ ಮನಸ್ಸು’ ವಾಟ್ಸಾಪ್ ಗ್ರೂಪಿನಲ್ಲಿ ಹರಿದಾಡಿರುವುದು ಅನುಮಾನಗಳಿಗೆ ಪುಷ್ಠಿ ನೀಡಿದಂತಿದೆ.
ಅಧಿಕಾರ ಬಿಟ್ಟುಕೊಡ್ತಿಲ್ಲ: ನೀಲಗೊಂಡನ ಹಳ್ಳಿ ಗ್ರಾಪಂ ಕಾರ್ಯದರ್ಶಿಯನ್ನು ಚಿನ್ನಹಳ್ಳಿ ಮತ್ತು ತೋವಿನಕೆರೆ ಗ್ರಾಪಂಗೆ ಪ್ರಭಾರ ಪಿಡಿಒ ಆಗಿ ಇಒ ನೇಮಿಸಿದ್ದು, ವಾರಕ್ಕೆರಡು ಸಲ ಗ್ರಾಪಂಗೆ ಭೇಟಿ ನೀಡುತ್ತಾರೆ. ಸ್ಥಳೀಯ ಸಮಸ್ಯೆ ಮತ್ತು ನಾಗರಿಕರ ಅಹವಾಲಿನ ಜೊತೆಗೆ ಉದ್ಯೋಗ ಖಾತ್ರಿ ಯೊಜನೆ ಕಾಮಗಾರಿ ಕುಂಠಿತವಾಗಿ ಅಭಿವೃದ್ಧಿ ಪಾತಾಳಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ತೋವಿನಕೆರೆ
ಗ್ರಾಪಂ ನೋಡಿಕೊಳ್ಳುವಂತೆ ಬುಕ್ಕಾಪಟ್ಟಣ ಪಿಡಿಒಗೆ ಸಿಇಒ, ತಾಪಂ ಇಒ ಆದೇಶಿಸಿದ್ದಾರೆ. ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬಂತೆ ದಾಖಲೆ ಸಂಗ್ರಹಣೆ ಮತ್ತು ಅನಾರೋಗ್ಯ ನೆಪ ಹೇಳಿ ಹಾಲಿ ಪ್ರಭಾರ ಪಿಡಿಒ ಹಸ್ತಾಂತರ ಮಾಡದಿ ರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತನಿಖೆಗೆ ಸಿಇಒ ಆದೇಶ: ತೋವಿನಕೆರೆ ಗ್ರಾಪಂ ಅಕ್ರಮದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಆಡಿಯೋ ಹರಿದಾಡಿದ ಬೆನ್ನಲ್ಲೆ ಜಿಪಂ ಸಿಇಒ ತನಿಖೆಗೆ ಆದೇಶಿಸಿದ್ದಾರೆ. ಜಿಪಂ ಸಹಾಯಕ ಯೋಜನಾ ಅಧಿಕಾರಿ ಗಾಯತ್ರಿ ನೇತೃತ್ವದ ತಂಡ ಗ್ರಾಪಂಗೆ ಭೇಟಿ ನೀಡಿ ಕೊಳವೆಬಾವಿ ದಾಖಲೆ ಪಡೆದು ತನಿಖೆ ಕೈಗೊಂಡಿದ್ದಾರೆ. ಎಷ್ಟು ಹಣ ವಂಚಿಸಿದ್ದಾರೆ ಎಂಬುದು ತನಿಖೆಯಿಂದ ಸತ್ಯ ಹೊರಬರಬೇಕಿದೆ.
ತೋವಿನಕೆರೆ ಗ್ರಾಪಂನಿಂದ ಕಾಣೆ ಆಗಿರುವ ಕೊಳವೆಬಾವಿ ಪೈಪುಗಳ ಬಗ್ಗೆ ಜಿಪಂನಿಂದ ತನಿಖೆ ನಡೆಯುತ್ತಿದೆ. ಪ್ರಭಾರ ಪಿಡಿಒ ನೇಮಕ ಮತ್ತು ಗ್ರಾಪಂ ಸಮಸ್ಯೆ ಮಾಹಿತಿ ಪಡೆಯಲಾಗಿದೆ. 24 ಗ್ರಾಪಂ ಪಿಡಿಒ ಮತ್ತು ಇಒ ಸಭೆ ಶೀಘ್ರ ನಡೆಸಲಾಗುವುದು
. –ರಮೇಶ್, ಉಪಕಾರ್ಯದರ್ಶಿ(ಅಭಿವೃದ್ಧಿ) ಜಿಲ್ಲಾ ಪಂಚಾಯಿತಿ
-ಎನ್.ಪದ್ಮನಾಭ್