ಪ್ಯಾರಿಸ್: ಪೋಲಂಡಿನ 19 ವರ್ಷದ ಟೆನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಟೆನಿಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಫೈನಲ್‌ನಲ್ಲಿ 21 ವರ್ಷದ ಸೋಫಿಯಾ ಕೆನಿನ್‌ರನ್ನು ಸೋಲಿಸಿ, ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಪೋಲಂಡಿನ ಕ್ರೀಡಾಪಟುವೊಬ್ಬರು ಗೆದ್ದ ಮೊದಲ ಗ್ರ್ಯಾನ್‌ಸ್ಲಾಮ್ ಕಿರೀಟ!
ಅಲ್ಲದೇ ಮೊನಿಕಾ ಸೆಲೆಸ್ ನಂತರ ಫ್ರೆಂಚ್ ಓಪನ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿಯೂ ಹೌದು.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್ ಏಕಪಕ್ಷೀಯವಾಗಿಯೇ ನಡೆಯಿತು. ಅಮೆರಿಕಾದ ನಾಲ್ಕನೇ ಶ್ರೇಯಾಂಕಿತೆ ಸೋಫಿಯಾ ಕೆನಿನ್‌ರನ್ನು ಪೋಲೆಂಡ್ ಆಟಗಾರ್ತಿ ಸ್ವಿಯಾಟೆಕ್ 6-4, 6-1ರಿಂದ ಸೋಲಿಸಿದರು. ಅಲ್ಲಿಗೆ ಪೋಲೆಂಡ್ ಪಾಲಿಗೆ ಟೆನಿಸ್ ಜಗತ್ತಿನಲ್ಲಿ ಹೊಸತೊಂದು ಅಧ್ಯಾಯವನ್ನು ಸ್ವಿಯಾಟೆಕ್ ಆರಂಭಿಸಿದರು.
ಈ ಬಾರಿ ಇಡೀ ಫ್ರೆಂಚ್ ಓಪನ್ ಕೂಟದಲ್ಲಿ ಒಂದೇ ಒಂದು ಸೆಟ್ ಅನ್ನು ಸ್ವಿಯಾಟೆಕ್ ಕಳೆದುಕೊಳ್ಳದೇ ಪ್ರಶಸ್ತಿ ಜಯಿಸಿದ್ದು ವಿಶೇಷ. ಫೈನಲ್‌ನ ಎರಡನೇ ಸೆಟ್‌ನಲ್ಲಿ ಎಡತೊಡೆಗೆ ಗಾಯ ಮಾಡಿಕೊಂಡಿದ್ದ ಅವರು ಚಿಕಿತ್ಸೆ ಪಡೆದು ಆಟ ಮುಂದುವರಿಸಿದರು. ಅಂತಿಮವಾಗಿ ಈ ಎಲ್ಲ ಪರಿಶ್ರಮಕ್ಕೆ ಫಲ ಲಭಿಸಿತು.