ಒಂದು ಒಳ್ಳೆಯ ಸಿನಿಮಾಕ್ಕೆ ಸಾವಿರ ವರ್ಷ ವಯಸ್ಸು ಎನ್ನುವುದಕ್ಕಿಂತಲೂ ಅದು ಅಮರ ಎನ್ನುವುದೇ ಸೂಕ್ತ. ಇಟಲಿಯನ್ ಭಾಷೆಯ ಇಲ್ ಪೋಸ್ಟಿನೋ ಚಿತ್ರ ಅಂಥ ಸಾಲಿಗೆ ಸೇರುವಂಥದ್ದು.
ಕಾವ್ಯ, ಸಹೃದಯಿ, ಕವಿ ಎಂದೆಲ್ಲಾ ಸಾಗುವ ಚಿತ್ರದುದ್ದಕ್ಕೂ ತಂಗಾಳಿ ತೀಡಿ ಹೋದ ಅನುಭವ. ಸಾಮಾನ್ಯವಾಗಿ ಸಾಹಿತ್ಯ ಚರ್ಚೆಗಳಲ್ಲಿ ತೊಡಗಿಕೊಳ್ಳುವ ಸಂಗತಿಯೆಲ್ಲಾ ಇಲ್ಲಿ ಉಪಮೆಗಳಾಗಿ ತೆರೆಯ ಮೇಲೆ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಒಂದು ಕಾವ್ಯ-ಕವಿ ಹಾಗೂ ಸಹೃದಯಿ ನಡುವಿನ ಸಂಬಂಧ ಎಷ್ಟು ಮಧುರವಾದುದು- ಅಮರವಾದುದು ಎಂಬುದು ಈ ಚಿತ್ರದಿಂದಲೇ ಅರ್ಥವಾಗುವಂಥದ್ದು.
ಇದು ಚಿಲಿಯ ಪ್ರಸಿದ್ಧ ಕವಿ ಪ್ಯಾಬ್ಲೋ ನೆರೂಡ ಮತ್ತು ಒಬ್ಬ ಯುವಕನ ನಡುವಿನ ಕಥೆ. 1950ರ ಸಮಯ. ನೆರೂಡ ಇಟಲಿಯ ಒಂದು ಸಣ್ಣ ದ್ವೀಪದಲ್ಲಿ ಹೋಗಿ ನೆಲೆಸುತ್ತಾನೆ. ಅವನಾಯಿತು, ಅವನ ಕಾವ್ಯವಾಯಿತು. ಅದಷ್ಟೆ ಅವನ ಪ್ರಪಂಚ. ಆದರೆ, ಅವನ ಅಭಿಮಾನಿಗಳು ನಿತ್ಯವೂ ಬರೆದು ಕಳುಹಿಸುವ ನೂರಾರು ಪತ್ರಗಳನ್ನು ಓದುವುದು ಅವನ ಮುಖ್ಯವಾದ ಕೆಲಸ.
ಹೀಗಿರುವಾಗ ಸ್ಥಳೀಯ ಒಬ್ಬ ಮೀನುಗಾರನ ಮಗ ಮಾರಿಯೊ ತನ್ನ ಮೀನುಗಾರಿಕೆಗೆ ಶರಣು ಹೇಳಿ, ಬೇರೆ ಏನಾದರೂ ಕೆಲಸ ಮಾಡಬೇಕೆಂದು ಬಯಸುತ್ತಿರುತ್ತಾನೆ. ಆ ಹೊತ್ತಿಗೆ ಗ್ರಾಮೀಣ ಅಂಚೆಯಣ್ಣನಾಗುವ ಕೆಲಸ ಸಿಗುತ್ತದೆ. ಅದೂ ತಾತ್ಕಾಲಿಕ ನೆಲೆಯಲ್ಲಿ. ಸುಮಾರು ಎಂಟು ಹತ್ತು ಕಿ.ಮೀ ಸೈಕಲ್‌ನಲ್ಲಿ ಗುಡ್ಡ ಏರಿ ನೆರೂಡನಿಗೆ ಅವನ ಅಭಿಮಾನಿಗಳ ಪತ್ರಗಳನ್ನು ವಿತರಿಸುವುದು ಬಹುಮುಖ್ಯವಾದ ಕೆಲಸ.
ಹೀಗೆ ಹಂಚಿಕೆ ಮಾಡುತ್ತಿರುವಾಗ ಅವನು ಯಾರು? ಅವನ ರಾಜಕೀಯ ಇತಿಹಾಸವೇನು? ಎಲ್ಲವೂ ತಿಳಿಯುತ್ತದೆ. ಈ ಮಧ್ಯೆ ಒಂದು ಹುಡುಗಿಯನ್ನು ಪ್ರೀತಿಸುವ ಮಾರಿಯೊ ಅವಳಿಗೆ ತನ° ಪ್ರೇಮ ನಿವೇದನೆಗಾಗಿ ಪತ್ರ ಬರೆಯುವಾಗಲೆಲ್ಲಾ ವಿಶಿಷ್ಟ ಉಪಮೆಗಳನ್ನು ಬಳಸಲು ನೆರೂಡನ ಸಹಾಯವನ್ನು ಪಡೆಯುತ್ತಾನೆ. ಅದೂ ನೇರವಾಗಿಯೇ. ಯಾವುದೋ ಪ್ರಸಂಗವೊಂದನ್ನು ಉಲ್ಲೇಖೀಸಿ ಇದನ್ನು ನಿಮ್ಮ ಕವಿñಯಲ್ಲಿ ಹೇಗೆ ಹೇಳುತ್ತೀರಿ ಎಂದು ಕೇಳಿ ಅಲ್ಲಿ ಬರುವ ಉಪಮೆಗಳನ್ನು ತನ್ನ ಪತ್ರಗಳಲ್ಲಿ ಬಳಸತೊಡಗುತ್ತಾನೆ.
ಹೀಗೆ ನೆರೂಡನ ಪ್ರಭಾವಕ್ಕೆ ಒಳಗಾಗುವ ಮಾರಿಯೊನ ಹೃದಯದಲ್ಲಿ ನಿಧಾನವಾಗಿ ಕವಿತೆಯ ಬಗೆಗಿನ ಆಸಕ್ತಿ ಹೆಚ್ಚುತ್ತದೆ. ಇಡೀ ಚಿತ್ರದುದ್ದಕ್ಕೂ ಮೆಲು ದನಿಯಲ್ಲೇ ಕವಿತೆ ಎಂದರೇನು? ಸಹೃದಯಿ ಎಂದರೆ ಯಾರು? ಹೀಗೆ ಕಾವ್ಯ ಮೀಮಾಂಸೆಯ ಹಲವು ಸಂಗತಿಗಳು ಚರ್ಚಿತವಾಗುತ್ತವೆ. ಕೊನೆಯಲ್ಲಿ ದುಃಖ ಖಾಂತ್ಯದೊಂದಿಗೆ ಸಿನಿಮಾ ಪೂರ್ಣಗೊಳ್ಳುತ್ತದೆ.
ಮಿಚೆಲ್ ರಾಡ್‌ಫೋರ್ಡ್ ನಿರ್ದೇಶನದ ಇಡೀ ಸಿನಿಮಾ ಮುಖ್ಯವಾಗುವುದು ಕವಿತೆಯನ್ನು ಅರ್ಥ ಮಾಡಿಕೊಳ್ಳುವ ನೆಲೆಯಲ್ಲಿ. ಸಹೃದಯಿ ಬಗೆಗಿನ ವ್ಯಾಖ್ಯಾನದಲ್ಲಿ. ಕಾವ್ಯ ಪ್ರೇಮವನ್ನು ಬೆಳೆಸಿಕೊಳ್ಳುವ ಕಥಾನಕದಲ್ಲಿ. 1994 ರ ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು (ಒರಿಜಿನಲ್ ಡ್ರಾಮೆಟಿಕ್ ಸ್ಕೋರ್ ವಿಭಾಗ). ಜತೆಗೆ ಅತ್ಯುತ್ತಮ ನಿರ್ದೇಶನಕ್ಕೆ ಬಾಫ್ಟಾ ಪ್ರಶಸ್ತಿಯನ್ನೂ ಗಳಿಸಿತ್ತು.
ಮಿನಿಸ್ವರ