Advertisement

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

04:25 PM Nov 27, 2024 | Team Udayavani |

ಮುಂಬೈ: ಬಾಂಬೆ ಐಐಟಿ ವಿದ್ಯಾರ್ಥಿಗೆ ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್‌ ಇಂಡಿಯಾದ ಉದ್ಯೋಗಿ ಎಂದು ನಂಬಿಸಿ ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ಬರೋಬ್ಬರಿ 7.29 ಲಕ್ಷ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

2024ರ ಜುಲೈ ತಿಂಗಳಿನಲ್ಲಿ ಬಾಂಬೆ ಐಐಟಿ ವಿದ್ಯಾರ್ಥಿ(25ವರ್ಷ) ಅಪರಿಚಿತ ನಂಬರಿನ ಮೊಬೈಲ್‌ ಕರೆಯೊಂದನ್ನು ಸ್ವೀಕರಿಸಿದ್ದ. ಕರೆ ಮಾಡಿದಾತ ತಾನು ಟ್ರಾಯ್‌ (TRAI) ಅಧಿಕಾರಿ ಎಂದು ಹೇಳಿ, ಕಾನೂನು ಬಾಹಿರ ಚಟುವಟಿಕೆ ನಡೆಸಿದ ಆರೋಪದಡಿ ನಿನ್ನ ಮೊಬೈಲ್‌ ಸಂಖ್ಯೆ ಮೇಲೆ 17 ದೂರುಗಳು ದಾಖಲಾಗಿದೆ ಎಂದು ತಿಳಿಸಿರುವುದಾಗಿ ಪೊವೈ ಪೊಲೀಸ್‌ ಠಾಣೆ ಅಧಿಕಾರಿಗಳ ವಿವರಣೆ.

ನಂತರ ಮೊಬೈಲ್‌ ಕರೆ ಮಾಡಿದಾತ ನಿನ್ನ ಮೇಲೆ ಪ್ರಕರಣ ದಾಖಲಾಗಿದ್ದು ನಿನ್ನ ಮೊಬೈಲ್‌ ನಂಬರ್‌ ಅನ್ನು ಡಿಆಕ್ಟಿವೇಶನ್‌ ಮಾಡದಂತೆ ತಡೆಯಬೇಕಾದರೆ ಪೊಲೀಸರ ನೋ ಅಬ್ಜೆಕ್ಷನ್‌ (No Objection certificate) ಅಗತ್ಯವಿದೆ ಎಂದು ಹೇಳಿ, ನೀನೀಗ ಸೈಬರ್‌ ಕ್ರೈಂ ಬ್ರ್ಯಾಂಚ್‌ ಪೊಲೀಸರ ಜತೆ ಮಾತನಾಡು ಎಂದು ಕರೆ ಟ್ರಾನ್ಸ್‌ ಫರ್‌ ಮಾಡಿರುವುದಾಗಿ ವರದಿ ವಿವರಿಸಿದೆ.

ಕಾಲ್‌ ಡೈವರ್ಟ್‌ ಮಾಡಿದ ನಂತರ ವಾಟ್ಸಪ್‌ ವಿಡಿಯೋ ಕಾಲ್‌ ನಲ್ಲಿ ಪೊಲೀಸ್‌ ಆಫೀಸರ್‌ ಡ್ರೆಸ್‌ ನಲ್ಲಿ ವ್ಯಕ್ತಿಯೊಬ್ಬ ಮಾತನಾಡಿ, ಆಧಾರ್‌ ನಂಬರ್‌ ಕೊಡುವಂತೆ ತಿಳಿಸಿದ್ದ. ಕೊನೆಗೆ ಬಲವಂತವಾಗಿ ವಿದ್ಯಾರ್ಥಿಯಿಂದ ಯುಪಿಐ(UPI) ಮೂಲಕ 29,500 ರೂಪಾಯಿಯನ್ನು ಟ್ರಾನ್ಸ್‌ ಫರ್‌ ಮಾಡಿಸಿಕೊಂಡಿದ್ದ.

ಹಣ ವರ್ಗಾಯಿಸಿಕೊಂಡ ಬಳಿಕ ವಿದ್ಯಾರ್ಥಿಗೆ ಬೆದರಿಕೆಯೊಡ್ಡಿ, ನಿನ್ನ ಡಿಜಿಟಲ್‌ ಅರೆಸ್ಟ್‌ ನಲ್ಲಿ ಇರಿಸಿದ್ದು, ಯಾವುದೇ ವ್ಯಕ್ತಿಯನ್ನು ಸಂಪರ್ಕಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.

Advertisement

ಮರುದಿನ ವಿದ್ಯಾರ್ಥಿಗೆ ಮತ್ತೆ ಕರೆ ಮಾಡಿ, ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ವಿದ್ಯಾರ್ಥಿ ತನ್ನ ಬ್ಯಾಂಕ್‌ ಖಾತೆಯ ವಿವರವನ್ನು ನೀಡಿದ್ದು, ಬರೋಬ್ಬರಿ 7 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡ ನಂತರ ಇನ್ನು ನಿನಗೆ ಬಂಧನದ ಭಯ ಎದುರಿಸಬೇಕಾಗಿಲ್ಲ ಎಂದು ತಿಳಿಸಿದ್ದ.

ಈ ಘಟನೆ ನಡೆದ ನಂತರ ವಿದ್ಯಾರ್ಥಿ ಡಿಜಿಟಲ್‌ ಅರೆಸ್ಟ್‌ ಅಂದರೆ ಏನು ಎಂಬ ಬಗ್ಗೆ ಗೂಗಲ್‌ ಸರ್ಚ್‌ ಮಾಡಿದಾಗ ವಿಷಯ ತಿಳಿದು ತಾನು ಮೋಸ ಹೋಗಿರುವುದು ಅರಿವಾಗಿದೆ. ಬಳಿಕ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next