ಹುಣಸೂರು: ಬಿಜೆಪಿ ಪಕ್ಷವು ಜಾತಿ ಧರ್ಮವನ್ನು ಒಡೆಯುವ ಮೂಲಕ ಮತಯಾಚಿಸಿ ರಾಜಕಾರಣ ಮಾಡುತ್ತದೆ. ಆದರೆ ಜೆಡಿಎಸ್ ಎಲ್ಲರನ್ನೂ ಒಗ್ಗಡಿಸುವ ಮೂಲಕ ರಾಜಕಾರಣ ಮಾಡುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಹುಣಸೂರು ತಾಲೂಕು ಜೆಡಿಎಸ್ ಪಕ್ಷವು ಸರ್ವಧರ್ಮಗಳ ಸಮನ್ವಯ ಸಮಿತಿ ಸಹಯೋಗದೊಂದಿಗೆ ವಿ ಐ ಕೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿದ್ದ ಸಂಸದ ಪ್ರಜ್ವಲ್ ರೇವಣ್ಣ ರಂಜಾನ್ ಹಿನ್ನೆಲೆಯಲ್ಲಿ ಸಿಹಿ ವಿತರಿಸಿ, ಸೇವಿಸುವ ಮೂಲಕ ಇಫ್ತಿಯಾರ್ ಕೂಟಕ್ಕೆ ಚಾಲನೆ ನೀಡಿದರು.
ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಈ ದೇಶದಲ್ಲಿ ಎಲ್ಲ ಧರ್ಮದವರು ಸಮಾನರು. ಎಲ್ಲರಿಗೂ ಬದುಕುವ ಹಕ್ಕಿದೆ. ಈ ಇಫ್ತಿಯಾರ್ ಕೂಟವನ್ನು ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲರೂ ಸೇರಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ. ಬಿಜೆಪಿ ಪಕ್ಷವು ಧರ್ಮ-ಧರ್ಮಗಳ ನಡುವೆ ಕಂದಕವನ್ನು ಉಂಟು ಮಾಡುತ್ತಿದೆ. ಇದನ್ನು ನಾವೆಲ್ಲರೂ ಸೇರಿ ಸರಿ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ಹುಣಸೂರು ತಾಲೂಕಿನಲ್ಲಿ ಜೆಡಿಎಸ್ ಪಕ್ಷವು ಸದೃಢವಾಗಿದೆ. ಜೆಡಿಎಸ್ ಪಕ್ಷದ ಕೆಲ ಪ್ರಮುಖ ಮುಖಂಡರು ತಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾದರೆ ಕಾರ್ಯಕರ್ತರು ಇನ್ನೂ ಹೆಚ್ಚಿನ ಹುಮ್ಮಸ್ಸಿನಿಂದ ಒಗ್ಗಟ್ಟಾಗಿ ಪಕ್ಷಕ್ಕಾಗಿ ದುಡಿಯುತ್ತಾರೆ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಶೀಘ್ರದಲ್ಲೇ ಮುಖಂಡರ ಸಭೆ ನಡೆಸಲಿದ್ದಾರೆ ಎಂದರು.
ಇನ್ನು ಈ ಭಾಗದ ತಂಬಾಕು ಸಮಸ್ಯೆಯ ಬಗ್ಗೆ ನನಗೆ ಅರಿವಿದೆ. ನಾನು ಸಹ ಲೋಕಸಭೆಯಲ್ಲಿ ಹಲವಾರು ಬಾರಿ ಧ್ವನಿ ಎತ್ತಿದ್ದೇನೆ. ಇಲ್ಲಿಯವರೆಗಿನ ತಂಬಾಕು ಸಮಸ್ಯೆಯನ್ನು ಬಗೆಹರಿಸಿದವರೆಂದರೆ ಮಾಜಿ ಪ್ರಧಾನಿ ದೇವೇಗೌಡರು . ಇವರು ತಂಬಾಕು ಬೆಳೆಗಾರರ ಬಗ್ಗೆ ಧ್ವನಿ ಎತ್ತದೇ ಇದ್ದಿದ್ದರೆ ತಂಬಾಕು ಬೆಳೆಗಾರರೇ ಇರುತ್ತಿರಲಿಲ್ಲ.ಈಗಿನ ಕೇಂದ್ರ ಸರ್ಕಾರ ಹೆಚ್ಚಾಗಿ ತಂಬಾಕು ಬೆಳೆದರು ದಂಡ ಹಾಕುತ್ತಿದೆ. ಕಡಿಮೆ ಬೆಳೆದರು ದಂಡ ಹಾಕುತ್ತಾರೆ, ದೇವೇಗೌಡರು ಹೋರಾಟ ಮಾಡಿದ ನಂತರವೇ ಆಂಧ್ರ ಮಾದರಿಯಲ್ಲಿ ತಂಬಾಕನ್ನು ಖರೀದಿ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಅಭಿವೃದ್ದಿಯ ಹೆಸರಿನಲ್ಲಿ ಮತ ಕೇಳುವುದಿಲ್ಲ. ಧರ್ಮ ವಿಭಜನೆಯ ಆಧಾರದ ಮೇಲೆ ಅವರು ಮತ ಪಡೆಯುವ ಹುನ್ನಾರ ನಡುಸುತ್ತಲೆ ಇದ್ದಾರೆ. ಆದರೆ ಜೆಡಿಎಸ್ ಪಕ್ಷವು ಎಲ್ಲಾ ಜಾತಿ, ಜನಾಂಗ,ಧರ್ಮದವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆಂದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಹಳ್ಳಿ ಸೋಮಶೇಖರ್. ಉಪಾಧ್ಯಕ್ಷ ದೇವರಾಜ ಒಡೆಯರ್. ಮುಖಂಡರಾದ ಗೋವಿಂದೇಗೌಡ. ಗಣೇಶ್ ಗೌಡ. ರಾಜುಗೌಡ. ಮುಸ್ಲಿಂ ಮುಖಂಡರಾದ ಮಹಮದ್ ಶಫಿವುಲ್ಲಾ, ಅಪ್ರೋಜ್ ಖಾನ್,ನಸ್ರುಲ್ಲಾ, ತಾಲೂಕು ಜೆಡಿಎಸ್ ಹುಣಸೂರು ನಗರದ ಚರ್ಚ್ ಫಾದರ್ ,ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ನಗರಸಭಾ ಸದಸ್ಯರುಗಳು,ಕಾರ್ಯಕರ್ತರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.