Advertisement

ಅಕ್ರಮ ಪ್ಲಾಟ್ ದಂಧೆ; ಬಡವರ ರಕ್ಷಣೆ ಅಗತ್ಯ

08:49 AM Jun 24, 2019 | Suhan S |

ಹುಬ್ಬಳ್ಳಿ: ನಗರದಲ್ಲಿ ಕೆಲವರು ಅಕ್ರಮವಾಗಿ ಪ್ಲಾಟ್‌ಗಳನ್ನು ಮಾರಾಟ ಮಾಡುತ್ತಿರುವುದರಿಂದ ಬಡವರು ತೊಂದರೆಗೀಡಾಗುವಂತಾಗಿದೆ. ಜನಪ್ರತಿನಿಧಿಗಳಿಂದ ಬಡವರಿಗೆ ರಕ್ಷಣೆ ನೀಡುವ ಕಾರ್ಯ ಆಗಬೇಕಿದೆ ಎಂದು ಶಾಸಕ ಜಗದೀಶ ಶೆಟ್ಟರ ಹೇಳಿದರು.

Advertisement

ಗೋಕುಲ ರಸ್ತೆ ಕೈಗಾರಿಕಾ ವಸಾಹತು ಪ್ರದೇಶದ ಲಿಡ್ಕರ್‌ ಕಾಲೋನಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ| ಬಾಬು ಜಗಜೀವನರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಅಂದಾಜು 1.56 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಸಾಂಸ್ಕೃತಿಕ ಭವನ ಕಾಮಗಾರಿಗೆ ರವಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಗರದಲ್ಲಿ ಕೆಲವರು ಯಾರದೋ ಜಮೀನನ್ನು ತಮ್ಮದೆಂದು ಮೊಕ್ತಿಯಾರ ಪಡೆದು, ಬಡವರು ಹಾಗೂ ಮಧ್ಯಮ ವರ್ಗದರಿಗೆ ಕಡಿಮೆ ದರಕ್ಕೆ ಕೊಡುವುದಾಗಿ ನಂಬಿಸಿ 10ರೂ. ಬಾಂಡ್‌ ಪೇಪರ್‌ನಲ್ಲಿ ಮಾರಾಟ ಮಾಡಿ ವಂಚಿಸುವ ದಂಧೆ ನಡೆಯುತ್ತಿದೆ. ಇವರನ್ನು ನಂಬಿ ಲಕ್ಷಾಂತರ ರೂ. ಸಾಲ-ಸೋಲ ಮಾಡಿ ಮನೆ ಕಟ್ಟಿಸಿ 20-30 ವರ್ಷ ಅಲ್ಲಿ ವಾಸಿಸುತ್ತಿರುತ್ತಾರೆ. ಕೊನೆಗೆ ಜಾಗದ ಮಾಲೀಕರು ಕೋರ್ಟ್‌ ಮೊರೆ ಹೋಗಿ ತಮ್ಮ ಜಮೀನು ಪಡೆಯುತ್ತಿದ್ದಾರೆ. ಇದರಿಂದ ಬಡವರು ಬೀದಿಗೆ ಬೀಳುವಂತಾಗಿದೆ. ಸರಕಾರದಿಂದ ಬಡವರು, ಮಧ್ಯಮ ವರ್ಗದವರಿಗೆ ವಸತಿ ನಿರ್ಮಾಣ ಮಾಡಿಕೊಟ್ಟರೆ ಸಹಕಾರಿಯಾಗುತ್ತದೆ. ಬಡವರು ಕಡಿಮೆ ದರಕ್ಕೆ ಭೂಮಿ ಮಾರಾಟ ಮಾಡುವ ವಂಚಕರಿಂದ ಜಾಗೃತರಾಗಿರಬೇಕು ಎಂದರು.

ಲಿಡ್ಕರ್‌ ಕಾಲೋನಿಯಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನವನ್ನು ನಿಗದಿತ 9 ತಿಂಗಳೊಳಗೆ ಗುಣಮಟ್ಟದಲ್ಲಿ ನಿರ್ಮಿಸಿಕೊಡಬೇಕು. ಕಾಲೋನಿಯ ನಿವಾಸಿಗಳಿಗೆ ಆದಷ್ಟು ಬೇಗ ಹಕ್ಕುಪತ್ರ ವಿತರಣೆ ಮಾಡಬೇಕು ಎಂದರು.

ಲಿಡ್ಕರ್‌ ಅಧ್ಯಕ್ಷರಾದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಲಿಡ್ಕರ್‌ ಕಾಲೋನಿಯಲ್ಲಿ ಮನೆಗಳನ್ನು ಕಟ್ಟುವ ಉದ್ದೇಶವಿತ್ತು. ಆದರೆ ಜಾಗ ಕಡಿಮೆ ಇದೆ. ಚರ್ಮೋದ್ಯೋಮದಲ್ಲಿರುವ ಜನರಿಗೆ ಅಗತ್ಯ ಮೂಲೌಕರ್ಯ ಒದಗಿಸಲು ಹಾಗೂ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

Advertisement

ಚರ್ಮ ಉತ್ಪನ್ನಗಳಿಗೆ ಹೊಸ ವಿನ್ಯಾಸ, ಬ್ರ್ಯಾಂಡಿಂಗ್‌ ಮಾಡಿ ಲಿಡ್ಕರ್‌ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ಚರ್ಮಕಾರರು ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗಬಾರದು. ಮಧ್ಯವರ್ತಿಗಳಿಗೆ ಕಡಿವಾಣ ಹಾಕಲಾಗುವುದು. ಲಿಡ್ಕರ್‌ ಕಾಲೋನಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ, ಸದಾನಂದ ತೇರದಾಳ, ಗುರುನಾಥ ಉಳ್ಳಿಕಾಶಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next