Advertisement

ಅಕ್ರಮ ಜಾತಿ ಪ್ರಮಾಣಪತ್ರ: ದೂರು ದಾಖಲಿಸಲು ಕ್ರಮ

01:36 PM Jun 04, 2019 | Suhan S |

ತುಮಕೂರು: ಅಕ್ರಮವಾಗಿ ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವ 178 ಮಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ ಕುಮಾರ್‌ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ.ಜಾತಿ, ಪ.ಪಂಗಡ ಸಮುದಾಯಗಳ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಬೇಡಜಂಗಮ ಜಾತಿ ಪ್ರಮಾಣ ಪತ್ರವನ್ನು ಜಿಲ್ಲೆಯಲ್ಲಿ 178 ಮಂದಿ ಅಕ್ರಮವಾಗಿ ಪಡೆದು ಕೊಂಡಿದ್ದಾರೆ. ಇಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಿಯಮ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ರದ್ದು ಮಾಡಿರುವ ಜಾತಿ ಪ್ರಮಾಣ ಪತ್ರ ಹೊಂದಿರುವರುವ ಕೆಲವರು ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಪ್ರಕರಣಗಳ ಬಗ್ಗೆಯೂ ಸೂಕ್ತ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಇಬ್ಬರೂ ಸರ್ಕಾರಿ ಕೆಲಸಕ್ಕೆ ಸೇರ್ಪಡೆ: ಬೇಡಜಂಗಮ ಜಾತಿ ಪ್ರಮಾಣ ಪತ್ರಗಳನ್ನು ರದ್ದುಪಡಿಸಿರುವುದಾಗಿ ತಹಶೀಲ್ದಾರ್‌ರವರು ಅನುಪಾಲನಾ ವರದಿ ನೀಡಿದ್ದಾರೆ. ಕೆಲವರು ಇದೇ ಜಾತಿ ಪ್ರಮಾಣ ಆಧಾರದ ಮೇಲೆ ಕೆ.ಐ.ಡಿ.ಬಿ.ಯಿಂದ ಪರಿಹಾರ ಪಡೆದಿದ್ದಾರೆ. ಅಲ್ಲದೆ ಇಬ್ಬರೂ ವ್ಯಕ್ತಿಗಳು ಸರ್ಕಾರಿ ಕೆಲಸಕ್ಕೆ ಸೇರಿದ್ದಾರೆ ಎಂದು ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯ ರಂಗಯ್ಯ ಸಭೆಗೆ ಮಾಹಿತಿ ನೀಡಿದರು.

ಅನುದಾನ ಪರಿಶೀಲನೆಗೆ ಮನವಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಂಬಿಬಿಎಸ್‌ ಹಾಗೂ ಬಿಇ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆಗೆ 64 ಲಕ್ಷ ರೂ. ಮೀಸಲಿರಿಸಿದೆ. ಆದರೆ 64 ಲಕ್ಷ ರೂ. ಅನುದಾನದಲ್ಲಿ ತುಮಕೂರು ಮಹಾನಗರ ಪಾಲಿಕೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜೊತೆ ಇತರೆ ವರ್ಗದವರಿಗೂ ಇದೇ ಅನುದಾನ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ರಂಗಯ್ಯ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

Advertisement

10 ದಿನದಲ್ಲಿ ವರದಿ ಸಲ್ಲಿಕೆಗೆ ಸೂಚನೆ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ಇತರೆ ವರ್ಗಕ್ಕೆ ಬಳಸಿಕೊಳ್ಳಲು ಅವಕಾಶವಿಲ್ಲ. ಈ ಬಗ್ಗೆ ಪಾಲಿಕೆಯ ಆಯುಕ್ತರು, ನಗರ ಯೋಜನಾ ನಿರ್ದೇಶಕರು, ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ ಈ ಬಗ್ಗೆ ಪರಿಶೀಲಿಸಿ ಮುಂದಿನ 10 ದಿನಗಳೊಳಗೆ ನನಗೆ ವರದಿ ಸಲ್ಲಿಸುವಂತೆ ಸೂಚಿಸಿದರು.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ತಾಲೂಕುವಾರು ಅಂಕಿ- ಅಂಶಗಳನ್ನು ಪೊಲೀಸ್‌ ಇಲಾಖೆ ಮುಂದಿನ ಸಭೆಯಲ್ಲಿ ಒದಗಿಸಬೇಕು. ಪೊಲೀಸ್‌ ಠಾಣೆವಾರು ಶಾಂತಿ ಸಭೆ, ಕುಂದು ಕೊರತೆ ಸಭೆ ನಡೆಸಿರುವ ಬಗ್ಗೆ ಮಾಹಿತಿಯನ್ನು ಸಲ್ಲಿಸುವಂತೆ ಪೊಲೀಸ್‌ ಇಲಾಖೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಜಿ.ಬಿ ಜ್ಯೋತಿ ಗಣೇಶ್‌, ಜಿಲ್ಲಾ ಪಂಚಾಯ್ತಿ ಸಿಇಒ ಶುಭಾ ಕಲ್ಯಾಣ್‌, ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯ ಕುಮಾರ್‌ ಮಾದರ್‌, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಿ.ಬಿ.ದೇವರಾಜ್‌, ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ರಾಜ್‌ಕುಮಾರ್‌ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next