ಪಣಜಿ, ನ. 25: ಅನಿಮೇಷನ್ ಸಿನಿಮಾಗಳ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ಹಾಗೂ ಸಹಯೋಗ ಸಿಗಬೇಕಿದೆ ಎಂದು ಹೇಳಿದ್ದಾರೆ ಹೆಸರಾಂತ ನಿರ್ದೇಶಕ ಸೂಜಿತ್ ಸರ್ಕಾರ್.
ಇಫಿ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಅವರು, ʼನಮ್ಮ ದೇಶದಲ್ಲಿ ಪ್ರತಿಭೆಗೆ ಹಾಗೂ ಆವಿಷ್ಕಾರಗಳಿಗೆ ಯಾವುದೇ ಕೊರತೆ ಇಲ್ಲ. ಅದನ್ನು ಕೈಗೊಳ್ಳುವವರಿಗೆ ಸಹಕಾರ ಸಿಗಬೇಕಿದೆ ಅಷ್ಟೇ. ಈ ಮಾತಿಗೆ ಆನಿಮೇಷನ್ ಸಿನಿಮಾ ಕ್ಷೇತ್ರವೂ ಅನ್ವಯಿಸುತ್ತದೆʼ ಎಂದರು.
ಭಾರತೀಯ ಸಿನಿಮಾಗಳಲ್ಲಿ ಆನಿಮೇಷನ್ ತಂತ್ರಜ್ನಾನ ಬಳಕೆ ಹೆಚ್ಚುತ್ತಿರುವ ಬಗ್ಗೆ ಮಾತನಾಡುತ್ತಾ, ʼಆನಿಮೇಷನ್ ಸಿನಿಮಾ ನಿರ್ಮಾಣಕ್ಕೆ ಹೊಸ ನೆಲೆಗೆ ಕೊಂಡೊಯ್ಯುವಂಥ ಪ್ರತಿಭೆ ಮತ್ತು ಆವಿಷ್ಕಾರಗಳು ಭಾರತೀಯ ಸಿನಿಮಾ ಉದ್ಯಮದಲ್ಲಿವೆʼ ಎಂದು ಅವರು ಉಲ್ಲೇಖಿಸಿದರು.
ಅನಿಮೇಷನ್ ಸಿನಿಮಾಗಳು ಹಾಗೂ ಅನಿಮೇಷನ್ ತಂತ್ರಜ್ನಾನದ ಮೂಲಕ ಕಥೆ ಹೇಳುವ ಕ್ರಮಗಳನ್ನು ಬೆಳೆಸಬೇಕಾದದ್ದು, ಜನಪ್ರಿಯಗೊಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಡಿಸ್ನಿ, ಪಿಕ್ಸರ್ ಅಂಥ ಅಂತಾರಾಷ್ಟ್ರೀಯ ಸ್ಟುಡಿಯೋಗಳು ಭಾರತದ ಪ್ರತಿಭೆಗಳನ್ನು ಬಳಸುತ್ತಿವೆ. ಭಾರತದಲ್ಲಿ ಆನಿಮೇಷನ್ ಉದ್ಯಮ ಬೆಳೆಯಬೇಕೆಂದರೆ ಅಂಥ ಪ್ರತಿಭೆಗಳನ್ನು ಇಲ್ಲಿ ಬಳಸಿಕೊಳ್ಳಬೇಕು. ಅದರೊಂದಿಗೇ ಆನಿಮೇಷನ್ ಸಿನಿಮಾಗಳ ಪ್ರದರ್ಶನಕ್ಕೂ ಸಿನಿಮಾ ಮಂದಿರಗಳಲ್ಲೂ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು ಸರ್ಕಾರ್.
ಬ್ರಹ್ಮ ಕುಮಾರಿ ಸಂಸ್ಥೆಯ ಸಂಸ್ಥಾಪಕರಾದ ದಾದಾ ಲೇಖ್ರಾಜ್ ಕೃಪಲಾನಿಯವರ ಕುರಿತಾದ ಆನಿಮೇಷನ್ ಡಾಕ್ಯು ಫೀಚರ್ “ದಿ ಲೈಟ್; ಎ ಜರ್ನಿ ವಿಥಿನ್ʼ ನ ಕ್ರಿಯೇಟಿವ್ ಪ್ರೊಡ್ಯೂಸರ್ ಆದ ಬಗ್ಗೆಯೂ ವಿವರಿಸಿ, ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವಂಥ ಬ್ರಹ್ಮ ಕುಮಾರಿಯವರ ಸಲಹೆ, ಮಾತು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ಈ ಸಿನಿಮಾದ ಮೂಲಕ ಮತ್ತಷ್ಟು ಹೊಸ ಸಾಧ್ಯತೆಗಳನ್ನು ಹುಡುಕುವುದು ನನ್ನ ಉದ್ದೇಶʼ ಎಂದು ಹೇಳಿದರು ಸೂಜಿತ್ ಸರ್ಕಾರ್. ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಈ ವರ್ಷ ಏಳು ಆನಿಮೇಷನ್ ಸಿನಿಮಾಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ.