ನವದೆಹಲಿ: ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ನೀಡುವ ಹಾಗೂ ಕ್ರಿಪ್ಟೋ ಕರೆನ್ಸಿಗಳಲ್ಲಿ ಅಕ್ರಮ ವಹಿವಾಟು ನಡೆಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ನಿರ್ದೇಶನದ ಮೇರೆಗೆ ಜಾರಿ ನಿರ್ದೇಶನಾಲಯವು 20 ಸಂಸ್ಥೆಗಳ ಮೇಲೆ ನಿಗಾ ವಹಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಐಟಂ ಡ್ಯಾನ್ಸ್ ಮಾಡ್ಬೇಡ… ʼಊ ಅಂಟವಾʼ ಹಾಡಿಗೆ ಸಮಂತಾ ಆಪ್ತರಿಂದಲೇ ವ್ಯಕ್ತವಾಗಿತ್ತು ವಿರೋಧ
ಹಣಕಾಸು ವರ್ಗಾವಣೆ ನಿಗ್ರಹ ಕಾಯ್ದೆ(ಪಿಎಂಎಲ್ ಎ)ಯಡಿ 20 ಕ್ರಿಪ್ಟೋ ಕರೆನ್ಸಿ ವಹಿವಾಟು ನಡೆಸುತ್ತಿರುವ ಸಂಸ್ಥೆಗಳ ಕಾರ್ಯಚಟುವಟಿಕೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹಣಕಾಸು ಸಚಿವಾಲಯ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದೆ.
20 ಸಂಸ್ಥೆಗಳ ವಹಿವಾಟಿನ ವಿರುದ್ಧ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಮೂಲಗಳು ತಿಳಿಸಿವೆ. ಕ್ರಿಪ್ಟೋ ಕರೆನ್ಸಿ ವಹಿವಾಟು ನಡೆಸುತ್ತಿರುವ 20 ಸಂಸ್ಥೆಗಳ ಕಾರ್ಯಚಟುವಟಿಕೆ ಮೇಲೆ ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ರಾಜ್ಯದ ತನಿಖಾ ಸಂಸ್ಥೆಗಳು ಸೂಕ್ಷ್ಮ ನಿಗಾ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವುದಾಗಿ ವರದಿ ಹೇಳಿದೆ.
ಕ್ರಿಪ್ಟೋ ಕರೆನ್ಸಿ ಎನ್ನುವುದು ಡಿಜಿಟಲ್ ಕರೆನ್ಸಿಯಾಗಿದ್ದು, ಇದನ್ನು ಕಂಪ್ಯೂಟರ್ ನೆಟ್ವರ್ಕ್ ಮೂಲಕ ವಿನಿಮಯದ ವಹಿವಾಟು ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸರ್ಕಾರ ಅಥವಾ ಬ್ಯಾಂಕ್ ಗಳ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿಲ್ಲ.
ಈ ನಿಟ್ಟಿನಲ್ಲಿ ಕಾನೂನು ಬಾಹಿರವಾಗಿ ಕ್ರಿಪ್ಟೋ ಕರೆನ್ಸಿ ವಹಿವಾಟು ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಣಕಾಸು ಸಚಿವಾಲಯ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.