Advertisement

ಪದವಿ ಕಾಲೇಜುಗಳಲ್ಲಿ ಕಾನೂನು ಬಾಹಿರ ಪ್ರವೇಶಾತಿ ಆರಂಭ!

01:25 AM May 04, 2020 | Sriram |

ಬೆಂಗಳೂರು: ಪಿಯುಸಿ ಇಂಗ್ಲಿಷ್‌ ಪರೀಕ್ಷೆಯೇ ಇನ್ನು ನಡೆದಿಲ್ಲ, ನಡೆದಿರುವ ಪರೀಕ್ಷೆಯ ಫಲಿತಾಂಶವೂ ಬಂದಿಲ್ಲ. ಆದರೂ ಕೆಲವು ಪದವಿ ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿವೆ.

Advertisement

ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದ ಅನಂತರವೇ ಪದವಿ ಪ್ರವೇಶ ಪ್ರಕ್ರಿಯೆ ಆರಂಭಿಸ ಬೇಕು ಎಂಬುದು ಕಾಲೇಜು ಶಿಕ್ಷಣ ಇಲಾಖೆಯ ನಿಯಮದಲ್ಲಿ ಸ್ಪಷ್ಟವಾಗಿದೆ.

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಪರೀಕ್ಷೆ ನಡೆದಿರುವ ವಿಷಯಗಳ ಉತ್ತರ ಪತ್ರಿಕೆಯ ಮೌಲ್ಯಮಾಪನವೂ ನಡೆದಿಲ್ಲ. ಕೋವಿಡ್‌-19 ಪರಿಸ್ಥಿತಿ ಸುಧಾರಿಸಿ, ಇಂಗ್ಲಿಷ್‌ ಪರೀಕ್ಷೆ ನಡೆದು, ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡು, ಫಲಿತಾಂಶ ಹೊರಬಿದ್ದ ಬಳಿಕವೇ ಪದವಿ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಆದರೆ ಕೆಲವು ಖಾಸಗಿ ಕಾಲೇಜುಗಳು ಮುಂದಿನ ವರ್ಷದ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿವೆ.

ಒಂದೇ ಸೂರಿನಡಿ ಪಿಯುಸಿ ಮತ್ತು ಪದವಿ ಕಾಲೇಜು ಇರುವ ಶಿಕ್ಷಣ ಸಂಸ್ಥೆಗಳು ಹಾಗೂ ಪಿಯುಸಿ ಮತ್ತು ಪದವಿ ಕಾಲೇಜುಗಳು ಹೊಂದಾಣಿಕೆ ಆಧಾರದಲ್ಲಿ ನಡೆಸುತ್ತಿರುವ ಕೆಲವೊಂದು ಶಿಕ್ಷಣ ಸಂಸ್ಥೆಗಳು ಪದವಿ ಪ್ರವೇಶ ಪ್ರಕ್ರಿಯೆಯನ್ನು ಸದ್ದಿಲ್ಲದೇ ಆರಂಭಿಸಿವೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಕರನ್ನು ಸಂಪರ್ಕಿಸಿ ಅಥವಾ ವಿದ್ಯಾರ್ಥಿಗಳ ಮೂಲಕ ಒತ್ತಡ ತಂದು ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಾಲಕರು ಆರೋಪಿಸಿದ್ದಾರೆ.

Advertisement

ಮುಂದಿನ ಶೈಕ್ಷಣಿಕ ವರ್ಷಕ್ಕೆ ಸೀಟು ಸಿಗದೇ ಇರಬಹುದು. ಹೀಗಾಗಿ ಸೀಟು ಕಾಯ್ದಿರಿಸಿಕೊಳ್ಳಿ, ಪೂರ್ತಿ ಶುಲ್ಕ ಪಾವತಿಸ ಬೇಕಾಗಿಲ್ಲ. ಮುಂಗಡವಾಗಿ ಆನ್‌ಲೈನ್‌ ಮೂಲಕ ಸ್ವಲ್ಪ ಪಾವತಿ ಮಾಡಿದರೆ ಸಾಕು ಎನ್ನು ವುದನ್ನು ಮಕ್ಕಳ ಹೆತ್ತವರಿಗೆ ತಿಳಿಸುವ ಯತ್ನವನ್ನು ಆಡಳಿತ ಮಂಡಳಿ ಮಾಡುತ್ತಿದೆ ಎಂಬ ಆರೋಪವಿದೆ.

ದಾಖಲಾತಿ ಸರಿಯಲ್ಲ
ವಿದ್ಯಾರ್ಥಿಗಳ ಹೆತ್ತವರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇನ್ನೂ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ನಡೆದಿಲ್ಲ. ಮೌಲ್ಯ ಮಾಪನ ಆಗಿಲ್ಲ ಮತ್ತು ಫಲಿತಾಂಶವೂ ಬಂದಿಲ್ಲ. ಹೀಗಾಗಿ ಹೆತ್ತವರು ಅವಸರ ಮಾಡಬಾರದು. ದಾಖಲಾತಿ ಮತ್ತು ಶುಲ್ಕಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದ ಅನಂತರವೇ ದಾಖಲಾತಿ ಆರಂಭವಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದರು.

ಪಿಯುಸಿ ಇಂಗ್ಲಿಷ್‌ ಪರೀಕ್ಷೆ ನಡೆದಿಲ್ಲ, ಮೌಲ್ಯಮಾಪನ ಆಗಿಲ್ಲ, ಫಲಿತಾಂಶ ಬಂದಿಲ್ಲ. ಹೀಗಾಗಿ ಪಾಲಕರು ಮುಂದಿನ ವರ್ಷದ ದಾಖಲಾತಿ ಅಥವಾ ಪ್ರವೇಶಾತಿ ಬಗ್ಗೆ ಹೆಚ್ಚು ಆತಂಕಕ್ಕೆ ಒಳಗಾಗುವುದು ಬೇಡ, ಇಲಾಖೆಯಿಂದ ಪ್ರವೇಶಾತಿ ಅಧಿಸೂಚನೆ ಹೊರಡಿಸಿದ ಅನಂತರ ಆಯಾ ವಿಶ್ವವಿದ್ಯಾನಿಲಯವು ದಾಖಲಾತಿ ಪ್ರಕ್ರಿಯೆಗೆ ಸುತ್ತೋಲೆ ಹೊರಡಿಸುತ್ತವೆ. ಆಗ ಮಕ್ಕಳನ್ನು ಯಾವ ಕಾಲೇಜಿಗೆ ಸೇರಬೇಕೋ ಅದಕ್ಕೆ ಸೇರಿಸಬಹುದು.
-ಪ್ರೊ|ಎಸ್‌.ಮಲ್ಲೇಶ್ವರಪ್ಪ,
ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ.

ಸೆಕೆಂಡರಿ ದತ್ತಾಂಶ ಆಧರಿಸಿ ಆಂತರಿಕ ಅಂಕ
ಬೆಂಗಳೂರು: ಎಂಜಿನಿಯರಿಂಗ್‌ ಅಂತಿಮ ವರ್ಷದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು)ದ್ವಿತೀಯ ದತ್ತಾಂಶದ ಆಧಾರದಲ್ಲಿ ಪ್ರಾಜೆಕ್ಟ್ ವರ್ಕ್‌, ಫೀಲ್ಡ್‌ ವರ್ಕ್‌ ಇತ್ಯಾದಿಗಳನ್ನು ಅಂತಿಮಗೊಳಿಸಲಿದೆ.

ಸೋಮವಾರ ಎಂಜಿನಿಯರಿಂಗ್‌ ಕಾಲೇಜುಗಳ ಚಟುವಟಿಕೆಗಳು ಕಾರ್ಯಾರಂಭವಾಗಲಿವೆ ಎಂದು ವಿಟಿಯು ತಿಳಿಸಿದೆ. ಆದರೆ ವಿದ್ಯಾರ್ಥಿಗಳು ಕಾಲೇಜಿಗೆ ಬರುವಂತಿಲ್ಲ. ಆದರೆ ಆನ್‌ಲೈನ್‌ ತರಗತಿಗೆ ಹಾಜರಾಗಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಾಜೆಕ್ಟ್ ವರ್ಕ್‌, ಲಾಬ್‌ ಕಾರ್ಯ, ಸಂಶೋಧನೆ, ಫೀಲ್ಡ್‌ ವರ್ಕ್‌, ಫ್ಯಾಬ್ರಿಕೇಷನ್‌ ವರ್ಕ್‌ ಇತ್ಯಾದಿಗಳನ್ನು ಸಂಶೋಧನ ಕಾರ್ಯಕ್ಕೆ ಬಳಸಿರುವ ಸೋರ್ಸ್‌ಗಳ ಮಾಹಿತಿಯಂತೆ ದ್ವಿತೀಯ ದತ್ತಾಂಶ(ಸೆಕೆಂಡರಿ ಡಾಟಾ)ದ ಆಧಾರದ ಮೇಲೆ ಅಂತಿಮಗೊಳಿಸಲಾಗುತ್ತದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸ್ಕೈಪ್‌ ಅಥವಾ ಬೇರೆ ಆನ್‌ಲೈನ್‌ ವೇದಿಕೆ ಮೂಲಕ ಪ್ರಾಜೆಕ್ಟ್ ವರದಿಯ ಮೌಲ್ಯಮಾಪನ ಮಾಡಿ ಆಂತರಿಕ ಅಂಕ ನೀಡಲಾಗುತ್ತದೆ ಎಂದು ವಿಟಿಯು ಕುಲಪತಿ ಡಾ| ಕರಿಸಿದ್ದಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next