Advertisement

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

05:34 PM Feb 09, 2023 | Team Udayavani |

ಗಂಗಾವತಿ: ತಾಲೂಕಿನ ಸಾಣಾಪೂರ, ಆನೆಗೊಂದಿ, ಹನುಮನಹಳ್ಳಿ ಭಾಗದಲ್ಲಿದ್ದ ಅನಧಿಕೃತ ಹೊಟೇಲ್‌ಗಳ ತೆರವಿ ಕಾರ್ಯಕ್ಕೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಮುಂದಾಗಿದ್ದು ಗುರುವಾರ ಬೆಳ್ಳಿಗ್ಗೆ ಅಂಜನಾದ್ರಿ ಬೆಟ್ಟದ ಕಚೇರಿಯಲ್ಲಿ ಸಭೆ ನಡೆಸಿ ಮೂರು ತಂಡಗಳಲ್ಲಿ ಕಾರ್ಯಾಚರಣೆಗಿಳಿದಿದ್ದಾರೆ. ಹೊಟೇಲ್‌ಗಳ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕವನ್ನು ಜೆಸ್ಕಾಂ ಹಾಗೂ ಸಾಣಾಪೂರ ಮತ್ತು ಆನೆಗೊಂದಿ ಗ್ರಾ.ಪಂ.ಗಳ ಮೂಲಕ ಕಡಿತಗೊಳಿಸಲಾಗಿದೆ. ಕೂಡಲೇ ಸ್ವಯಂ ಪ್ರೇರಣೆಯಿಂದ ಎರಡು ದಿನಗಳಲ್ಲಿ ಅನಧಿಕೃತ ಹೊಟೇಲ್‌ಗಳಲ್ಲಿರುವ ದೇಶ ವಿದೇಶದ ಪ್ರವಾಸಿಗರನ್ನು ವಾಪಸ್ ಹಣ ಕೊಟ್ಟು ಕಳಿಸಿ ಕಟ್ಟಡ, ಗುಡಿಸಲುಗಳನ್ನು ತೆರವು ಮಾಡಿಕೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Advertisement

ವಿರೂಪಾಪೂರ ಗಡ್ಡಿಯಲ್ಲಿದ್ದ ರೆಸಾರ್ಟ್ಗಳನ್ನು ಸ್ಮಾರಕ ಸಂರಕ್ಷಣೆಗಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ 2018ರಲ್ಲಿ ತೆರವುಗೊಳಿಸಿದ ನಂತರ ಸಾಣಾಪೂರ, ಆನೆಗೊಂದಿ, ಹನುಮನಹಳ್ಳಿ , ಅಂಜಿನಳ್ಳಿ, ಜಂಗ್ಲಿ, ಕಡೆಬಾಗಿಲು ಗ್ರಾಮಗಳಲ್ಲಿ ಅನಧಿಕೃತವಾಗಿ ರೈತರ ಹೊಲ-ಗದ್ದೆಗಳಲ್ಲಿ ಕೆಲವಡೆ ರೈತರು ಇನ್ನೂ ಕೆಲವೆಡೆ ಭೂಮಿ ಲೀಜ್ ಪಡೆದು ಹೊಟೇಲ್‌ಗಳನ್ನು ಆರಂಭಿಸಲಾಗಿತ್ತು. ಇದನ್ನು ಖಂಡಿಸಿ ಕೆಲ ಕರವೇ ಸಂಘಟನೆಗಳು ಸೇರಿ ಸಂಘ ಸಂಸ್ಥೆಯವರು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ಅನಧಿಕೃತ ಹೊಟೇಲ್‌ಗಳನ್ನು ಬಂದ್ ಮಾಡಿಸುವಂತೆ ಆಗ್ರಹಿಸಿದ್ದವು. ನಂತರ ಜಿಲ್ಲಾಡಳಿತ ಎಲ್ಲಾ ಅನಧಿಕೃತ(ಭೂಮಿಯನ್ನು ಕೃಷಿಯೇತರವಾಗಿ ಪರಿವರ್ತಿಸಿಕೊಳ್ಳದೇ ವಾಣಿಜ್ಯವಾಗಿ ಬಳಕೆ ಮಾಡುವುದು) ಹೊಟೇಲ್‌ಗಳನ್ನು ಬೀಜ ಜಡಿದು ಸೀಜ್ ಮಾಡಿದ್ದರು. ಆನೆಗೊಂದಿ ಭಾಗದ ಗ್ರಾಮಸ್ಥರು ಮತ್ತು ಹೊಟೇಲ್ ಮಾಲೀಕರು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಸಲ್ಲಿಸಿ ಈಗಿರುವ ನಿಯಮಗಳಲ್ಲಿ ಬದಲಿಸಿ ಆನೆಗೊಂದಿ ಭಾಗದಲ್ಲಿ ನಿಯಮಬದ್ಧವಾಗಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರಿಂದ ಫಾರ್ಮಾಹೌಸ್ ಮಾದರಿಯಲ್ಲಿ ಕೃಷಿಕರು ತಮ್ಮ ಭೂಮಿಯ ಒಂದಿಷ್ಟು ಜಾಗದಲ್ಲಿ ವ್ಯಾಪಾರ ನಡೆಸಲು ಅವಕಾಶಗಳಿರುವ ಕುರಿತು ಜಿಲ್ಲಾಡಳಿತದ ಮೂಲಕ ಸರಕಾರ ವರದಿ ಪಡೆಯುವ ಕುರಿತು ವರದಿಯನ್ನು ಕೇಳಿತ್ತು.

ಜಿಲ್ಲಾಡಳಿತ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಆನೆಗೊಂದಿ ಭಾಗದವರಿಂದ ಆಕ್ಷೇಪಗಳನ್ನು ಆಹ್ವಾನಿಸಿ ವ್ಯಾಪಾರಕ್ಕೆ ನಿಯಮಬದ್ಧವಾದ ಪರವಾನಿಗೆ ನೀಡುವ ಕುರಿತು ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದು ಕೆಲ ಮಾರ್ಪಾಟುಗಳೊಂದಿಗೆ ಸರಕಾರ ಶೀಘ್ರವೇ ಗೆಜೆಟ್‌ನಲ್ಲಿ ಪ್ರಕಟಿಸಬೇಕಿದೆ. ಈ ಮಧ್ಯೆ ಆನೆಗೊಂದಿ ಭಾಗದಲ್ಲಿ ಅನಧಿಕೃತ ಹೊಟೇಲ್‌ಗಳು ತಲೆ ಎತ್ತಿದ್ದರಿಂದ ಸಂಘ ಸಂಸ್ಥೆಗಳು ಸಂಘಟನೆಗಳ ಮುಖಂಡರು ಪುನಹ ಜಿಲ್ಲಾಡಳಿತ ಮತ್ತು ಪ್ರಾಧಿಕಾರಕ್ಕೆ ಅನಧಿಕೃತ ಹೊಟೇಲ್ ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದರಿಂದ ಕಳೆದೆರಡು ದಿನಗಳ ಹಿಂದೆ ಜಿಲ್ಲಾಡಳಿತ ಮತ್ತು ಪ್ರಾಧಿಕಾರದಿಂದ ಆನೆಗೊಂದಿ ಭಾಗದ ಅನಧಿಕೃತ ಹೊಟೇಲ್‌ಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು. ಹೊಟೇಲ್‌ಗಳ ಮಾಲೀಕರು ನಿರ್ಲಕ್ಷ್ಯ
ವಹಿಸಿದ್ದರಿಂದ ಗುರುವಾರ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಪ್ರತಿ ಹೊಟೇಲ್‌ಗೂ ತೆರಳಿ ಸ್ವಯಂ ತೆರವುಗೊಳಿಸಿಕೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಮೀಷನರ್ ಸಿದ್ದರಾಮೇಶ, ಕೊಪ್ಪಳ ಎಸಿ ಬಸವಣೆಪ್ಪ ಕಳಶೆಟ್ಟಿ, ತಹಸೀಲ್ದಾರ್ ಯು.ನಾಗರಾಜ, ಅರಣ್ಯಾಧಿಕಾರಿ ಶಿವರಾಜ್ ಮೇಟಿ, ಸಿಪಿಐ ಮಂಜುನಾಥ , ಪಿಡಿಒಗಳಾದ ಬಸವನಗೌಡ, ಕೆ.ಕೃಷ್ಣಪ್ಪ, ಅಬಕಾರಿ, ಪ್ರವಾಸೋದ್ಯಮ,ಜೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು,ಗ್ರಾಮಲೆಕ್ಕಾಧಿಕಾರಿಗಳಿದ್ದರು.

ಆನೆಗೊಂದಿ ಭಾಗದ 15 ಹಳ್ಳಿಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದು ಇಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸಲು ಅವಕಾಶಗಳಿಲ್ಲ. ಈಗಾಗಲೇ ಹಲವು ಭಾರಿ ಅನಧಿಕೃತ ಹೋಟೇಲ್‌ಗಳನ್ನು ತೆರವು ಮಾಡಲಾಗಿದ್ದು ಪುನಹ ಕೃಷಿ, ಅರಣ್ಯ ಭೂಮಿ ಮತ್ತು ನದಿ ಪಾತ್ರದಲ್ಲಿ ಅನಧಿಕೃತವಾಗಿ ಹೊಟೇಲ್ ಗುಡಿಸಲುಗಳನ್ನು ನಿರ್ಮಿಸಿಕೊಂಡು ಕೆಲವರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಈ ಕುರಿತು ಹಲವು ದೂರುಗಳಿದ್ದು ಕೂಡಲೇ ತೆರವುಗೊಳಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಸದ್ಯ ವಿದ್ಯುತ್, ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಸ್ವಯಂ ತೆರವುಗೊಳಿಸಿಕೊಳ್ಳದಿದ್ದರೆ ಪ್ರಾಧಿಕಾರ, ಜಿಲ್ಲಾಡಳಿತದ ಮೂಲಕ ತೆರವು ಕಾರ್ಯಾಚರಣೆ ನಡೆಯಲಿದೆ. ಸರಕಾರ ಫಾರ್ಮಾಹೌಸ್ ಮೂಲಕ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ವರದಿಯನ್ನು ಕೇಳಿತ್ತು. ಜನರಿಂದ ಆಕ್ಷೇಪಗಳನ್ನು ಆಹ್ವಾನಿಸಿ ಸರಕಾರಕ್ಕೆ ವಿಸ್ತೃತ ವರದಿ ಕಳಿಸಲಾಗಿದೆ. ಸರಕಾರ ಇನ್ನು ಗೆಜೆಟ್ ಮೂಲಕ ಫಾರ್ಮಾಹೌಸ್ ಪರವಾನಿಗೆ ನೀಡುವ ಕುರಿತು ನಿಯಮಗಳನ್ನು ಪ್ರಕಟಿಸಿಲ್ಲ. ಆದರೂ ಆನೆಗೊಂದಿ ಭಾಗದಲ್ಲಿ ಅವಸರದಲ್ಲಿ ಅನಧಿಕೃತ ಹೊಟೇಲ್‌ಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಹಂಪಿ ಭಾಗದಲ್ಲಿಯೂ 13 ಅನಧಿಕೃತ ಹೊಟೇಲ್‌ಗಳಿದ್ದು ಅವುಗಳನ್ನು ತೆರವು ಕಾರ್ಯಾಚರಣೆ ಮಾಡಲಾಗುತ್ತದೆ.
-ಸಿದ್ದರಾಮೇಶ ಆಯುಕ್ತರು ಹಂಪಿ ಅಭಿವೃದ್ಧಿ ಪ್ರಾಧಿಕಾರ.

Advertisement

ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಂಪಿ ಭಾಗದ 14 ಗ್ರಾಮಗಳು ಬರುತ್ತಿದ್ದು ಅಲ್ಲಿಯ ಜನಪ್ರತಿನಿಧಿಗಳ ಆಶೀರ್ವಾದಿಂದ ಅನಧಿಕೃತವಾಗಿ ನೂರಕ್ಕೂ ಹೆಚ್ಚು ರೆಸಾರ್ಟ್ ಹೊಟೇಲ್‌ಗಳು ನಡೆಯುತ್ತಿವೆ. ನಿತ್ಯವೂ ಆನ್‌ಲೈನ್ ಮೂಲಕ ರೂಂಗಳು ಬುಕ್ ಮಾಡಿಕೊಂಡು ಅಲ್ಲಿಯ ವ್ಯಾಪಾರಸ್ಥರು ದುಡಿಯುತ್ತಿದ್ದಾರೆ. ಆನೆಗೊಂದಿ ಭಾಗದ ಹೊಟೇಲ್‌ಗಳು ಮಾತ್ರ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೊಪ್ಪಳ ಜಿಲ್ಲಾಡಳಿತಕ್ಕೆ ಕಾಣುತ್ತಿದ್ದು ಪದೇ ಪದೇ ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಸರಕಾರ ಮತ್ತು ಸ್ವತಹ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆನೆಗೊಂದಿ ಭಾಗದಲ್ಲಿ ಫಾರ್ಮಾಹೌಸ್ ಮೂಲಕ ವ್ಯಾಪಾರಕ್ಕೆ ರೈತರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹಲವು ಭಾರಿ ಹೇಳಿಕೆ ನೀಡಿದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಹಂಪಿ-ಆನೆಗೊಂದಿ ಭಾಗಗಳ ಮಧ್ಯೆ ಸಚಿವ ಆನಂದಸಿಂಗ್ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಆನೆಗೊಂದಿ ಭಾಗಕ್ಕೆ ಆಗಮಿಸುವ ಪ್ರವಾಸಿಗರನ್ನು ಹಂಪಿ ಭಾಗದ ಹೊಟೇಲ್,ರೆಸಾರ್ಟ್ಗಳಲ್ಲಿ ಉಳಿಸಿಕೊಳ್ಳಲು ಅನಧಿಕೃತ ನೆಪದಲ್ಲಿ ನಮ್ಮ ಭಾಗದ ಪ್ರವಾಸೋದ್ಯಮವನ್ನು ನಾಶ ಮಾಡಲಾಗುತ್ತಿದ್ದು ಇದು ಖಂಡನೀಯವಾಗಿದೆ.
-ಎ.ಸಿ.ಎಂ. ರೆಡ್ಡಿ ಹೊಟೇಲ್ ಮಾಲೀಕ.

Advertisement

Udayavani is now on Telegram. Click here to join our channel and stay updated with the latest news.

Next