ಮಹಾರಾಷ್ಟ್ರ: ಕಾಲೇಜಿನ ವಾರ್ಷಿಕ ಸಮಾರಂಭವೊಂದರಲ್ಲಿ ವಿದ್ಯಾರ್ಥಿಗಳು ಮಾಡಿದ ನಾಟಕದಲ್ಲಿ ರಾಮ ಮತ್ತು ಸೀತೆಯನ್ನು ಅವಮಾನಿಸಿರುವ ಹಿನ್ನೆಲೆಯಲ್ಲಿ ನಾಟಕದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಐಐಟಿ ಬಾಂಬೇ ಬರೋಬ್ಬರಿ 1.2 ಲಕ್ಷ ರೂ ದಂಡ ವಿಧಿಸಿದೆ.
ಮಾರ್ಚ್ 31 ರಂದು ಐಐಟಿ ಬಾಂಬೇಯ ವಾರ್ಷಿಕ ಸಮಾರಂಭ ನಡೆದಿತ್ತು ಈ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ‘ರಾಹೋವನ’ ಎಂಬ ಹೆಸರಿನ ನಾಟಕವನ್ನು ಪ್ರದರ್ಶಿಸಿದ್ದರು.
ರಾಮಾಯಣವನ್ನು ಆಧರಿಸಿದ ಈ ನಾಟಕಕ್ಕೆ ವಿದ್ಯಾರ್ಥಿಗಳ ಒಂದು ವರ್ಗದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ನಾಟಕವು ಹಿಂದೂ ಧರ್ಮವನ್ನು ಅವಮಾನಿಸುತ್ತದೆ ಮತ್ತು ರಾಮ ಮತ್ತು ಸೀತೆಗೆ ಅಗೌರವವಾಗಿದೆ ಎಂದು ಆರೋಪಿಸಲಾಗಿತ್ತು.
ವಿವಾದಕ್ಕೆ ಸಂಬಂಧಿಸಿ ಮೇ 8ರಂದು ನಾಟಕಕ್ಕೆ ಸಂಬಂಧಿಸಿದ ದೂರುಗಳಿಗೆ ಸಂಬಂಧಿಸಿದಂತೆ ಶಿಸ್ತು ಸಮಿತಿ ಸಭೆ ಕರೆಯಲಾಗಿತ್ತು ಅಲ್ಲದೆ ನಾಟಕಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳನ್ನು ಸಹ ಸಭೆಗೆ ಆಹ್ವಾನಿಸಲಾಯಿತು. ಇದಾದ ಬಳಿಕ ಜೂನ್ 4 ರಂದು ಐಐಟಿ ಬಾಂಬೆ ವಿದ್ಯಾರ್ಥಿಗಳಿಗೆ ದಂಡ ಕಟ್ಟುವಂತೆ ನೋಟಿಸ್ ನೀಡಲಾಗಿದೆ.
ವರದಿಗಳ ಪ್ರಕಾರ, ನಾಟಕದಲ್ಲಿ ಪಾಲ್ಗೊಂಡಿದ್ದ ಪದವಿ ವಿದ್ಯಾರ್ಥಿಗಳಿಗೆ ತಲಾ 1.2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ 40 ಸಾವಿರ ದಂಡ ವಿಧಿಸಲಾಗಿದ್ದು ಜೊತೆಗೆ ನಾಟಕದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನೂ ಕಡಿತಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.