ನ್ಯೂಯಾರ್ಕ್: ವಿಶ್ವದ ನಂಬರ್ ವನ್ ಹಾಗೂ ನೆಚ್ಚಿನ ಆಟಗಾರ್ತಿ ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಛಾತಿಗೆ ತಕ್ಕ ಪ್ರದರ್ಶನ ನೀಡಿ ಮೊದಲ ಬಾರಿಗೆ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ವನಿತಾ ಸಿಂಗಲ್ಸ್ ಪ್ರಶಸ್ತಿಯನ್ನೆತ್ತಿದರು. ಅವರು ಟ್ಯುನೀಶಿಯಾದ ಓನ್ಸ್ ಜೆಬ್ಯುರ್ ವಿರುದ್ಧ 6-2, 7-6 (7-5) ಅಂತರದ ನೇರ ಸೆಟ್ ಗೆಲುವು ಸಾಧಿಸಿದರು.
ಇದು ಐಗಾ ಸ್ವಿಯಾಟೆಕ್ ಗೆದ್ದ 3ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ. ಇದಕ್ಕೂ ಮೊದಲು ಎರಡು ಸಲ ಫ್ರೆಂಚ್ ಓಪನ್ ಟ್ರೋಫಿಯನ್ನೆತ್ತಿದ್ದರು. ಇದರಲ್ಲೊಂದು ಪ್ರಶಸ್ತಿ ಈ ವರ್ಷವೇ ಒಲಿದಿತ್ತು.
ಇನ್ನೊಂದೆಡೆ ಓನ್ಸ್ ಜೆಬ್ಯುರ್ ಪಾಲಿಗೆ ಕೈತಪ್ಪಿದ ಸತತ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಇದಾಗಿದೆ. ಕಳೆದ ವಿಂಬಲ್ಡನ್ ಫೈನಲ್‌ನಲ್ಲೂ ಅವರು ಪರಾಭವಗೊಂಡಿದ್ದರು.
“ದಿಸ್ ಈಸ್ ನ್ಯೂಯಾರ್ಕ್. ಇಟ್ ಈಸ್ ಲೌಡ್. ಸೋ ಕ್ರೇಝಿ. ಇದನ್ನೆಲ್ಲ ನಾನು ಮಾನಸಿಕವಾಗಿ ನಿಭಾಯಿಸಿದೆ’ ಎಂಬುದಾಗಿ 21 ವರ್ಷದ ಐಗಾ ಸ್ವಿಯಾಟೆಕ್ ಸಂಭ್ರಮಿಸಿದರು. ಇದು ಪೋಲೆಂಡ್ ಆಟಗಾರ್ತಿಗೆ ಒಲಿದ ಮೊದಲ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಎಂಬುದು ವಿಶೇಷ.
ಓನ್ಸ್ ಜೆಬ್ಯೂರ್ ವಿಂಬಲ್ಡನ್ ಫೈನಲ್ ತಲುಪಿದ ಮೊದಲ ಅರಬ್ ಮೂಲದ ವನಿತೆ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ನ್ಯೂಯಾರ್ಕ್‌ನಲ್ಲೂ ಮೈಲುಗಲ್ಲೊಂದನ್ನು ನೆಟ್ಟರು. ಯುಎಸ್ ಓಪನ್ ಪ್ರಶಸ್ತಿ ಸುತ್ತಿಗೆ ನೆಗೆದ ಆಫ್ರಿಕಾದ ಮೊದಲ ಆಟಗಾರ್ತಿ ಎನಿಸಿದರು. “ನಾನು ಸೋತಿರಬಹುದು. ಆದರೆ ಮುಂದಿನ ಪೀಳಿಗೆಗೆ ಖಂಡಿತವಾಗಿಯೂ ನಾನೊಂದು ಸ್ಫೂರ್ತಿ ಆಗಲಿದ್ದೇನೆ’ ಎಂಬುದು ಜೆಬ್ಯೂರ್ ಪ್ರತಿಕ್ರಿಯೆ.
ಆಸೀಸ್ ಜೋಡಿಗೆ ಮಿಶ್ರ ಡಬಲ್ಸ್ ಪ್ರಶಸ್ತಿ
ಆಸ್ಟ್ರೇಲಿಯದ 4ನೇ ಶ್ರೇಯಾಂಕದ ಜಾನ್ ಪಿಯರ್-ಸ್ಟಾರ್ಮ್ ಸ್ಯಾಂಡರ್ ಯುಎಸ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು 2001ರ ಬಳಿಕ ಆಸ್ಟ್ರೇಲಿಯಕ್ಕೆ ಒಲಿದ ಮೊದಲ ಯುಎಸ್ ಓಪನ್ ಮಿಕ್ಸೆಡ್ ಡಬಲ್ಸ್ ಕಿರೀಟ. ಹಾಗೆಯೇ ಈ ಜೋಡಿ ಗೆದ್ದ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯೂ ಹೌದು.
ಫೈನಲ್‌ನಲ್ಲಿ ಪಿಯರ್-ಸ್ಯಾಂಡರ್ ಸೇರಿಕೊಂಡು ಕರ್ಸ್ಟನ್ ಫ್ಲಿಪ್‌ಕೆನ್ಸ್ (ಬೆಲ್ಜಿಯಂ)-ಎಡ್ವರ್ಡ್ ರೋಜರ್ ವೆಸಲಿನ್ (ಫ್ರಾನ್ಸ್) ವಿರುದ್ಧ 4-6, 6-4, 10-7 ಅಂತರದಿಂದ ಗೆಲುವು ಸಾಧಿಸಿದರು.ಕರ್ಸ್ಟನ್ ಫ್ಲಿಪ್‌ಕಿನ್ಸ್ ಈ ವರ್ಷವಷ್ಟೇ ಸಿಂಗಲ್ಸ್ ವಿಭಾಗಕ್ಕೆ ಗುಡ್‌ಬೈ ಹೇಳಿದ್ದರು.