ಪಟ್ನಾ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕೈದಿ ಉನ್ನತ ವಿದ್ಯಾಭ್ಯಾಸದ ಆಸೆಯೊಂದಿಗೆ ಐಐಟಿ ರೂರ್ಕಿಯ ಸ್ನಾತಕೋತ್ತರ ಪದವಿಯ “ಜಂಟಿ ಪ್ರವೇಶ ಪರೀಕ್ಷೆ'(ಜೆಎಎಂ)ಯನ್ನು ಬರೆದು, ಅದರಲ್ಲಿ ರ್‍ಯಾಂಕ್ ಪಡೆದುಕೊಂಡಿದ್ದಾನೆ.
ಇದನ್ನೂ ಓದಿ:ನ್ಯಾಯಾಲಯಕ್ಕೆ ಹಾಜರಾಗದ 7 ಮಂದಿ ಎಸ್.ಡಿ.ಪಿ.ಐ ಕಾರ್ಯಕರ್ತರು ಬಂಧನ
23 ವರ್ಷದ ಸೂರಜ್ ಕುಮಾರ್ ಈ ಸಾಧನೆ ಮಾಡಿರುವವ. ಐಐಟಿಯ ಆಲ್ ಇಂಡಿಯಾ 54ನೇ Rank ಪಡೆದಿದ್ದು, ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸು ನನಸು ಮಾಡಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಆಶಾಭಾವ ಹೊಂದಿರುವುದಾಗಿ ಸೂರಜ್ ತಿಳಿಸಿದ್ದಾನೆ.
ಕಳೆದ ವರ್ಷ ಏಪ್ರಿಲ್ ನಿಂದ ಸೂರಜ್ ಕುಮಾರ್ ಯಾದವ್ ತನ್ನ ಹಿರಿಯ ಸಹೋದರ ಬಿರೇಂದ್ರ ಜೊತೆ ಬಿಹಾರದ ನವಾದಾ ಉಪ ಜೈಲಿನಲ್ಲಿದ್ದಾನೆ. ಈತನ ಕಲಿಕೆಗೆ ನವಾದಾ ಜೈಲು ಸೂಪರಿಟೆಂಡೆಂಟ್ ಅಭಿಷೇಕ್ ಪಾಂಡೆ ಅಗತ್ಯವಿರುವ ಪುಸ್ತಕಗಳನ್ನು ಒದಗಿಸಿಕೊಟ್ಟು ಪರೀಕ್ಷೆ ಬರೆಯಲು ನೆರವು ನೀಡಿರುವುದಾಗಿ ವರದಿ ವಿವರಿಸಿದೆ.
ರಾಜಸ್ಥಾನದ ಕೋಟಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆತ, ಅಲ್ಲಿನ ಮೊಸ್ಮಾ ಗ್ರಾಮದಲ್ಲಿ 2021ರ ಮಾರ್ಚ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅದೇ ಹಿನ್ನೆಲೆ ಆತ 2021ರ ಎಪ್ರಿಲ್ ನಿಂದಲೇ ಬಿಹಾರದ ನವಾದಾ ವಿಭಾಗೀಯ ಜೈಲಿನಲ್ಲಿದ್ದಾನೆ. ಅಲ್ಲಿದ್ದುಕೊಂಡೇ ಪರೀಕ್ಷೆಗೆ ತಯಾರಿ ನಡೆಸಿದ್ದಾನೆ. 2022ರ ಫೆ.13ರಂದು ಪರೀಕ್ಷೆ ನಡೆದಿದ್ದು, ಅದರಲ್ಲಿ ಆತ 100ಕ್ಕೆ 50.33 ಅಂಕ ಹಾಗೂ 54ನೇ ರ್‍ಯಾಂಕ್ ಪಡೆದಿದ್ದಾನೆ.
ಜೈಲಿನಲ್ಲಿ ಕೈದಿಯಾಗಿರುವ ಸೂರಜ್ ಕುಮಾರ್ ಐಐಟಿ ಪ್ರವೇಶ ಪರೀಕ್ಷೆಯಲ್ಲಿ Rank ಪಡೆದಿರುವುದು ಜೀವನಕ್ಕೊಂದು ತಿರುವು ಸಿಕ್ಕಂತಾಗಿದೆ. ತಾನು ಕೊಲೆ ಪ್ರಕರಣದಲ್ಲಿ ಶೀಘ್ರವೇ ಖುಲಾಸೆಗೊಂಡು, ಬಿಡುಗಡೆಯಾಗಿ ಐಐಟಿ ರೂರ್ಕಿಗೆ ಸೇರ್ಪಡೆಗೊಳ್ಳುವ ಭರವಸೆ ಸೂರಜ್ ಕುಮಾರನದ್ದಾಗಿದೆ ಎಂದು ವರದಿ ತಿಳಿಸಿದೆ.