Advertisement

ಐಜಿಪಿ ಅಲೋಕಕುಮಾರ ದಿಢೀರ್‌ ವರ್ಗ

11:14 AM Jan 01, 2018 | |

ಕಲಬುರಗಿ: ರೌಡಿಗಳಿಗೆ ಸಿಂಹಸ್ವಪ್ನವಾಗಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಶ್ರಮಿಸುತ್ತಿದ್ದ ಹಿರಿಯ ಐಪಿಎಸ್‌ ಅಧಿಕಾರಿ, ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಅವರನ್ನು ಸರ್ಕಾರ ದಿಢೀರ್‌ ವರ್ಗಾವಣೆಗೊಳಿಸಿದೆ. ಇನ್ನು 15 ದಿನ ಕಳೆದರೆ ಅಂದರೆ 2018ರ ಜನವರಿ 16ರಂದು ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷವಾಗುತ್ತಿತ್ತು. ಆದರೆ ವರ್ಷದೊಳಗೆ ವರ್ಗಾವಣೆ ಆಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಈ ಹಿಂದೆ ಕಲಬುರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಲೋಕಕುಮಾರ 2017ರ ಜನವರಿ ಎರಡನೇ ವಾರದಲ್ಲಿ ಕಲಬುರಗಿ ಈಶಾನ್ಯ ವಲಯದ ಐಜಿಪಿಯಾಗಿ ಬಂದ ನಂತರ ಅಪರಾಧ ಪ್ರಕರಣಗಳಿಗ ಕಡಿವಾಣ ಹಾಕಿದ್ದಾರೆ. ಪ್ರಮುಖವಾಗಿ ಕುಖ್ಯಾತ ರೌಡಿಗಳನ್ನು ಎನ್‌ಕೌಂಟರ್‌, ಶೂಟೌಟ್‌ ಮೂಲಕ ಹತ್ತಿಕ್ಕಿದ್ದರೆ ಮರಿ ರೌಡಿಗಳ ಹೆಡೆ ಮುರಿಕಟ್ಟಿ ಅಪರಾಧ ಲೋಕಕ್ಕೆ ಬಿಸಿ ಮುಟ್ಟಿಸಿದ್ದರು.

ಕೋಕಾ ಕಾಯ್ದೆ ಅಸ್ತ್ರ ಬಳಕೆ: ರೌಡಿಗಳಿಗೆ ತಕ್ಕ ಶಾಸ್ತಿ ಕಲಿಸಲು ಅಲೋಕಕುಮಾರ ಅವರು ಕುಖ್ಯಾತ ರೌಡಿ ಮಾರ್ಕೆಟ್‌ ಸತೀಶ ಸೇರಿ ಐವರು ರೌಡಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ (ಕೋಕಾ) ಕಾಯ್ದೆ ಶಿಫಾರಸ್ಸು ಮಾಡಿರುವುದರಿಂದ ರೌಡಿಗಳು ತಮ್ಮ ಅಪರಾಧ ಕೃತ್ಯಗಳನ್ನು ನಿಲ್ಲಿಸಿದ್ದಲ್ಲದೇ ಕಲಬುರಗಿಯಿಂದಲೇ ಕಾಲ್ಕಿತ್ತಿದ್ದಾರೆ. ಹೀಗಾಗಿ ಸರಗಳ್ಳತನ, ಡರೋಡೆ, ಅಪಹರಣಗಳಿಗೆ ತಡೆ ಹಾಕಿದಂತಾಗಿದೆ. ಯಾವುದೇ ಒಂದು ಅಪರಾಧ ಪ್ರಕರಣ ನಡೆದಿದ್ದರೆ ತಕ್ಷಣವೇ ಸ್ಥಳಕ್ಕೆ ಹೋಗಿ ಅದರ ಜಾಡನ್ನು ಹಿಡಿದು ಸೂಕ್ತ ತನಿಖೆಗೆ ನಿರ್ದೇಶನ ನೀಡುತ್ತಿದ್ದರು. ಹೀಗಾಗಿ ತಕ್ಷಣವೇ ಅಪರಾಧಿಗಳು ಸಿಕ್ಕಿ ಬೀಳುತ್ತಿದ್ದರು.

ಬಂದೂಕು ಜಾಲ ಬಯಲಿಗೆ: ಭೀಮಾ ತೀರದಲ್ಲಿ ಆಟಿಕೆ ಸಾಮಾನುಗಳಾಂತಾದ ಅಕ್ರಮ ಬಂದೂಕು ಜಾಲವನ್ನು ಬಯಲಿಗೆಳೆಯಲು ಸೂಕ್ತ ಕಾರ್ಯಾಚರಣೆ ಕೈಗೊಂಡು 35ಕ್ಕೂ ಹೆಚ್ಚು ನಾಡ ಪಿಸ್ತೂಲುಗಳನ್ನು ಜಪ್ತಿ ಮಾಡಿಕೊಂಡು 20ಕ್ಕೂ ಜನರನ್ನು ಬಂಧಿಸಿ ಜಾಲವನ್ನು ಬಯಲಿಗೆಳೆದರು. ಅಪರಾಧವನ್ನು ಬುಡ ಸಮೇತ ಕಿತ್ತು ಹಾಕಲು ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೆ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡ ತೆರಳಿದೆ. ಅಕ್ರಮ ಬಂದೂಕು ಸದ್ದು ಕೇಳಿಸದಂತೆ ಕ್ರಮ ಕೈಗೊಳ್ಳಲು ಸೂಕ್ತ ನೀಲನಕ್ಷೆಯನ್ನು ರೂಪಿಸಿದ್ದರು ಐಜಿಪಿ ಅಲೋಕಕುಮಾರ ಅವರು.

ರಸ್ತೆ ಸಂಚಾರ ಸುಧಾರಣೆಗೆ ಕ್ರಮ: ಮಹಾನಗರದಲ್ಲಿ ರಸ್ತೆ ಸುಧಾರಣೆಗೆ ಅಮೂಲಾಗ್ರ ಬದಲಾವಣೆಗೆ ಸ್ವತಃ ನಿಂತು ಹದಗೆಟ್ಟ ರಸ್ತೆ ಸಂಚಾರಕ್ಕೆ ಹೊಸ ಸ್ವರೂಪ ನೀಡಿದ್ದಾರೆ. ಹೆಲ್ಮೆಟ್‌ ಕಡ್ಡಾಯಗೊಳಿಸಿದರು. ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ಕೈಗೊಂಡು ಒಂದೂವರೆ ತಿಂಗಳಲ್ಲಿ ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆ ಸೇರಿ ಈಶಾನ್ಯ ವಲಯ ವ್ಯಾಪ್ತಿಯೊಳಗೆ 50 ಲಕ್ಷ ರೂ. ದಂಡ ಸಂಗ್ರಹಿಸಿ ಪ್ರಮುಖವಾಗಿ ಬೈಕ್‌ ಸವಾರರಿಗೆ ಬಿಸಿ ಮುಟ್ಟಿಸಿದ್ದರು.

Advertisement

ವಿಧಾನಸಭೆ ಚುನಾವಣೆ ಮುಗಿಯುವವರೆಗೂ ವರ್ಗಾವಣೆ ಆಗುವುದಿಲ್ಲ ಎಂದು ವರದಿಯಾಗಿತ್ತು. ಆದರೆ ಈಗ ದಿಢೀರನೇ ವರ್ಗಾವಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆದೇಶ ಕೈ ಸೇರಿಲ
 ವರ್ಗಾವಣೆ ಆಗಿರುವ ವಿಷಯ ಮಾಧ್ಯಮಗಳಿಂದ ಗೊತ್ತಾಗಿದೆ. ಈ ಕುರಿತು ಆದೇಶ ಕೈ ಸೇರಿಲ್ಲ. ಕಲಬುರಗಿ ಬರುವಾಗಲೂ ಈಗ ಇಲ್ಲಿಂದ ತೆಗೆದು ಹಾಕುವಾಗಲು ತಮ್ಮನ್ನು ಇಲಾಖೆ ಹಿರಿಯ ಅಧಿಕಾರಿಗಳು ಅಭಿಪ್ರಾಯ ಕೇಳಿಲ್ಲ. ಆದರೆ ಬೆಂಗಳೂರಿಗೆ ಹಾಕಿ ಎಂದು ಅನಿಸಿಕೆ ವ್ಯಕ್ತಪಡಿಸಿದ್ದೆ. ಆದರೆ ಈಗ ಬೆಳಗಾವಿಗೆ ವರ್ಗಾಯಿಸಲಾಗಿದೆ. ಎಲ್ಲಿದ್ದರೂ ಕೆಲಸ ಮಾಡುವೆ.
 ಅಲೋಕಕುಮಾರ, ಐಜಿಪಿ, ಈಶಾನ್ಯ ವಲಯ

ವರ್ಗಾವಣೆಯಾಗಬಾರದಿತ್ತು
ಅಲೋಕಕುಮಾರ ಐಜಿಪಿಯಾಗಿ ಬಂದ ನಂತರ ಅಪರಾಧ ಪ್ರಕರಣಗಳು ನಿಯಂತ್ರಣಗೊಂಡಿದ್ದವು. ದಿಢೀರ್‌ನೆ ವರ್ಗಾವಣೆಯಾಗುತ್ತದೆ ಎಂಬುದಾಗಿ ಊಹಿಸಿಕೊಂಡಿರಲಿಲ್ಲ. ದಕ್ಷ ಅಧಿಕಾರಿಯಾಗಿದ್ದರಿಂದ ವರ್ಗಾವಣೆ ವಿರೋಧಿಸಿ ಹೋರಾಟ ಕೈಗೊಳ್ಳಲಾಗುವುದು.
 ಎಂ.ಎಸ್‌.ಪಾಟೀಲ ನರಿಬೋಳ, ಅಧ್ಯಕ್ಷರು,ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next