ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಈಗ ದೇಶದಲ್ಲೇ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಹೀಗೆ ಅವರು ಅತಿ ಶ್ರೀಮಂತ ವ್ಯಕ್ತಿಯ ಪಟ್ಟವನ್ನು ಹೊಂದುತ್ತಿರುವುದು ಸತತ 8ನೇ ಬಾರಿಯಾಗಿದೆ.
3,80,700 ಕೋಟಿ ರೂ. ಆಸ್ತಿಯನ್ನು ಅವರು ಹೊಂದಿರುವುದಾಗಿ ಸಮೀಕ್ಷೆ ನಡೆಸಿದ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ಹೇಳಿದೆ.
ಎರಡನೇ ಸ್ಥಾನವನ್ನು ಲಂಡನ್ ಮೂಲದ ಎಸ್‌ಪಿ ಹಿಂದುಜಾ ಮತ್ತು ಕುಟುಂಬ ಹೊಂದಿದೆ. ಇವರ ಆಸ್ತಿ 1,86,500 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಪಡೆದಿದ್ದಾರೆ. ಅವರ ಆಸ್ತಿ ಮೊತ್ತ 1,17,100 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ಆರ್ಸೆಲರ್ ಮಿತ್ತಲ್ ಸಿಇಒ (1,07,300 ಕೋಟಿ ರೂ.) ಮತ್ತು 5ನೇ ಸ್ಥಾನವನ್ನು ಅದಾನಿ ಸಮೂಹದ ಗೌತಮ್ ಅದಾನಿ (94,500 ರೂ.) ಹೊಂದಿದ್ದಾರೆ.
ಸಮೀಕ್ಷೆ ಪ್ರಕಾರ 1 ಸಾವಿರ ಕೋಟಿ ರೂ.ಗಳಿಗೆ ಮಿಕ್ಕಿ ಆಸ್ತಿ ಹೊಂದಿದವರ ಸಂಖ್ಯೆ 953ಕ್ಕೇರಿದೆ. ಈ ಹಿಂದಿನ ವರ್ಷ ಇವರ ಸಂಖ್ಯೆ 831 ಇತ್ತು.
ಪಟ್ಟಿಯಲ್ಲಿ ಟಾಪ್ 25ರ ಪಟ್ಟಿಯಲ್ಲಿರುವವ ಒಟ್ಟು ಆಸ್ತಿಯ ಪ್ರಮಾಣ ಭಾರತದ ಜಿಡಿಪಿಯ ಶೇ.10ರಷ್ಟು ಆಗುತ್ತದೆ. ಹಾಗೆಯೇ 953 ಮಂದಿಯ ಒಟ್ಟು ಆಸ್ತಿಯ ಪ್ರಮಾಣ ಜಿಡಿಪಿ ಮೊತ್ತದ ಶೇ.27ರಷ್ಟು ಆಗುತ್ತದೆ.