Advertisement

ನಾ ಮನೆ ಬಿಟ್ಟು ಹೋಗ್ತೇನೆ!

01:21 PM Jan 16, 2018 | |

ಹೊರ ಜಗತ್ತು, ಸಿನಿಮಾದಲ್ಲಿ ತೋರಿಸುವಂತೆ ಮೂರು ಗಂಟೆಯ ಮತ್ತು ಫ‌ಟಾಫ‌ಟ್ ಬದಲಾವಣೆಯಂತದ್ದಲ್ಲ! ಕೋಪಕ್ಕೇ ಹೊರಡಿ ಅಥವಾ ನಿಮಗೊಂದು ಕೆಲಸವಿಲ್ಲ ಅಂತಾನೆ ಹೊರಡಿ ಆದರೆ ಹೊರಡುವ ಮುಂಚೆ ನಿಮ್ಮಲ್ಲಿ ಒಂದು ಪ್ಲಾನ್‌ ಇರಲಿ…

Advertisement

ನಾ ದೊಡ್ಡವನಾಗಿದೀನಿ ಅಂತ ತೋರಿಸಿಕೊಳ್ಳಲೋ, ಹರೆಯ ಬಯಸುವ ಭಯಂಕರ ಸ್ವಾತಂತ್ರ್ಯದ ಕಾರಣಕ್ಕೋ, ಅಪ್ಪ- ಅಮ್ಮಂದಿರ ಒಂದು ಹಿಡಿ ಹೆಚ್ಚಾದ ಬಿಗಿಯಿಂದಲೋ, ಇನ್ನಾರೋ ಮನೆ ಬಿಟ್ಟು ಹೋದವ ಹಾಕಿಕೊಂಡು ಬಂದ ಬಣ್ಣದ ಬಟ್ಟೆಯಿಂದಲೋ ಏನೋ, ಬೆಳೆದು ನಿಂತ ಮಗನೊಬ್ಬ ಹೆತ್ತವರಿಗೆ ಈ ತರಹದೊಂದು ಬೆದರಿಕೆ ಹಾಕುತ್ತಾನೆ. ಇಲ್ಲ, ಇದನ್ನು ಕೇವಲ ಬೆದರಿಕೆಯೆಂದು ಪರಿಗಣಿಸಲಾಗದು. ಏಕೆಂದರೆ, ಹೀಗೆ ಮನಸ್ಸಿನಲ್ಲಿ ಅಂದುಕೊಂಡು ಗಲಾಟೆ ಮಾಡಿಕೊಂಡ ಹುಡುಗರ ಪೈಕಿ ಹತ್ತರಲ್ಲಿ ಏಳು ಮಂದಿಯಾದರೂ ಮನೆಬಿಟ್ಟು ಹೊರಟು ಬಿಡುತ್ತಾರೆ.

“ನಾ ಮನೆ ಬಿಟ್ಟು ಹೋಗ್ತೇನೆ’ ಅನ್ನುವುದರಿಂದ ಹಿಡಿದು I’ll leave the home ಅನ್ನುವ ವರೆಗೆ ಮಾತುಗಳು ಬದಲಾಗಿರಬಹುದು. ಹಾಕುವ ಆವಾಜಿನ ಶೈಲಿ ಬದಲಾಗಿರಬಹುದು. ಯೌವ್ವನಕ್ಕೆ ಕಾಲಿಡುವ, ಮನೆಯು ತಂದೊಡ್ಡುವ ಒಂದಿಷ್ಟು ಗಜಿಬಿಜಿ ಮನೆಬಿಟ್ಟು ಹೋಗಬೇಕು ಎಂಬ ಮನೋಧೋರಣೆಯನ್ನುಂಟು ಮಾಡುತ್ತದೆ. ಆ ಸಮಯದಲ್ಲಿ ಹುಡುಗನೊಬ್ಬ ತೆಗೆದುಕೊಳ್ಳುವ ನಿರ್ಧಾರಗಳಿವೆಯಲ್ಲ, ಅವು ಅವನ ಬದುಕಿನ ಅತಿ ದೊಡ್ಡ ತಿರುವು ನೀಡುವಂಥವು. ಮನೆ ಬಿಟ್ಟು ಹೋದವರೆಲ್ಲರನ್ನೂ ಬದುಕು ಕೈ ಹಿಡಿದು ಸಾಕಿಲ್ಲ. ಹಾಗೆ ಮನೆಯಲ್ಲಿ ಉಳಿದು ಹೋದವರನ್ನು ಜತನ ಮಾಡಿಲ್ಲ. ಕಂಡಕ್ಟರ್‌ ಆದವರು ಎಲ್ಲರೂ ರಜನಿಕಾಂತ್‌ ಆಗಿಲ್ಲ.

“ಕೆಟ್ಟು ಪಟ್ಟಣ ಸೇರು’ ಅನ್ನುವ ಮಾತೊಂದಿದೆ. ನೀವು ಕೆಟ್ಟ ಮಾತ್ರಕ್ಕೆ ಸರಿಮಾಡಲು ಪಟ್ಟಣವೇನು ಔಷಧಿ ಹಿಡಿದುಕೊಂಡು ನಿಮಗಾಗಿ ಕಾದಿರುವುದಿಲ್ಲ. ಅದು ನಿಮ್ಮನ್ನು ಇನ್ನಷ್ಟು ಕೆಡಿಸಬಹುದು. ಕೆಡದೇನೆ ಪಟ್ಟಣ ಸೇರಿ ಗೆದ್ದವರೂ ಇದ್ದಾರೆ. ಕೆಟ್ಟು ಸೇರಿ ಗೆದ್ದಿದ್ದಾರೆ, ಸೋತಿದ್ದಾರೆ. ಕೆಡದೇನೆ ಮನೆಯಲ್ಲಿದ್ದವರೂ ಹಾಳಾಗಿದ್ದಾರೆ. ಒಂದು ನೆನಪಿರಲಿ, ಆ ಕ್ಷಣದ ನಿಮ್ಮ ಉದ್ದೇಶ ಇಷ್ಟೇ ಆಗಿರುತ್ತದೆ. ಅಲ್ಲಿಂದ ಆ ಪರಿಸರದಿಂದ ಓಡಿ ಹೋಗಬೇಕಷ್ಟೇ! ಹೀಗೆ ಹೋಗುವುದಕ್ಕೆ ನಿಮಗೆ ಒಂದು ಗುರಿ ಅಂತ ಇರುವುದಿಲ್ಲ. ಅಂಥ ಉದ್ದೇಶವೂ ಇಲ್ಲವೆಂದ ಮೇಲೆ ಬೆಚ್ಚನೆ ಮನೆಯಲ್ಲಿ ಉಳಿದರೂ ಉಪಯೋಗವಿಲ್ಲ ಬಿಡಿ. ಓದಿ, ಹೇಗೋ ಒಂದು ಕೆಲಸ ಅಂತ ಹಿಡಿದುಕೊಂಡು ದುಡಿಮೆಯ ಮುಖ ನೋಡಿಕೊಂಡವನಿಗೆ ಇಂಥ ಸಂದರ್ಭಗಳು ಬರುವುದು ಅಪರೂಪ. ಆದರೆ, ಕೆಲಸವೇ ಇಲ್ಲ ನನಗೆ ಅಂತ ಇರುವವನಿಗೆ ಇಂಥ ಯೋಚನೆಗಳೇ ಜಾಸ್ತಿ.

ಇವಿಷ್ಟನ್ನು ಯೋಚಿಸಿಕೊಳ್ಳಿ…
ಹೊರ ಜಗತ್ತು ಸಿನೆಮಾದಲ್ಲಿ ತೋರಿಸುವಂತೆ ಮೂರು ಗಂಟೆಯ ಮತ್ತು ಫ‌ಟಾಫ‌ಟ್‌ ಬದಲಾವಣೆಯಂತದ್ದಲ್ಲ!  ಕೋಪಕ್ಕೇ ಹೊರಡಿ ಅಥವಾ ನಿಮಗೊಂದು ಕೆಲಸವಿಲ್ಲ ಅಂತಾನೆ ಹೊರಡಿ ಆದರೆ ಹೊರಡುವ ಮುಂಚೆ ನಿಮ್ಮಲ್ಲಿ ಒಂದು ಪ್ಲಾನ್‌ ಇರಲಿ. ಹೋಟೆಲ…ನಲ್ಲಿ ಲೋಟ ತೊಳೆದು ಆದರೂ ಸರಿಯೇ ಬದುಕು ಕಟ್ಟಿಕೊಳ್ಳುತ್ತೇನೆ, ನಿಮ್ಮ ಹೆತ್ತವರಿಗೆ ನಿಮ್ಮ ಮಗ ಬರೀ ವೇಸ್ಟ್‌ ಫೆಲೊ ಅಲ್ಲ ಎಂಬುದನ್ನು ತೋರಿಸುತ್ತೇನೆ, ಒಂದೊಳ್ಳೆ ರೀತಿಯಲ್ಲಿ ಬಾಳನ್ನು ಫ‌ಳಗಿಸಿಕೊಳ್ಳುತ್ತೇನೆ ಎಂಬುದನ್ನು ತೋರಿಸುವ ಉಮೇದು ಇರಲಿ. ಆರಂಭದಲ್ಲಿ ಸಾಕಷ್ಟು ಸವಾಲುಗಳಿರುತ್ತವೆ, ಮೆಟ್ಟಿ ನಿಲ್ಲಿ. ಸಾಧ್ಯವಾಗುವುದಿಲ್ಲ ಅನ್ಸುತ್ತಾ ಎರಡೇ ದಿನಕ್ಕೆ ಮನೆಗೆ ಬಂದು ಬಿಡಿ. ಊರಲ್ಲಿ ಬೇಕಾದಷ್ಟು ಕೆಲಸಗಳಿವೆ. ಹುಡುಕಲು ನಿಮ್ಮ ಕಣ್ಣುಗಳು ತಯಾರಿರುವುದಿಲ್ಲ. ಆ ಕೆಲಸಗಳನ್ನು ಹುಡುಕಿಕೊಳ್ಳಿ. ಮನೆ ಬಿಟ್ಟು ಹೋದರೆ ಮಾತ್ರ ಉದ್ಧಾರವಾಗುವುದು ಎಂಬ ಬೊಗಳೆಯನ್ನು ನಂಬಬೇಡಿ. ತನ್ನ ಬದುಕನ್ನು ಚೆನ್ನಾಗಿ ಸಿಂಗರಿಸಿಕೊಳ್ಳುವ ತುಡಿತ ಇರುವ ಯಾರಿಗಾದರೂ ಸ್ಥಳ ಮುಖ್ಯವಾಗುವುದಿಲ್ಲ. ಅವಕಾಶಗಳು ಯಾವತ್ತೂ ಎಲ್ಲೆಡೆ ಹರಡಿಕೊಂಡಿರುತ್ತವೆ. ಬಳಸಿಕೊಳ್ಳುವವನಿಗೆ ಮಾತ್ರ ಕಾಣಿಸುತ್ತವೆ.

Advertisement

ಆ ಕ್ಷಣದ ಪರಿಸ್ಥಿತಿಯೇ ಅಂಪೈರ್‌!
ಮನೆ ಬಿಟ್ಟು ಹೋಗಿ ಅಂತ ಹೇಳಲು ನಾ ನಿಂತಿಲ್ಲ, ಮನೆಯಲ್ಲೇ ಉಳಿದಿಕೊಳ್ಳಿ ಅಂತ ಕೈ ಹಿಡಿದು ಕೋರಿಕೊಳ್ಳುತ್ತಿಲ್ಲ. ಮೊದಲೇ ಹೇಳಿದಂತೆ, ಯಾವುದೋ ಧಾವಂತಕ್ಕೆ ಬಿದ್ದು ಈ ನಿರ್ಧಾರ ಸಲ್ಲ ಅನ್ನುವುದಷ್ಟೇ ನನ್ನ ಕಾಳಜಿ. ನಿಮ್ಮ ಬದುಕಿನ ಗುರಿಯ ಬೆನ್ನೇರಿ ಹೊರಟಾಗ ಬರುವ ತಿರುವುಗಳಿಗೆ ಅನುಸಾರವಾಗಿ ಮನೆ ಬಿಡುವುದೋ, ಅಲ್ಲಿಯೇ ಇರುವುದೋ ಎಂಬುದನ್ನು ಆ ಕ್ಷಣದ ಪರಿಸ್ಥಿತಿ ನಿರ್ಧರಿಸುತ್ತದೆ. ಅದನ್ನೇ ಬಳಸಿಕೊಳ್ಳಿ. ಮುಂದಿನ ಬದುಕನ್ನು ಗೆಲುವು ಅಥವಾ ಸೋಲು ನಿರ್ಧರಿಸುತ್ತದೆ. ಅದನ್ನು ಅಪ್ಪಿಕೊಳ್ಳಿ ಅದೇ ನಿಮ್ಮನ್ನು ನಡೆಸುತ್ತದೆ.

ಸದಾಶಿವ್‌ ಸೊರಟೂರು 

Advertisement

Udayavani is now on Telegram. Click here to join our channel and stay updated with the latest news.

Next